ಕಾರವಾರ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಉತ್ತರ ಕನ್ನಡ ಜಿಲ್ಲೆಯ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗಲಿದ್ದು, ಯೋಜನೆಗೆ ತಮ್ಮ ವಿರೋಧ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
ಈ ಯೋಜನೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕ್ಲಿಯರೆನ್ಸ್ ನೀಡಿವೆ. ನಮ್ಮ ಸರ್ಕಾರ ಬರುವ ಮೊದಲೇ ಯೋಜನೆಯ ಪ್ರಕ್ರಿಯೆಗಳು ಮುಗಿದು, ಟೆಂಡರ್ ಆಗಿದ್ದು ಕೆಲಸ ಮಾತ್ರ ಬಾಕಿ ಇದೆ. ಆದರೂ ನಮ್ಮ ಜನತೆಗಾಗಿ ಮತ್ತು ಜಿಲ್ಲೆಗಾಗಿ ನಾನು ಈಗಲೂ ಯೋಜನೆಯನ್ನು ವಿರೋಧಿಸುತ್ತೇನೆ ಎಂದು ಸಚಿವರು ಹೇಳಿದರು.
ಮೇ ತಿಂಗಳಲ್ಲಿ ಆರಂಭವಾದ ಮಳೆ ಆರು ತಿಂಗಳಾದರೂ ನಿಲ್ಲದಿರುವುದರಿಂದ ರಸ್ತೆ ಕಾಮಗಾರಿಗೆ ಹಿನ್ನಡೆ ಆಗುತ್ತಿದೆ. ಆದರೆ ಜನರ ಹಿತಕ್ಕಾಗಿ ರಸ್ತೆ ದುರಸ್ತಿ ಕಾರ್ಯಗಳು ನಡೆಯುತ್ತಲೇ ಇವೆ ಎಂದು ಮಂಕಾಳ ವೈದ್ಯ ಹೇಳಿದರು. ಸತತ 6-7 ತಿಂಗಳು ಮಳೆ ಬಂದರೆ ಕೆಲಸ ಮಾಡಲು ಹೇಗೆ ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದ ಅವರು, ಮಳೆ ಅಡ್ಡಿಯಾಗದೇ ಇದ್ದಿದ್ದರೆ ಈ ವೇಳೆಗೆ ಎಲ್ಲ ರಸ್ತೆಗಳನ್ನು ಮಾಡಿ ಮುಗಿಸಲಾಗುತ್ತಿತ್ತು ಎಂದರು.ಜಿಲ್ಲೆಯಲ್ಲಿ ₹1000 ಕೋಟಿ ನೀರು ಪೂರೈಕೆ ಯೋಜನೆಯನ್ನು ತರಲಾಗಿದ್ದು, ಎಲ್ಲಿ ತೊಂದರೆ ಆಗುತ್ತದೆಯೋ ಅಲ್ಲಿ ಬೇಕಾದಷ್ಟು ಹಣ ನೀಡಲು ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು.
ಹಿಂದಿನ ಸರ್ಕಾರ ಯಾವುದೇ ಹೊಸ ಬಸ್‌ಗಳನ್ನು ಖರೀದಿಸಿಲ್ಲ. ಹೀಗಾಗಿ, ಬಸ್ ಸಂಚಾರದಲ್ಲಿ ಸಮಸ್ಯೆ ಉಂಟಾಗುತ್ತಿದೆ. ಈಗ ನಾವು ಹಳೆಯ ಬಸ್‌ಗಳನ್ನು ದುರಸ್ತಿ ಮಾಡಸಿ, ಹೊಸ ಬಸ್ ಖರೀದಿಸುತ್ತಿದ್ದೇವೆ. ಜಿಲ್ಲೆಗೆ ಈಗ ಮತ್ತೆ 100 ಬಸ್ ನೀಡಲಾಗುತ್ತಿದ್ದು, ಕೋವಿಡ್ ಕಾರಣ ನೀಡಿ ಬಂದ್ ಆಗಿರುವ ಹಳ್ಳಿಗಳ ಬಸ್ ಸೇವೆ ಮತ್ತೆ ಆರಂಭಿಸಲಾಗುತ್ತದೆ. ಮಕ್ಕಳ ಶೈಕ್ಷಣಿಕ ಪ್ರವಾಸಕ್ಕಾಗಿ ಒಳ್ಳೆಯ ಬಸ್‌ಗಳನ್ನೇ ನೀಡಲಾಗುವುದು ಎಂದರು. ಖಾಸಗಿ ಬಸ್‌ಗಳಲ್ಲೇ ಜನತೆ ಹೆಚ್ಚು ಓಡಾಟ ನಡೆಸುವುದರಿಂದ ಸರ್ಕಾರದ ವೋಲ್ವೋ ಬಸ್‌ಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದಕ್ಕೆ ನಾವೆಲ್ಲ ಕಾರಣ ಎಂದು ತಿಳಿಸಿದರು. ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ್ ಇದ್ದರು.ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧ: ಸಚಿವ ಮಂಕಾಳ ವೈದ್ಯ
ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ತರುವಾಯ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಪಕ್ಷಕ್ಕಾಗಿ, ರಾಜ್ಯಕ್ಕಾಗಿ ಎಲ್ಲರೂ ಒಂದಿಲ್ಲ ಒಂದು ತ್ಯಾಗ ಮಾಡಲೇಬೇಕು. ನಾನೂ ತ್ಯಾಗ ಮಾಡಬೇಕು, ಮತ್ತೊಬ್ಬರೂ ತ್ಯಾಗ ಮಾಡಬೇಕಾಗಿದೆ ಎಂದು ಹೇಳಿದರು.