ರೈಲ್ವೆ ಹೋರಾಟಕ್ಕೆ ನಾನಾ ಸಂಘಟನೆಗಳ ಬೆಂಬಲ

KannadaprabhaNewsNetwork | Updated : Nov 11 2024, 11:48 PM IST

ಸಾರಾಂಶ

ರಾಮದುರ್ಗ: ಲೋಕಾಪುರ, ರಾಮದುರ್ಗ ಧಾರವಾಡ ರೈಲ್ವೆ ಮಾರ್ಗಕ್ಕೆ ಒತ್ತಾಯಿಸಿ ನ.12 ರಂದು ನಡೆಯುವ ಪ್ರತಿಭಟನೆಗೆ ರಾಮದುರ್ಗದ ವೀರಕ್ತಮಠ ಟ್ರಸ್ಟ್‌, ರಡ್ಡಿ ಸಮಾಜ ಮತ್ತು ರೈಲ್ವೆ ಹೋರಾಟ ಸಮಿತಿ ಪದಾಧಿಕಾರಿಗಳು ಬೆಂಬಲ ವ್ಯಕ್ತಪಡಿಸಿವೆ.

ರಾಮದುರ್ಗ: ಲೋಕಾಪೂರ, ರಾಮದುರ್ಗ ಧಾರವಾಡ ರೈಲ್ವೆ ಮಾರ್ಗಕ್ಕೆ ಒತ್ತಾಯಿಸಿ ನ.12 ರಂದು ನಡೆಯುವ ಪ್ರತಿಭಟನೆಗೆ ರಾಮದುರ್ಗದ ವೀರಕ್ತಮಠ ಟ್ರಸ್ಟ್‌, ರಡ್ಡಿ ಸಮಾಜ ಮತ್ತು ರೈಲ್ವೆ ಹೋರಾಟ ಸಮಿತಿ ಪದಾಧಿಕಾರಿಗಳು ಬೆಂಬಲ ವ್ಯಕ್ತಪಡಿಸಿವೆ.

ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೀರಕ್ತಮಠ ಟ್ರಸ್ಟ್‌ ಅಧ್ಯಕ್ಷ ಪ್ರದೀಪಕುಮಾರ ಪಟ್ಟಣ, ರಾಮದುರ್ಗದ ಸರ್ವಾಂಗೀಣ ಅಭಿವೃದ್ಧಿಗೆ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದ ಪರಿಣಾಮ ಐದ್ಯೋಗಿಕ ಕ್ಷೇತ್ರ ಸೇರಿದಂತೆ ಎಲ್ಲ ರಂಗಗಳಲ್ಲಿ ಹಿಂದುಳಿದಿದ್ದು ಮಂಗಳವಾರ ನಡೆಯುವ ರೈಲ್ವೆ ಹೋರಾಟಕ್ಕೆ ಎಲ್ಲ ರೀತಿ ಬೆಂಬಲ ನೀಡುವುದಾಗಿ ಘೋಷಿಸಿದರು.

ರಡ್ಡಿ ಸಮಾಜದ ಅಧ್ಯಕ್ಷ ಜ್ಞಾನೇಶ್ವರ ಮೇಲಪ್ಪಗೋಳ ಮಾತನಾಡಿ, ರಾಮದುರ್ಗ ತಾಲೂಕಿನಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಸಾರಿಗೆ ಸಮಸ್ಯೆ ಮೂಲ ಕಾರಣವಾಗಿದೆ. ಯಾವುದೇ ರಾಷ್ಟ್ರೀಯ ಹೆದ್ದಾರಿಗಳ ಸಂಪರ್ಕವಿಲ್ಲ. ರೈಲ್ವೆ ಮಾರ್ಗ ಈಗಾಗಲೇ ಲೋಕಾಪೂರವರೆಗೆ ಬಂದಿದ್ದು ಧಾರವಾಡವರೆಗೆ ರೈಲ್ವೆ ಸಂಪರ್ಕ ಮಾಡಿದರೆ ತಾಲೂಕಿನ ಅಭಿವೃದ್ಧಿಗೆ ಪೂರಕವಾಗುತ್ತದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಗಮನಹರಿಸಲು ರಾಮದುರ್ಗದಲ್ಲಿ ನಡೆಯುವ ಹೋರಾಟಕ್ಕೆ ಸಮಾಜದ ಎಲ್ಲರೂ ಪ್ರತಿಭಟನೆಯಲ್ಲಿ ಭಾಗವಹಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.

ರೈಲ್ವೆ ಹೋರಾಟ ಸಮಿತಿಯ ಅಧ್ಯಕ್ಷ ಬಸೀರಹ್ಮದ ಬೈರೆಕದಾರ ಮಾತನಾಡಿ, ಈ ಹಿಂದೆ ಬಾಗಲಕೋಟ ಮತ್ತು ರಾಮದುರ್ಗದಲ್ಲಿ ನಡೆದ ಹೋರಾಟಗಳಲ್ಲಿ ಭಾಗವಹಿಸಿ ರಾಮದುರ್ಗಕ್ಕೆ ರೈಲ್ವೆ ಸಂಪರ್ಕ ಮಾಡಲು ಎಲ್ಲ ಪ್ರಯತ್ನ ಮಾಡಲಾಗಿದೆ. ಈಗ ರಾಮದುರ್ಗದ ರೈಲ್ವೆ ಹೋರಾಟ ಕ್ರಿಯಾ ಸಮಿತಿ ನಡೆಸುತ್ತಿರುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುವುದಾಗಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ವೀರಕ್ತಮಠ ಟ್ರಸ್ಟ್‌ನ ಬಸವರಾಜ ಗಂಗಣ್ಣವರ, ಮಲಕಾಜಪ್ಪ ಮುಳ್ಳೂರ, ಶಿವಾನಂದ ಚಿಕ್ಕೋಡಿ, ಮಹಾಂತೇಶ ಸೊಬರದ, ಚನ್ನಪ್ಪ ಸೊಬರದ, ರಡ್ಡಿ ಸಮಾಜದ ಜಿ. ಬಿ. ರಂಗನಗೌಡ್ರ, ಗೋಪಾಲ ಸಂಶಿ, ಹನಮಂತ ಹಂಚಿನಾಳ, ರೈಲ್ವೆ ಹೋರಾಟ ಸಮಿತಿಯ ಡಾ. ಬಿ. ಎಲ್. ಸಂಕನಗೌಡ್ರ, ರಾಜು ಹರ್ಲಾಪೂರ ಸೇರಿದಂತೆ ಹಲವರಿದ್ದರು.

Share this article