ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಹೆತ್ತವರು ಮಕ್ಕಳಲ್ಲಿರುವ ಅಭಿರುಚಿ, ಆಸಕ್ತಿಯನ್ನು ಅರಿತುಕೊಳ್ಳಬೇಕು. ಅದಕ್ಕೆ ಪೂರಕವಾದ ಶಿಕ್ಷಣವನ್ನು ನೀಡಬೇಕು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಕಾಲದಲ್ಲಿದ್ದು, ಸಮಾಜ, ದೇಶದಲ್ಲಿರುವ ಅವಕಾಶವನ್ನು ಅರಿತು ಉತ್ತಮ ಶಿಕ್ಷಣವನ್ನು ಪಡೆಯಬೇಕು. ಪ್ರತೀ ವ್ಯಕ್ತಿ ಶಿಕ್ಷಿತರಾದಾಗ ಬಡತನ ತನ್ನಿಂದ ತಾನೆ ದೂರವಾಗುತ್ತದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಹೇಳಿದರು.ಬಂಟರ ಸಂಘದ ವತಿಯಿಂದ ಇಲ್ಲಿನ ಪಂಚರತ್ನ ಇಂಟರ್‌ನ್ಯಾಷನಲ್ ಹೋಟೆಲ್‌ನಲ್ಲಿ ಶನಿವಾರ ಆಯೋಜಿಸಲಾದ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಬಂಟರಲ್ಲಿ ಮತಾಂಧತೆ, ಜಾತಿಯ ಬಗ್ಗೆ ಅಂಧಶ್ರದ್ಧೆ ಇಲ್ಲ. ಧರ್ಮನಿಷ್ಠರಾಗಿ ಸಮಗ್ರ ಸಮಾಜವನ್ನು ಜೊತೆಯಾಗಿ ಕೊಂಡೊಯ್ಯುವ ಸ್ವಾವಲಂಬಿ ಸಮಾಜವಾಗಿದೆ ಎಂದರು.
ಬಂಟರ ಸಂಘದ ಅಧ್ಯಕ್ಷ ತಿಮ್ಮಯ್ಯ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತೀ ವರ್ಷ ವಿದ್ಯಾರ್ಥಿವೇತನ ನೀಡುತ್ತಿದ್ದು, ಇದನ್ನು ಸದುಪಯೋಗ ಪಡಿಸಿಕೊಂಡು ಉನ್ನತ ಶಿಕ್ಷಣ ಪಡೆದು ಬದುಕಿನಲ್ಲಿ ಯಶಸ್ಸು ಗಳಿಸಿ ಎಂದು ಕಿವಿಮಾತು ಹೇಳಿದರು.ಇದೇ ಸಂದರ್ಭ ಹಿರಿಯ ಸಾಧಕರಾದ ಡಾ. ವಿನಯ ಕುಮಾರ್ ಹೆಗ್ಡೆ ಹಾಗೂ ವಸಂತ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು ಹಾಗೂ ಜನಪ್ರತಿನಿಧಿಗಳಾಗಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವವರನ್ನು ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ಶರತ್ ಶೆಟ್ಟಿ, ಮಹಿಳಾ ಘಟಕ ಗೌರವ ಅಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ, ಬಂಟರ ಸಂಘದ ಗೌರವ ಸಲಹೆಗಾರರಾದ ಕಾಂತಿಲತಾ ಶೆಟ್ಟಿ, ಪುರಸಭಾ ಮಾಜಿ ಅಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ ಭಾಗವಹಿಸಿದರು. ಕೋಶಾಧಿಕಾರಿ ಎಂ. ಪುರುಷೋತ್ತಮ ಶೆಟ್ಟಿ, ಜೊತೆಕಾರ್ಯದರ್ಶಿಗಳಾದ ಕೆ.ಪಿ. ಸುಚರಿತ ಶೆಟ್ಟಿ, ದಿವಾಕರ ಶೆಟ್ಟಿ, ಪ್ರೇಮನಾಥ ಮಾರ್ಲ, ಜಯಕುಮಾರ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ರಂಜಿತಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಕೆ.ಪಿ. ಸುಚರಿತ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಮಾರು ೫೦೦ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸುಮಾರು ೧೨ ಲಕ್ಷ ರು. ವಿದ್ಯಾರ್ಥಿವೇತನ ವಿತರಿಸಲಾಯಿತು.