- ರಾಷ್ಟ್ರೀಯ ಹೆದ್ದಾರಿ ಪಕ್ಕ ಲಾರಿ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ದ್ವಿಚಕ್ರ ವಾಹನ ಸವಾರ - ಬೆಂಗಾವಲು ಪಡೆ ವಾಹನದಲ್ಲಿ ಆಸ್ಪತ್ರೆಗೆ ರವಾನೆ, ಸೂಕ್ತ ಚಿಕಿತ್ಸೆಗೂ ಸಚಿವರಿಂದ ಕ್ರಮ
ಕನ್ನಡಪ್ರಭ ವಾರ್ತೆ ದಾವಣಗೆರೆ
ಅಪರಿಚಿತ ವಾಹನ ಡಿಕ್ಕಿ ಹೊಡೆದು ರಸ್ತೆಯಲ್ಲಿ ಗಂಭೀರ ಗಾಯಗೊಂಡು ಬಿದ್ದಿದ್ದ ದ್ವಿಚಕ್ರ ವಾಹನ ಸವಾರರನ್ನು ಕಂಡ ತಕ್ಷಣವೇ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಗಾಯಾಳು ನೆರವಿಗೆ ಧಾವಿಸಿ, ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಘಟನೆ ಹೊರವಲಯದ ಜಿನೆಸಿಸ್ ರೆಸಾರ್ಟ್ ಬಳಿ ಭಾನುವಾರ ಮಧ್ಯಾಹ್ನ ಸಂಭವಿಸಿದೆ.ದಾವಣಗೆರೆ ತಾಲೂಕಿನ ಅಮೃತ ನಗರ ಗ್ರಾಮದ ವಾಸಿಯಾದ ಮಂಜುನಾಥ ಗಾಯಗೊಂಡ ವ್ಯಕ್ತಿ. ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕಿನಲ್ಲಿ ಬರುವಾಗ ಈ ಅಪಘಾತ ಸಂಭವಿಸಿದೆ.
ತಕ್ಷಣವೇ ತಮ್ಮ ವಾಹನವನ್ನು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿಲ್ಲಿಸಿ, ಗಾಯಾಳು ಬೈಕ್ ಸವಾರನನ್ನು ತಮ್ಮ ಬೆಂಗಾವಲು ಪಡೆಯ ವಾಹನದಲ್ಲಿ ಮಲಗಿಸಿ, ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆಂದು ಕಳಿಸಿದರು. ಪಾಲಿಕೆ ಮಾಜಿ ಸದಸ್ಯರಾದ ಜಿ.ಎಸ್.ಮಂಜುನಾಥ ಗಡಿಗುಡಾಳ, ಆವರಗೆರೆ ಸುರೇಶ, ಕಾಂಗ್ರೆಸ್ ಮುಖಂಡರಾದ ಬಿ.ಕೆ.ಪರಶುರಾಮ ಮಾಗಾನಹಳ್ಳಿ, ಬೂದಾಳ ಬಾಬು ಇತರರು ಗಾಯಾಳುವನ್ನು ವಾಹನಕ್ಕೆ ಎತ್ತಿಹಾಕುವಲ್ಲಿ ನೆರವಾದರು.
ಸುಮಾರು ಹೊತ್ತಿನ ನಂತರ ಗಾಯಾಳು ಮಂಜು ಅವರಿಗೆ ಫೋನ್ ಮೂಲಕ ಸಂಪರ್ಕಿಸಿದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಧೈರ್ಯ ತುಂಬಿದರು. ಶೀಘ್ರ ಗುಣಮುಖ ಆಗುವಂತೆ ಹಾರೈಸಿದರು. ಸಕಾಲಕ್ಕೆ ಮಂಜುನಾಥ್ ನೆರವಿಗೆ ಧಾವಿಸಿದ್ದಕ್ಕಾಗಿ ಕುಟುಂಬದವರು, ಸ್ನೇಹಿತರು ಸಚಿವ ಎಸ್‌ಎಸ್‌ಎಂ ಅವರಿಗೆ ಕೃತಜ್ಞತೆ ಅರ್ಪಿಸಿದ್ದಾರೆ.
-14ಕೆಡಿವಿಜಿ5:
ದಾವಣಗೆರೆಯ ಜಿನೆಸಿಸ್ ರೆಸಾರ್ಟ್ ಬಳಿ ದ್ವಿಚಕ್ರ ವಾಹನ ಸವಾರ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನು ಪಾಲಿಕೆ ಮಾಜಿ ಸದಸ್ಯ ಜಿ.ಎಸ್.ಮಂಜುನಾಥ ಗಡಿಗುಡಾಳ, ಸಚಿವರ ಅಂಗರಕ್ಷಕ ನಟರಾಜ್ ಜೀಪಿನಲ್ಲಿ ಮಲಗಿ, ಚಿಕಿತ್ಸೆಗೆ ರವಾನಿಸಿದರು. -14ಕೆಡಿವಿಜಿ7: