ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಈ ಭಾಗದ ರೈತರ ಬಹುದಿನಗಳ ಕನಸಾಗಿದ್ದ ಕುಲಹಳ್ಳಿ-ಹುನ್ನೂರ ಏತ ನೀರಾವರಿಗೆ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಪ್ರಾಯೋಗಿಕವಾಗಿ ಚಾಲನೆ ನೀಡಿದರು.ಕುಲಹಳ್ಳಿಯ ಮುಖ್ಯ ಘಟಕದಲ್ಲಿ ಬಟನ್ ಒತ್ತುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ರಬಕವಿ-ಬನಹಟ್ಟಿಯ ೩ ಗ್ರಾಮ ಹಾಗೂ ಜಮಖಂಡಿ ತಾಲೂಕಿನ ೧೩ ಗ್ರಾಮಗಳು ಸೇರಿ ಒಟ್ಟು ೧೬ ಗ್ರಾಮಗಳ ೯,೧೬೩ ಹೆಕ್ಟೇರ್ ಪ್ರದೇಶದ ಭೂಮಿಗೆ ಏತ ನೀರಾವರಿ ಯೋಜನೆ ಸಹಕಾರಿಯಾಗಿದೆ ಎಂದರು.
ಮುಂಗಾರು ಬೆಳೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜುಲೈನಿಂದ ಅಕ್ಟೋಬರ್‌ವರೆಗೆ ನಿರಂತರ ನೀರು ಹರಿಯಲಿದೆ. ಒಟ್ಟು ೦.೮೮೮ ಟಿಎಂಸಿಯಷ್ಟು ನೀರು ಸರಬರಾಜು ಆಗಲಿದ್ದು, ಪ್ರತಿ ದಿನ ೦.೦೧೩ ಟಿಎಂಸಿ ನೀರು ನಿರ್ವಹಣೆಯಾಗಲಿದೆ ಎಂದು ತಿಳಿಸಿದರು.ಗುತ್ತಿಗೆದಾರರಿಗೆ ತರಾಟೆ:₹೭೩.೭೫ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಕಾಮಗಾರಿಯು ೨ ವರ್ಷದೊಳಗಾಗಿ ಮುಕ್ತಾಯವಾಗಬೇಕಿತ್ತು. ಬದಲಾಗಿ ೬ ವರ್ಷಗಳಷ್ಟು ವಿಳಂಬಕ್ಕೆ ಗುತ್ತಿಗೆದಾರ ಹಾಗೂ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಇಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದೆಂದು ಸಚಿವರು ಎಚ್ಚರಿಕೆ ನೀಡಿದರು.
ಒಗ್ಗಟ್ಟಿನ ಪ್ರದರ್ಶನ: ರೈತರಿಗೆ ಸಂಬಂಧಿಸಿದ ಕಾಮಗಾರಿಗಳನ್ನು ಪಕ್ಷಾತೀತವಾಗಿ ಒದಗಿಸುವಲ್ಲಿ ಒಂದಾಗಬೇಕೆಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಸೇರಿದಂತೆ ಉಭಯ ಪಕ್ಷಗಳ ಜನಪ್ರತಿನಿಧಿಗಳು ಅಭಯ ಹಸ್ತ ನೀಡುವುದರ ಮೂಲಕ ಒಗ್ಗಟ್ಟಿನ ಪ್ರದರ್ಶಿಸಿದರು.ಜಮಖಂಡಿ ಶಾಸಕ ಜಗದೀಶ ಗುಡಗುಂಟಿ ಮಾತನಾಡಿ, ರೈತರ ಒಳಿತಿಗಾಗಿ ಎರಡೂ ಏತ ನೀರಾವರಿಗಳ ಕಾರ್ಯ ಸಂಪೂರ್ಣಗೊಂಡಿದ್ದು, ರಬಕವಿ-ಬನಹಟ್ಟಿ, ಜಮಖಂಡಿ ಹಾಗೂ ಮುಧೋಳ ತಾಲೂಕುಗಳ ರೈತರ ಭೂಮಿ ಬಂಗಾರವಾಗಿಸುವ ನಿಟ್ಟಿನಲ್ಲಿ ಮಹತ್ವದ ಕಾಮಗಾರಿಗಳು ಕಾರಣವಾಗಿವೆ ಎಂದರು.
ಜೈಕಾರ, ಇದೇ ರಾಜಕೀಯವೆಂದ ಸವದಿ: ಕಾರ್ಯಕ್ರಮದ ಸಂದರ್ಭದಲ್ಲಿ ಆಯಾ ಪಕ್ಷಗಳ ಹಾಲಿ-ಮಾಜಿ ಪ್ರತಿನಿಧಿಗಳು ಮಾತನಾಡುವ ಸಂದರ್ಭ ಕಾರ್ಯಕರ್ತರು ಜೈಕಾರ ಹಾಕುತ್ತಿರುವಾಗ ರಾಜಕೀಯ ಬೇಡವೆಂದರೂ ಇಂತಹ ಘಟನೆಗಳೇ ರಾಜಕೀಯವೆಂದು ಹೇಳಿದಾಗ ಕೆಲ ಹೊತ್ತು ವೇದಿಕೆ ಮೌನವಾಯಿತು.ಸಿದ್ದು ಕೊಣ್ಣೂರ, ಗ್ರಾಪಂ ಅಧ್ಯಕ್ಷೆ ಸಾವಿತ್ರಿ ಪೂಜಾರಿ, ಶ್ರೀಶೈಲ ಕಲ್ಯಾಣಿ, ವಿ.ಎಸ್. ನಾಯಕ, ಶಿವಮೂರ್ತಿ, ಎನ್.ಎಂ. ದಿವಟೆ ಸೇರಿದಂತೆ ಅನೇಕರಿದ್ದರು.ಕುಲಹಳ್ಳಿ ಸಮೀಪದ ಕೃಷ್ಣಾ ನದಿಯಿಂದ ನೀರುಎತ್ತುವ ಸ್ಥಳವಾಗಿದ್ದು, ಮುಖ್ಯ ಕೊಳವೆಯ ಉದ್ದ ೭ ಕಿ.ಮೀ.ನಷ್ಟಿದ್ದು, ನಂತರದ ಪ್ರದೇಶದಲ್ಲಿನ ಕಾಲುವೆ ಕಾಮಗಾರಿ ಶೀಘ್ರದಲ್ಲಿಯೇ ಮುಕ್ತಾಯವಾಗುವಲ್ಲಿ ಸರ್ಕಾರ ಮುತುವರ್ಜಿ ವಹಿಸಬೇಕು. ಈಗಾಗಲೇ 3-4 ಬಾರಿ ವೆಂಕಟೇಶ್ವರ ಏತ ನೀರಾವರಿಯನ್ನು ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ. ಶೀಘ್ರವೇ ಸಿಎಂ ನೇತೃತ್ವದಲ್ಲಿ ಅಧಿಕೃತ ಚಾಲನೆಯೊಂದಿಗೆ ರೈತರಿಗೆ ನೀರು ಒದಗಿಸುವ ಕಾರ್ಯವಾಗಬೇಕು.-ಸಿದ್ದು ಸವದಿ ಶಾಸಕ