ಅಗತ್ಯ ಅನುದಾನ ಬಿಡುಗಡೆಗೊಳಿಸಲು ಸಚಿವ ಶರಣ ಪ್ರಕಾಶ್ ಪಾಟೀಲ್ ಭರವಸೆ

KannadaprabhaNewsNetwork |  
Published : Jun 12, 2025, 01:28 AM IST
ಚಿಕ್ಕಮಗಳೂರಿನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಭೇಟಿ ನೀಡಿದ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆ ಸಚಿವ ಡಾ.ಶರಣ ಪ್ರಕಾಶ ಆರ್.ಪಾಟೀಲ್ ಅವರು ಅಭಿವೃದ್ಧಿ ವೀಕ್ಷಣೆ ಮಾಡಿದರು. | Kannada Prabha

ಸಾರಾಂಶ

ಚಿಕ್ಕಮಗಳೂರು ಹೊರವಲಯದ ಮೆಡಿಕಲ್ ಕಾಲೇಜು ಹಾಗೂ ನಿರ್ಮಾಣ ಹಂತದಲ್ಲಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್‌ ಆಸ್ಪತ್ರೆ ಕಾಮಗಾರಿ ಆದಷ್ಟು ಬೇಗನೆ ಪೂರ್ಣಗೊಳಿಸಿ ಜನರಿಗೆ ಅನುಕೂಲ ಒದಗಿಸಿ ಕೊಡಬೇಕೆಂದು ಗುತ್ತಿಗೆದಾರರು ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವೈದ್ಯಕೀಯ ಶಿಕ್ಷಣ ಸಚಿವರಿಂದ ಮೆಡಿಕಲ್ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ಪರಿಶೀಲನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಚಿಕ್ಕಮಗಳೂರು ಹೊರವಲಯದ ಮೆಡಿಕಲ್ ಕಾಲೇಜು ಹಾಗೂ ನಿರ್ಮಾಣ ಹಂತದಲ್ಲಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್‌ ಆಸ್ಪತ್ರೆ ಕಾಮಗಾರಿ ಆದಷ್ಟು ಬೇಗನೆ ಪೂರ್ಣಗೊಳಿಸಿ ಜನರಿಗೆ ಅನುಕೂಲ ಒದಗಿಸಿ ಕೊಡಬೇಕೆಂದು ಗುತ್ತಿಗೆದಾರರು ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬುಧವಾರ ಮೊದಲು ಮೆಡಿಕಲ್ ಕಾಲೇಜು ಪಕ್ಕದಲ್ಲೇ ನಿರ್ಮಾಣವಾಗುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ತಾಯಿ ಮಕ್ಕಳ ಆಸ್ಪತ್ರೆಗೆ ತೆರಳಿ ಕಾಮಗಾರಿ ಪರಿಶೀಲನೆ ನಡೆಸಿದರು. ಈ ವೇಳೆ ನೆಲ ಅಂತಸ್ತನ್ನು ಯಾವ ಉದ್ದೇಶಕ್ಕೆ ಬಳಸ ಲಾಗಿದೆ. ಮೊದಲ ಹಾಗೂ 2ನೇ ಮಹಡಿಯಲ್ಲಿ ಯಾವ ವಿಭಾಗ ತೆರೆಯಲು ಉದ್ದೇಶಿಸಲಾಗಿದೆ ಎಂಬ ಬಗ್ಗೆ ಮಾಹಿತಿ ಪಡೆದರು. ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ವಾರ್ಡ್‌ಗಳ ಸಂಖ್ಯೆ ಹೆಚ್ಚಳಕ್ಕೆ ಅವಕಾಶವಿದ್ದರೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಮೆಡಿಕಲ್ ಕಾಲೇಜಿನ ಸಭಾಂಗಣಲ್ಲಿ ಮೆಡಿಕಲ್ ಕಾಲೇಜು ಡೀನ್, ಜಿಲ್ಲಾಸ್ಪತ್ರೆ ಎಂ.ಎಸ್. ಸೇರಿದಂತೆ ಮೆಡಿಕಲ್ ಕಾಲೇಜಿನ ಅಧಿಕಾರಿ ವರ್ಗದವರೊಂದಿಗೆ ಸಭೆ ನಡೆಸಿದ ಸಚಿವರು ಮೆಡಿಕಲ್ ಕಾಲೇಜು ಸೇರಿದಂತೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸಂಬಂಧಿಸಿದ ವರದಿ ಪಡೆದರು. ಯಾವ ವಿಭಾಗಕ್ಕೆ ಎಷ್ಟು ಹುದ್ದೆಗಳು ಮಂಜೂರಾಗಿವೆ. ಮಂಜೂರಾಗಿರುವ ಹುದ್ದೆಗಳಲ್ಲಿ ಎಷ್ಟು ಖಾಲಿ ಉಳಿದಿವೆ. ಹೊರಗುತ್ತಿಗೆ ಆಧಾರದ ಮೇಲೆ ಎಷ್ಟು ಜನರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇದರೊಂದಿಗೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಯಾವ ಕ್ರಮಕೈಗೊಳ್ಳಲಾಗಿದೆ ಎಂದು ಮೆಡಿಕಲ್ ಕಾಲೇಜು ಡೀನ್ ಡಾ. ಹರೀಶ್ ಅವರನ್ನು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಾ.ಹರೀಶ್, ಈಗಾಗಲೇ ಮೆಡಿಕಲ್ ಕಾಲೇಜಿಗೆ ಸಂಬಂಧಿಸಿದಂತೆ ಸೂಕ್ತ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಕೆಲ ಕಾಯಂ ನೌಕರರ ನೇಮಕ ನಡೆದಿದೆ. ಹೊರಗುತ್ತಿಗೆ ಆಧಾರದ ಮೇಲೂ ಎಲ್ಲ ವಿಭಾಗಕ್ಕೂ ನೇಮಕ ಮಾಡಿಕೊಳ್ಳಲಾಗಿದೆ. ಖಾಲಿ ಇರುವ ಹುದ್ದೆಗಳ ಭರ್ತಿಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಶರಣ ಪ್ರಕಾಶ್ ಪಾಟೀಲ್, ಚಿಕ್ಕಮಗಳೂರು ಮೆಡಿಕಲ್ ಕಾಲೇಜು ಕಾಮಗಾರಿ ಶೇ. ೯೦ರಷ್ಟು ಪೂರ್ಣಗೊಂಡಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ಸಂಪೂರ್ಣ ಕಾಮಗಾರಿ ಮುಕ್ತಾಯ ವಾಗಲಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಶೇ. ೭೫ರಷ್ಟು ಪೂರ್ಣಗೊಂಡಿದೆ ಎಂದು ತಿಳಿಸಿದರು.

ಚಿಕ್ಕಮಗಳೂರಿನಲ್ಲಿ ₹187 ಕೋಟಿ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಗೊಳ್ಳುತ್ತಿದ್ದು, ಈಗಾಗಲೇ ₹105 ಕೋಟಿ ಬಿಡುಗಡೆಯಾಗಿದೆ. ಉಳಿದ ₹82 ಕೋಟಿ ಬಿಡುಗಡೆಗೆ ಕ್ರಮ ಕೈಗೊಳ್ಳವ ಭರವಸೆ ನೀಡಿದರು.

ಚಿಕ್ಕಮಗಳೂರು ಮೆಡಿಕಲ್ ಕಾಲೇಜಿನಲ್ಲಿ ನೀರಿನ ಸಮಸ್ಯೆಯಿದೆ. ಕೊಳವೆಬಾವಿ ಕೊರೆಯಿಸಿದರೂ ಬೇಕಾದಷ್ಟು ನೀರು ಸಿಗುತ್ತಿಲ್ಲ. ಹೀಗಾಗಿ ಮಳೆ ನೀರು ಕೊಯ್ಲು ಮೂಲಕ ಮೆಡಿಕಲ್ ಕಾಲೇಜಿಗೆ ಸಮರ್ಪಕ ನೀರು ಪೂರೈಕೆ ಮಾಡಲಾಗುತ್ತದೆ. ಇದಕ್ಕಾಗಿ ₹3.50 ಕೋಟಿ ವೆಚ್ಚದಲ್ಲಿ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ವೇಳೆ ಶಾಸಕ ಎಚ್.ಡಿ.ತಮ್ಮಯ್ಯ, ಜಿ.ಎಚ್.ಶ್ರೀನಿವಾಸ್, ಭದ್ರ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಮೆಡಿಕಲ್ ಕಾಲೇಜು ಡೀನ್ ಡಾ.ಹರೀಶ್, ಡಾ.ಮೋಹನ್ ಕುಮಾರ್ ಇದ್ದರು.-- ಬಾಕ್ಸ್‌---ಮನಸ್ಸಿಗೆ ಬಂದಂತೆ ತನಿಖಾ ಸಂಸ್ಥೆಗಳ ಬಳಕೆ

ಚಿಕ್ಕಮಗಳೂರು: ಕೇಂದ್ರದ ಬಿಜೆಪಿ ಸರ್ಕಾರ ತನ್ನ ಎಲ್ಲಾ ತನಿಖಾ ಸಂಸ್ಥೆಗಳನ್ನು ಮನಸ್ಸಿಗೆ ಬಂದಂತೆ ಬಳಸುತ್ತಿದೆ. ಈ ಮೂಲಕ ವಿರೋಧಪಕ್ಷಗಳನ್ನು ಹೆದರಿಸಲು ನೋಡುತ್ತಿದೆ. ಆದರೆ ಇಲ್ಲಿ ಹೆದರುವವರು ಯಾರು ಇಲ್ಲ ಎಂದು ಸಚಿವ ಶರಣಪ್ರಕಾಶ ಪಾಟೀಲ್ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣದಲ್ಲಿ ಪ್ರಚಾರ ಪಡೆಯಲು ಈ ರೀತಿ ಮಾಡುತ್ತಿದ್ದಾರೆ ಎಂದು ದೂರಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿವಿಧಡೆ ಇಡಿ ದಾಳಿ ನಡೆಸಿದೆ. ನಮ್ಮ ಶಾಸಕರು ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಅವರ ಎಲ್ಲಾ ರೀತಿ ತನಿಖೆಗೂ ನಾವು ಸಹಕಾರ ನೀಡುತ್ತೇವೆ ಎಂದರು.

ಕಾಂಗ್ರೆಸ್ ನಾಯಕ ಭರತ್ ರೆಡ್ಡಿ ಮನೆಯಲ್ಲಿ ಸಿಕ್ಕಿರುವ ಕೈಬರಹದ ಪತ್ರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, ಪತ್ರ ಸೃಷ್ಟಿ ಮಾಡುವಲ್ಲಿ ಬಿಜೆಪಿಯವರು ನಿಸ್ಸೀಮರು ಎಂದು ಹೇಳಿದರು.

ಹೈಕಮಾಂಡ್ ನೊಂದಿಗೆ ಸಿಎಂ, ಡಿಸಿಎಂ ಸೇರಿದಂತೆ ರಾಜ್ಯದ ಕಾಂಗ್ರೆಸ್ ಮುಖಂಡರ ಚರ್ಚೆ ಬಾಕಿ ಉಳಿದಿತ್ತು. ಹೀಗಾಗಿ ನಿನ್ನ ಆ ಚರ್ಚೆ ನಡೆದಿದೆ. ಈ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿಯವರೇ ಸ್ಪಷ್ಟನೆ ನೀಡಿದ್ದಾರೆ. ಇದೆ ವೇಳೆ ಹೈಕಮಾಂಡ್ ಜಾತಿ ಗಣತಿ ಬಗ್ಗೆ ಸಲಹೆ ನೀಡಿದ್ದಾರೆ. ಇದರ ಬಗ್ಗೆ ಗುರುವಾರ ಕ್ಯಾಬಿನೆಟ್ ನಲ್ಲಿ ಚರ್ಚೆ ನಡೆಯಲಿದೆ ಎಂದರು.

ರಾಜ್ಯದ ಕಾಂಗ್ರೆಸ್ ಸರ್ಕಾರ ಸ್ಥಿರ ಹಾಗೂ ಜನಪರವಾಗಿ ಕಾರ್ಯ ನಿರ್ವಹಿಸುತ್ತಿದೆ. ಗ್ಯಾರಂಟಿ ಅನುಷ್ಠಾನದಲ್ಲಿಯೂ ನಾವು ಉತ್ತಮ ಸಾಧನೆ ಮಾಡಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಸಕರಾದ ಎಚ್.ಡಿ.ತಮ್ಮಯ್ಯ, ಜಿ.ಎಚ್.ಶ್ರೀನಿವಾಸ್, ಭದ್ರ ಕಾಡಾ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಇದ್ದರು. 11 ಕೆಸಿಕೆಎಂ 3ಚಿಕ್ಕಮಗಳೂರಿನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಭೇಟಿ ನೀಡಿದ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಖಾತೆ ಸಚಿವ ಡಾ.ಶರಣ ಪ್ರಕಾಶ ಆರ್.ಪಾಟೀಲ್ ಅಭಿವೃದ್ಧಿ ವೀಕ್ಷಣೆ ಮಾಡಿದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ