-ಕೇಂದ್ರದ ನಿಲುವಿಗೆ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಸ್ವಾಗತ । ಭದ್ರಾ ಮೇಲ್ದಂಡೆಗೆ ಅನುದಾನ ಬಿಡುಗಡೆಗೆ ಆಗ್ರಹ
---------ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕರ್ನಾಟಕದ ನೀರಾವರಿ ಒಳಗೊಂಡಂತೆ ಪ್ರಮುಖ ಯೋಜನೆಗಳ ಕಡತಗಳು ಸಚಿವ ವಿ.ಸೋಮಣ್ಣ ಅವರ ಮುಖಾಂತರವೇ ಬರಬೇಕು ಎಂದು ಕೇಂದ್ರ ಸರ್ಕಾರ ಕೈಗೊಂಡಿರುವ ಮಹತ್ತರ ತೀರ್ಮಾನವನ್ನು ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಸ್ವಾಗತಿಸುತ್ತದೆ.ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಕಳೆದ ಅಕ್ಟೋಬರ್ ಎರಡರ ಗಾಂಧಿ ಜಯಂತಿ ದಿನದಂದು ಚಿತ್ರದುರ್ಗಕ್ಕೆ ಆಗಮಿಸಿದ್ದ ಸಚಿವ ವಿ.ಸೋಮಣ್ಣ, ಅರ್ಧ ತಾಸು ಮಾತುಕತೆ ನಡೆಸಿ ಇನ್ನು ಒಂದುವರೆ ತಿಂಗಳ ಒಳಗಾಗಿ ಭದ್ರಾ ಮೇಲ್ದಂಡೆಗೆ ಕೇಂದ್ರ ಘೋಷಿಸಿರುವ 5300 ಕೋಟಿ ರು. ಅನುದಾನದ ಮೊದಲ ಕಂತು ಬಿಡುಗಡೆ ಮಾಡಿಸುವುದಾಗಿ ಭರವಸೆ ನೀಡಿದ್ದರು. ನಂತರದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ಅಕ್ಟೋಬರ್ 17ರಂದು ಆದೇಶ ಹೊರಡಿಸಿ ಕರ್ನಾಟಕದ ನೀರಾವರಿ ಯೋಜನೆಯ ಪರಿಶೀಲನೆ ನಡೆಸುವ, ಅಧಿಕಾರಿಗಳೊಂದಿಗೆ ಚರ್ಚಿಸುವ ಜವಾಬ್ದಾರಿಯ ವಿ.ಸೋಮಣ್ಣ ಅವರಿಗೆ ವಹಿಸಿದೆ ಎಂದರು.
ಇದೇ ಪ್ರಥಮ ಬಾರಿಗೆ ರಾಜ್ಯದ ಸಚಿವರಿಗೆ ಕೇಂದ್ರ ಸರ್ಕಾರ ಇಂತಹ ಜವಾಬ್ದಾರಿ ನೀಡಿದೆ. ಕರ್ನಾಟಕದ ನೀರಾವರಿ ಯೋಜನೆ ಉಸ್ತುವಾರಿ ಸೋಮಣ್ಣ ಅವರಿಗೆ ವಹಿಸಿರುವುದು ಕೇಂದ್ರದ ಅನುದಾನ ತರುವಲ್ಲಿ ಸೋಮಣ್ಣ ಅವರ ಜವಾಬ್ದಾರಿ ಹೆಚ್ಚಾಗಿದೆ ಎಂದು ಹೋರಾಟ ಸಮಿತಿ ಭಾವಿಸಿದೆ. ಸಂಸದ ಗೋವಿಂದ ಕಾರಜೋಳ ಅವರನ್ನು ಕೇಂದ್ರ ಜಲಶಕ್ತಿ ಸಚಿವಾಲಯದ ಸಂಸದೀಯ ಸಲಹಾ ಸಮಿತಿಗೆ ಕೇಂದ್ರ ಸರ್ಕಾರ ಸದಸ್ಯರನ್ನಾಗಿ ನೇಮಿಸಿದೆ. ಹಾಗಾಗಿ ಕಾರಜೋಳ ಹಾಗೂ ಸಚಿವ ವಿ.ಸೋಮಣ್ಣ ಒಟ್ಟಾಗಿ ಸೇರಿ ಭದ್ರಾ ಮೇಲ್ದಂಡೆ ಅನುದಾನ ಬಿಡುಗಡೆಗೆ ಶ್ರಮಿಸಬೇಕೆಂದು ಲಿಂಗಾರೆಡ್ಡಿ ಆಗ್ರಹಿಸಿದರು.ಭದ್ರಾ ಮೇಲ್ದಂಡೆಗೆ ಕೇಂದ್ರ ಸರ್ಕಾರ ಅನುದಾನ ನೀಡಬೇಕಾದರೆ ಮೊದಲು ಅದು ಕೇಂದ್ರ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದು ನಂತರ ಜಿಓ(ಸರ್ಕಾರಿ ಆದೇಶ) ಆಗಬೇಕು. ತರುವಾಯ ಕೇಂದ್ರ ಜಲಶಕ್ತಿ ಸಚಿವಾಲಯ ಹಾಗೂ ರಾಜ್ಯ ಜಲಸಂಪನ್ನೂಲ ಅಧಿಕಾರಿಗಳು ಎಂಓಯು(ಒಪ್ಪಿಗೆ ಪತ್ರ) ಸಹಿ ಹಾಕಬೇಕು. ನಂತರ ಹಣಕಾಸು ಇಲಾಖೆ ನೆರವು ನೀಡಬೇಕು. ಇದಲ್ಲದೇ ಕೇಂದ್ರ ಅನುದಾನ ನೀಡಬೇಕಾದರೆ ರಾಜ್ಯ ಸರ್ಕಾರ ತನ್ನ ಪಾಲಿನ ಶೇ.40 ರಷ್ಟು ಅನುದಾನ ಕಾಯ್ದಿರಿಸಲು ಸಜ್ಜಾಗಬೇಕಾಗಿದೆ ಎಂದು ಲಿಂಗಾರೆಡ್ಡಿ ಒತ್ತಾಯಿಸಿದರು.
ನೀರಾವರಿ ಯೋಜನೆಯ ಉಸ್ತುವಾರಿ ವಿ.ಸೋಮಣ್ಣ ಅವರಿಗೆ ನೀಡಿರುವುದರಿಂದ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಸಚಿವರ ತುಮಕೂರು ಕಚೇರಿ ಮುಂದೆ ಹಮ್ಮಿಕೊಳ್ಳಲು ಉದ್ದೇಶಿಸಿದ್ದ ತಮಟೆ ಚಳವಳಿಯ ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದಿದೆ. ವಿಧಾನಸಭೆ ಉಪ ಚುನಾಣೆ ನಂತರ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಜೊತೆ ಚರ್ಚಿಸುವುದಾಗಿ ಸೋಮಣ್ಣ ಭರವಸೆ ನೀಡಿದ್ದಾರೆ. ಅಗತ್ಯ ಎನಿಸಿದಲ್ಲಿ ಸಮಿತಿ ನಿಯೋಗದೊಂದಿಗೆ ಕೇಂದ್ರ ಜಲಶಕ್ತಿ ಸಚಿವರ ಭೇಟಿಯಾಗಲು ಸಮಯಾವಕಾಶ ಕಲ್ಪಿಸುವುದಾಗಿ ಸಚಿವರು ತಿಳಿಸಿದ್ದಾರೆ.ಭದ್ರಾ ಮೇಲ್ದಂಡೆಗೆ ಕೇಂದ್ರದ ಅನುದಾನ ಪಡೆಯಲು ಮುಂದಿನ ಕೇಂದ್ರ ಸಚಿವ ಸಂಪುಟದ ಮುಂದೆ ಪ್ರಸ್ತಾವನೆ ಮಂಡಿಸಬೇಕು.ಈಗಾಗಲೇ ರಾಜ್ಯ ಸರ್ಕಾರದಿಂದ ಜಲಶಕ್ತಿ ಸಚಿವಾಲಯದ ಮುಂದೆ ಮರು ಪ್ರಸ್ತಾವನೆ ಸಲ್ಲಿಕೆಯಾಗಿದ್ದು, 1754 ಕೋಟಿ ರು. ಅನುದಾನ ಖೋತಾ ಮಾಡದೆ ಬಜೆಟ್ ಘೋಷಣೆಯಂತೆ 5300 ಕೋಟಿ ರು. ಒದಗಿಸಬೇಕೆಂದು ಲಿಂಗಾರೆಡ್ಡಿ ಕೇಂದ್ರವನ್ನು ಆಗ್ರಹಿಸಿದರು.
ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ್, ರೈತ ಸಂಘದ ಜಿಲ್ಲಾಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ಸರ್ವೋದಯ ಕರ್ನಾಟಕದ ಮುಖಂಡ ಜೆ.ಯಾದವೆರಡ್ಡಿ, ಜೆಡಿಎಸ್ ಕಾರ್ಯಾಧ್ಯಕ್ಷ ಜಿ.ಬಿ.ಶೇಖರ್, ರೈತ ಸಂಘದ ಮುಖಂಡ ಬಸ್ತಿಹಳ್ಳಿ ಸುರೇಶ್ ಬಾಬು, ಮಲ್ಲಾಪುರ ತಿಪ್ಪೇಸ್ವಾಮಿ ಇದ್ದರು.-------------
ಪೋಟೋ: ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.-------
11ಸಿಟಿಡಿ 1