ಕೋಲಾರ : ಕೋಲಾರ ಲೋಕಸಭಾ ಕ್ಷೇತ್ರ ಸೇರಿ ಸುತ್ತಮುತ್ತ ಕಾಂಗ್ರೆಸ್ ಸೋತರೆ ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಕುರ್ಚಿಗೆ ಸಂಚಕಾರ ಬರಲಿದೆ. ಹೀಗಾಗಿ ಕುರುಬರು ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವಂತೆ ನೋಡಿಕೊಳ್ಳಬೇಕು ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹೇಳಿದರು.
ನಗರದ ಹಾಲಿಸ್ಟರ್ ಭವನದಲ್ಲಿ ಗುರುವಾರ ಕುರುಬ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್.ಅಶೋಕ್ ಅವರು ಈ ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರ ಪತನ ಆಗುವ ಜತೆಗೆ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲಾಗುತ್ತದೆ ಎಂದು ಹೇಳುತ್ತಿದ್ದಾರೆ. ಇದಕ್ಕೆಲ್ಲ ಅವಕಾಶ ಮಾಡಿಕೊಡಬೇಡಿ ಎಂದರು.
ಹಣ ನೀಡಿ ಮುಖ್ಯಮಂತ್ರಿ ಆಗುವುದು ಬೇರೆ, ಧೈರ್ಯ ಮತ್ತು ಸ್ವಂತ ಶ್ರಮದಿಂದ ಮುಖ್ಯಮಂತ್ರಿ ಆಗೋದು ಬೇರೆ. ಸಿದ್ದರಾಮಣ್ಣ ನಿಷ್ಠಾವಂತ, ಧೈರ್ಯವಂತ ರಾಜಕಾರಣಿ. ಆಸ್ತಿ, ಹಣ ಇದ್ದಿದ್ದರೆ ಇ.ಡಿ, ಐಟಿಯವರು ಅವರನ್ನು ಬಿಡುತ್ತಿರಲಿಲ್ಲ. ಪ್ರಾಮಾಣಿಕ ಮುಖ್ಯಮಂತ್ರಿ ಕೇಜ್ರಿವಾಲ್ ಅವರನ್ನೇ ಬಿಡಲಿಲ್ಲ. ಆದರೂ ಸಿದ್ದರಾಮಯ್ಯ ಪ್ರತಿದಿನ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡುತ್ತಿದ್ದಾರೆ. ಇದಕ್ಕೆಲ್ಲ ಅವರ ನಿಷ್ಠಾವಂತ ರಾಜಕಾರಣವೇ ಕಾರಣ ಎಂದರು.
ಇಂಥ ನಾಯಕತ್ವ ಉಳಿಸುವುದು ಎಲ್ಲರ ಕರ್ತವ್ಯ. ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂದು ಏನೇನೋ ಮಾಡುತ್ತಿದ್ದಾರೆ. ಅವರ ಬಳಿ ೨೦೦-೩೦೦ ಶರ್ಟ್, ಪಂಚೆಗಳಿವೆ ಅಷ್ಟೇ. ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೇ ರಾಜಕಾರಣ ಮಾಡಿರುವ ಏಕೈಕ ವ್ಯಕ್ತಿ ಸಿದ್ದರಾಮಯ್ಯ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಗೆಲುವಿಗೆ ಸಮುದಾಯದವರು ನೆರವಾಗಬೇಕಿದ್ದು, ಬೇರೆ ಅಭ್ಯರ್ಥಿ ಗೆಲ್ಲಿಸಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಕಷ್ಟಕ್ಕೆ ಈಡಾಗುತ್ತಾರೆ ಎಂದರು.
ಕುರುಬ ಸಮುದಾಯದವರೆಲ್ಲ ಒಮ್ಮನಸಿನಿಂದ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಿದ್ದು, ಬೇರೆ ಮನಸು ಮಾಡಿದರೆ ಸಿದ್ದರಾಮಣ್ಣಗೆ ಸಮಸ್ಯೆ ಆಗುತ್ತದೆ. ಇದು ಗೌತಮ್ ಅಥವಾ ಬೈರತಿ ಸುರೇಶ್ ಚುನಾವಣೆ ಅಲ್ಲ. ಸಿದ್ದರಾಮಯ್ಯ ಚುನಾವಣೆ ಎಂದೇ ಮತ ಹಾಕಿ. ಗೌತಮ್ ಗೆದ್ದರೆ ಮುಖ್ಯಮಂತ್ರಿ, ನನ್ನನ್ನು ಗೆಲ್ಲಿಸಿದಂತೆ. ಬೇರೆ ಅಭ್ಯರ್ಥಿ ಗೆದ್ದರೆ ಸಿದ್ದರಾಮಯ್ಯ ಸ್ಥಾನಕ್ಕೆ ತೊಂದರೆ. ಇದಕ್ಕೆ ಅವಕಾಶ ಬೇಡ ಎಂದು ಮನವಿ ಮಾಡಿದರು.