ಸೀನಿಯಾರಿಟಿ ಕೋಟಾದಲ್ಲಿ ಸಚಿವ ಸ್ಥಾನ ಕೊಡಲಿ

KannadaprabhaNewsNetwork |  
Published : Nov 30, 2024, 12:48 AM IST

ಸಾರಾಂಶ

ರಾಮನಗರ: ಉಪಮುಖ್ಯಮಂತ್ರಿ ಹುದ್ದೆ ಬಿಟ್ಟು ಸೀನಿಯರ್ ಕೋಟಾದಲ್ಲಿ ಜಿಲ್ಲೆಗೊಂದು ಸಚಿವ ಸ್ಥಾನ ಕೊಡಬೇಕು. ಅದರಲ್ಲಿ ನಾನು ಸೀನಿಯರ್ ಇರುವುದರಿಂದ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದೇನೆ ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು.

ರಾಮನಗರ: ಉಪಮುಖ್ಯಮಂತ್ರಿ ಹುದ್ದೆ ಬಿಟ್ಟು ಸೀನಿಯರ್ ಕೋಟಾದಲ್ಲಿ ಜಿಲ್ಲೆಗೊಂದು ಸಚಿವ ಸ್ಥಾನ ಕೊಡಬೇಕು. ಅದರಲ್ಲಿ ನಾನು ಸೀನಿಯರ್ ಇರುವುದರಿಂದ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದೇನೆ ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು.

ತಾಲೂಕಿನ ಬಿಡದಿ ಹೋಬಳಿಯ ಮಂಚನಾಯಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಹಾಗೂ ಉದ್ಘಾಟನೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಜಿಲ್ಲೆಗೆ ಡಿ.ಕೆ.ಶಿವಕುಮಾರ್ ಅವರನ್ನು ಬಿಟ್ಟರೆ ನಾನೇ ಸೀನಿಯರ್‌. ಯೋಗೇಶ್ವರ್ ಕೂಡ ನನ್ನ ಪರವಾಗಿದ್ದಾರೆ ಎಂದು ಹೇಳಿದರು.

ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಕೋಟಾ ಪರಿಗಣಿಸುವಂತಿಲ್ಲ. ಅವು ದೊಡ್ಡ ಹುದ್ದೆಗಳು. ಸೀನಿಯಾರಿಟಿ ಕೋಟಾದಲ್ಲಿ ಸಚಿವ ಸ್ಥಾನ ಕೊಡಿ ಅಂತಾ ಕೇಳಿದ್ದೇವೆ. ಸಚಿವ ಸ್ಥಾನವನ್ನು ರಸ್ತೆಯಲ್ಲಿಲ್ಲಿ ನಿಂತುಕೊಂಡು ಕೇಳಲು ಸಾಧ್ಯವಿಲ್ಲ. ಎಲ್ಲಿ ಕೇಳಬೇಕೋ ಅಲ್ಲಿ ಕೇಳಿದ್ದೇವೆ. ನಾನು ಸಚಿವ ಸ್ಥಾನದ ಆಕಾಂಕ್ಷಿ. ನಾನು ಕೂಡ ಸೀನಿಯರ್ ಎಷ್ಟು ಸಲ ಗೆದ್ದಿದ್ದೇನೆ. ನಮಗೂ ಪ್ರಮೋಷನ್ ಬೇಕಲ್ವಾ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನನ್ನನ್ನು ಪರಿಗಣಿಸುತ್ತಾರೆ ಎಂಬ ವಿಶ್ವಾಸ ಇದೆ. ಯಾರಿಗೂ ಆಶ್ವಾಸನೆ ಕೊಡಲ್ಲ, ಅವರವರ ಕಾರ್ಯ ವೈಖರಿ ನೋಡಿ ಕೊಡುತ್ತಾರೆ. ಕಳೆದ ಬಾರಿಯ ಪರಿಸ್ಥಿತಿಯೇ ಬೇರೆಯಿತ್ತು. ಈ ಬಾರಿಯ ಪರಿಸ್ಥಿತಿಯೇ ಬೇರೆ ಇದೆ‌. ನಾನು ಸೀನಿಯರ್ಸ್ ನಲ್ಲಿ ಸೀನಿಯರ್ ಇದ್ದೇನೆ. ಎಲ್ಲಾ ಮಾನದಂಡಗಳನ್ನು ಅನುಸರಿಸಬೇಕು ಅಲ್ಲವೆ. ಅವರೇನು ಎಳೆ ಮಕ್ಕಳಲ್ಲ, ಅವರಿಗೆ ಎಲ್ಲವೂ ಅರ್ಥ ಆಗುತ್ತದೆ ಎಂದು ಹೇಳಿದರು.

ನಾನು ಕಾಂಗ್ರೆಸ್‌ಗೆ ಹೊಸಬನಲ್ಲ. ಎರಡು ಚುನಾವಣೆಗಳನ್ನು ಎದುರಿಸಿದ್ದೇನೆ. ಒಂದು ಚುನಾವಣೆಯಲ್ಲಿ ಸೋತಿದ್ದೇನೆ, ಈ ಬಾರಿ ಗೆದ್ದಿದ್ದೇನೆ. ಸಿದ್ದರಾಮಯ್ಯ ಅವರು ಕೂಡ ಕಾಂಗ್ರೆಸ್ ಗೆ ಹೊಸಬರಾಗಿದ್ದರು. ಅವರು ಮುಖ್ಯಮಂತ್ರಿ ಹುದ್ದೆ ಅಲಂಕರಿಸಲಿಲ್ಲವೇ ಎಂದು ಪ್ರಶ್ನಿಸಿದರು.

ನನ್ನನ್ನು ಯಾವಾಗ ಸಚಿವನನ್ನಾಗಿ ಮಾಡಬೇಕೊ ಆಗ ಮಾಡುತ್ತಾರೆ. ನಾಳೆನೇ ಮಾಡುವಂತೆ ಹೇಳಲು ಆಗುವುದಿಲ್ಲ. ಅದೆಲ್ಲ ವರಿಷ್ಠರಿಗೆ ಬಿಟ್ಟ ವಿಚಾರವಾಗಿದೆ. ಅವರಿಗೂ ಆಸೆ ಆಕಾಂಕ್ಷೆ ಇರುತ್ತದೆ. ಸೀನಿಯರ್ ಗಳನ್ನು ಯಾವ ರೀತಿ ಪರಿಗಣಿಸುತ್ತಾರೆ ಎಂಬುದನ್ನು ನೀವೇ ನೋಡಿ ಚರ್ಚೆ ಮಾಡುವಂತೆ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಕೂಡ ಜಿಲ್ಲೆಯನ್ನು ಅಭಿವೃದ್ಧಿ ಮಾಡುತ್ತಿದ್ದಾರೆ. ಜಿಲ್ಲೆಗೆ ಒಂದು ಸ್ಥಾನ ಕೊಡಿ ಅಂತಾ ಕೇಳುತ್ತಿದ್ದೇನೆ. ರೆಡ್ಡಿರವರು ಜಿಲ್ಲೆಯವರಿಗಿಂತ ಹೆಚ್ಚು ಜವಾಬ್ದಾರಿ ತಗೊಂಡು ಕೆಲಸ ಮಾಡುತ್ತಿದ್ದಾರೆ ಎಂದು ಬಾಲಕೃಷ್ಣ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಚನ್ನಪಟ್ಟಣ ಕ್ಷೇತ್ರದಲ್ಲಿ ಯೋಗೇಶ್ವರ್ ಗೆದ್ದರೆ ಮುಂದೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆಂದು ಹೇಳಿದ್ದರಲ್ಲ ಎಂಬ ಪ್ರಶ್ನೆಗೆ, ಈಗ ಸಿದ್ದರಾಮಯ್ಯ ಅವರ ಸರದಿ‌ ಇದೆ. ಸಿದ್ದರಾಮಯ್ಯ ಅವರ ನಂತರ ಡಿ.ಕೆ.ಶಿವಕುಮಾರ್ ಆ ಸ್ಥಾನವನ್ನು ರೀಪ್ಲೇಸ್ ಮಾಡುತ್ತಾರೆ. ಡಿ.ಕೆ.ಶಿವಕುಮಾರ್ ಅವರ ಕೋಟಾ ಮುಗಿದ ಬಳಿಕ ಜಾರಕಿಹೊಳಿ ಸರದಿ‌ ಬರಲಿದೆ. ಜಾರಕಿಹೊಳಿ ಕೋಟಾ ಮುಗಿದ ಮೇಲೆ ಇನ್ನೊಬ್ಬರಿಗೆ ಅವಕಾಶ ಸಿಗಲಿದೆ. ಇದೆಲ್ಲ ಯಾವಾಗ ಅಂತಾ ಹೇಳಲು ಆಗುವುದಿಲ್ಲ. ಅದೆಲ್ಲವನ್ನು ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ ಎಂದು ಹೇಳಿದರು.

ಈಗ ಸದ್ಯಕ್ಕೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರಿಗೆ ಅವಕಾಶ ಇದೆ. ಮುಂದೆ ಜಾರಿಕಿಹೊಳಿ, ಎಂ.ಬಿ ಪಾಟೀಲ್ ಸೇರಿದಂತೆ ಹಲವು ನಾಯಕರಿಗೆ ಅವಕಾಶ ಸಿಗುತ್ತದೆ. ಎಲ್ಲಾ ಜಾತಿಯ ನಾಯಕರಿಗೆ ಮುಖ್ಯಮಂತ್ರಿ ಅವಕಾಶ ಸಿಗುವುದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ. ಬೇರೆ ಪಕ್ಷದಲ್ಲಿ ಎಲ್ಲಾ ಜಾತಿಯವರಿಗೆ ಅವಕಾಶ ಸಿಗುವುದಿಲ್ಲ ಎಂದು ಹೇಳಿದರು.

ಅವಕಾಶ ಸಿಕ್ಕಿದರೆ ಜೆಡಿಎಸ್‌ ಶಾಸಕರನ್ನು ಕಾಂಗ್ರೆಸ್ ಕರೆತರುತ್ತೇನೆ ಎಂಬ ಸಿ.ಪಿ.ಯೋಗೇಶ್ವರ್ ಹೇಳಿಕೆಗೆ, ಆ ತರಹದ ಟಾಸ್ಕ್ ಕೊಡುವ ವಾತಾವರಣ ಇಲ್ಲ. ಈ ವಿಚಾರವಾಗಿ ಯೋಗೆಶ್ವರ್ ಅವರನ್ನೇ ಕೇಳಬೇಕು. ಯೋಗೇಶ್ವರ್ ಅವರಿಗೆ ಎಳ್ಕೊಬರೋದು, ಕರ್ಕೊ ಬರೋದು ಅಭ್ಯಾಸ ಇದೆ‌ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ಕ್ಲೀನ್ ಸ್ವೀಪ್ ಮಾಡಿರುವ ಪ್ರಶ್ನೆಗೆ ಯಾವ ಕ್ಲೀನ್ ಸ್ವೀಪ್ ಏನು ಇಲ್ಲ. ಸರ್ಕಾರ ಇದೆ ಅಂತಾ ಜನ ಗೆಲ್ಲಿಸಿದ್ದಾರೆ‌. ಕೆಲಸ ಮಾಡಿದರೆ ಮುಂದೆ ಕೂಡ ಅವಕಾಶ ಕೊಡುತ್ತಾರೆ. ಕ್ಲೀನ್ ಸ್ವೀಪ್ ಮಾಡಿದ್ದೀವಿ ಅಂತಾ ಮನೇಲಿ ಕೂತರೆ ಆಗುತ್ತದೆಯೇ. ಕೆಲಸ ಮಾಡಿದರೆ ಮುಂದೆ ಕೂಡ ಅವಕಾಶ ಕೊಟ್ಟು ನಮ್ಮನ್ನು ಗೆಲ್ಲಿಸುತ್ತಾರೆ. ಮನೆಯಲ್ಲಿ ಕೂತರೆ ಬೇರೆಯವರಂತೆ ನಮಗೂ ಗೇಟ್ ಪಾಸ್ ಕೊಡುತ್ತಾರೆ ಎಂದು ಬಾಲಕೃಷ್ಣ ಹೇಳಿದರು.

ಈ ವೇಳೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಎನ್.ನಟರಾಜು, ಪುರಸಭಾ ಸದಸ್ಯ ಸಿ.ಉಮೇಶ್, ಕೆಪಿಸಿಸಿ ಸದಸ್ಯ ಬ್ಯಾಟಪ್ಪ, ಮಂಚನಾಯ್ಕನಹಳ್ಳಿ ಗ್ರಾಪಂ ಅಧ್ಯಕ್ಷೆ ವರಲಕ್ಷ್ಮಿ ಗೋವಿಂದರಾಜು, ಸದಸ್ಯರಾದ ನಾಗೇಶ್, ಶಾಂತರಾಜು, ನಂದಪ್ರಭ ಆನಂದ್, ತಾಯಮ್ಮ ರಂಗಸ್ವಾಮಿ, ಮುಖಂಡರಾದ ಎಚ್.ಎಸ್.ಯೋಗಾನಂದ, ಮೂರ್ತಿ, ಸಿದ್ದರಾಜು, ಉರಗಹಳ್ಳಿಸ್ವಾಮಿ, ಪಿಡಿಒ ಚಂದ್ರಶೇಖರ್ ಸೇರಿದಂತೆ ಹಲವರಿದ್ದರು.

ಕೋಟ್ .........

ಅಹಿಂದ ಸಮಾವೇಶ ಎಲ್ಲವೂ ಮಾಧ್ಯಮದವರ ಕ್ರಿಯೇಷನ್. ಅಹಿಂದ ಸಮಾವೇಶ ಮಾಡಲು ಹೊರಟಿದ್ದಾರೆ.

ಅದರ ಬಗ್ಗೆ ಮಾತಾನಾಡುವಷ್ಟು ನಾನು ದೊಡ್ಡವನಲ್ಲ. ಹೈಕಮಾಂಡ್ ಇದೆ ಅದರ ಬಗ್ಗೆ ಚರ್ಚೆ ಮಾಡುತ್ತದೆ.

ಮಾಡಲೇಬಾರದು ಅಂತಾ ನಾವು ಹೇಳೋಕೆ ಸಾಧ್ಯ ಇಲ್ಲ. ಮತಗಳ ಕ್ರೋಡೀಕರಣ ಆಗಬೇಕು ಅಂದರೆ ಇಂತಹ ಸಮಾವೇಶ ಮಾಡಲಿ ಬಿಡಿ ತಪ್ಪೇನು?

-ಎಚ್.ಸಿ.ಬಾಲಕೃಷ್ಣ, ಶಾಸಕರು, ಮಾಗಡಿ ಕ್ಷೇತ್ರ

29ಕೆಆರ್ ಎಂಎನ್ 1.ಜೆಪಿಜಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!