ಲೋಕಸಭೆ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಪ್ರಬಲ ಸಮುದಾಯಗಳಿಗೆ ಇನ್ನೂ ಮೂರು ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಸುವಂತೆ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಸಚಿವರ ಗುಂಪು ಆಗ್ರಹಿಸಿರುವುದು ನಿಜ ಎಂದು ಪ್ರಭಾವಿ ಸಚಿವರು ಒಪ್ಪಿಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಲೋಕಸಭೆ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಪ್ರಬಲ ಸಮುದಾಯಗಳಿಗೆ ಇನ್ನೂ ಮೂರು ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಸುವಂತೆ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಸಚಿವರ ಗುಂಪು ಆಗ್ರಹಿಸಿರುವುದು ನಿಜ ಎಂದು ಒಪ್ಪಿಕೊಂಡಿರುವ ಪ್ರಭಾವಿ ಸಚಿವರು, ಈ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಈ ಸಂಬಂಧ ಮಂಗಳವಾರ ಸುದ್ದಿಗಾರರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಸಹಕಾರ ಸಚಿವ ಕೆ.ಎನ್.ರಾಜಣ್ಣ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಹೆಚ್ಚುವರಿ ಡಿಸಿಎಂ ಹುದ್ದೆಗಳ ಸೃಷ್ಟಿಗೆ ಸುರ್ಜೇವಾಲಾ ಅವರ ಮುಂದೆ ಹಲವು ಸಚಿವರು ಬೇಡಿಕೆ ಇಟ್ಟಿರುವುದು ನಿಜ.
ಈ ಬಗ್ಗೆ ಹೈಕಮಾಂಡ್ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಡಾ.ಜಿ.ಪರಮೇಶ್ವರ್ ಮಾತನಾಡಿ, ಲೋಕಸಭಾ ಚುನಾವಣಾ ಸಿದ್ಧತೆ ಚರ್ಚಿಸಲು ರಾಜ್ಯಕ್ಕೆ ಭೇಟಿ ನೀಡಿರುವ ಸುರ್ಜೇವಾಲಾ ಸೋಮವಾರ ಸಚಿವರ ಸಭೆ ಕರೆದಿದ್ದರು.
ಸಭೆಯಲ್ಲಿ ಹಲವು ಸಚಿವರು ರಾಜ್ಯದಲ್ಲಿ ಇನ್ನಷ್ಟು ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜೊತೆಗೆ ಇದರಿಂದ ಚುನಾವಣೆಯಲ್ಲಿ ನಮಗೆ ಅನುಕೂಲಗಳೇನು ಎಂಬ ಬಗ್ಗೆಯೂ ವಿವರಿಸಿದ್ದಾರೆ. ಸುರ್ಜೇವಾಲಾ ಇದನ್ನು ಹೈಕಮಾಂಡ್ ನಾಯಕರೊಂದಿಗೆ ಚರ್ಚಿಸುವುದಾಗಿ ಹೇಳಿದ್ದಾರೆ ಎಂದರು.
ಹೆಚ್ಚುವರಿ ಡಿಸಿಎಂ ಸ್ಥಾನಗಳ ಸೃಷ್ಟಿಗೆ ನಾವು ಹೈಕಮಾಂಡ್‌ಗೆ ಸಲಹೆ ನೀಡಬಹುದು. ಹಲವರು ಸಲಹೆ ನೀಡಿದ್ದಾರೆ. ಸಲಹೆ ಪರಿಗಣಿಸುವುದು ಬಿಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಸಾಧಕ-ಬಾಧಕ ನೋಡಿಕೊಂಡು ಈ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
ಡಿಕೆಶಿ ನಿಲುವು ಬೇರೆ -ನಮ್ಮ ನಿಲುವು ಬೇರೆ:
ಸಚಿವ ಸತೀಶ್ ಜಾರಕಿಹೊಳಿ ಬೆಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಸುರ್ಜೇವಾಲಾ ಭೇಟಿಯ ಸಂದರ್ಭದಲ್ಲಿ ಪ್ರಬಲ ಸಮುದಾಯಗಳಿಗೆ ಡಿಸಿಎಂ ಹುದ್ದೆ ಕೊಡಬೇಕು ಎಂದು ಎಲ್ಲರೂ ಒಟ್ಟಾಗಿ ಕೇಳಿದ್ದೇವೆ.
ಲೋಕಸಭೆ ಚುನಾವಣೆಗೆ ಮುಂಚೆ ಹೆಚ್ಚುವರಿ ಡಿಸಿಎಂ ಸೃಷ್ಟಿ ವಿಚಾರಕ್ಕೆ ತಾರ್ಕಿಕ ಅಂತ್ಯ ನೀಡಬೇಕು. ಇದರಿಂದ ಚುನಾವಣೆಯಲ್ಲಿ ಆಯಾ ಸಮುದಾಯಗಳು ನಮ್ಮ ಬೆನ್ನಿಗೆ ನಿಲ್ಲಲು ಅನುಕೂಲ ಆಗುತ್ತದೆ ಎಂದು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ.ಶಿವಕುಮಾರ್ ಇದಕ್ಕೆ ಒಪ್ಪುತ್ತಾರಾ ಎಂಬ ಪ್ರಶ್ನೆಗೆ, ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ವಿಚಾರದಲ್ಲಿ ಹಾಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಿಲುವು ಬೇರೆ, ನಮ್ಮ ನಿಲುವು ಬೇರೆ. ಅವರದ್ದು ಒಂದೇ ಉಪಮುಖ್ಯಮಂತ್ರಿ ಹುದ್ದೆ ಇರಲಿ ಎಂಬ ಅಭಿಪ್ರಾಯವಿದೆ. ನಮ್ಮದು ಹಾಗಲ್ಲ. ಡಿ.ಕೆ.ಶಿವಕುಮಾರ್ ಅವರ ಜೊತೆ ಇನ್ನೂ ಕೆಲ ಪ್ರಬಲ ಸಮುದಾಯಗಳಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕೆಂದು ಮನವಿ ಮಾಡಿದ್ದೇವೆ.
ಮುಂದಿನ ನಿರ್ಧಾರ ಹೈಕಮಾಂಡ್ ನಾಯಕರು ಮಾಡಬೇಕು. ಎಷ್ಟು ಡಿಸಿಎಂ ಮಾಡ್ತಾರೆ ಎಂಬುದು ಹೈಕಮಾಂಡ್‌ಗೆ ಬಿಟ್ಟಿದ್ದು. ಆದರೆ, ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಮಾಡಬೇಕು. ಈ ಬಗ್ಗೆ ಹೈಕಮಾಂಡ್ ಗಮನಕ್ಕೆ ತರುವುದಾಗಿ ಸುರ್ಜೇವಾಲಾ ಹೇಳಿದ್ದಾರೆ ಎಂದರು.
ಡಿಸಿಎಂ ಹುದ್ದೆ ನಿಮ್ಮ ಒತ್ತಾಯವೇ ಅಥವಾ ಮನವಿಯೇ? ಒಂದು ವೇಳೆ ಇನ್ನಷ್ಟು ಡಿಸಿಎಂ ಹುದ್ದೆಗಳ ಸೃಷ್ಟಿಸದಿದ್ದರೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ, ಒತ್ತಾಯ, ಮನವಿ ಎರಡೂ ಒಂದೇ. ನಾವೇನೂ ಬ್ಲಾಕ್ ಮೇಲ್ ಮಾಡಿಲ್ಲ. ಇನ್ನಷ್ಟು ಹುದ್ದೆ ಸೃಷ್ಟಿಸದೆ ಹೋದರೆ ಏನೂ ಆಗಲ್ಲ. ಯಾರೂ ಪಕ್ಷ ಬಿಟ್ಟೇನೂ ಹೋಗಲ್ಲ ಎಂದರು.
ಬಹಿರಂಗ ಚರ್ಚೆ ಮಾಡಲ್ಲ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಸುರ್ಜೇವಾಲಾ ಅವರೊಂದಿಗಿನ ಸಭೆಯಲ್ಲಿ ಚುನಾವಣಾ ತಯಾರಿ ಚರ್ಚೆಗಳ ಜೊತೆಗೆ ಕೆಲವು ಸಚಿವರು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಬೇಕೆಂಬುದರ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು ನಿಜ. ಆದರೆ, ಇದು ಪಕ್ಷದ ಆಂತರಿಕ ವಿಚಾರ.
ಪಕ್ಷದ ಚೌಕಟ್ಟಿನಡಿ ಚರ್ಚೆ ಮಾಡಿದ್ದೇವೆ. ಈ ಬಗ್ಗೆ ಬಹಿರಂಗವಾಗಿ ನಾನು ಹೆಚ್ಚೇನೂ ಮಾತನಾಡುವುದಿಲ್ಲ. ನಮ್ಮ ಅಧ್ಯಕ್ಷರು, ಮುಖ್ಯಮಂತ್ರಿಗಳು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಇತರೆ ಹೈಕಮಾಂಡ್ ನಾಯಕರುಗಳಿದ್ದಾರೆ. ಅವರಿಗೆ ಎಲ್ಲ ವಿಚಾರಗಳು ಗೊತ್ತಿದೆ. ಚರ್ಚಿಸಿ ತೀರ್ಮಾನ ಮಾಡುತ್ತಾರೆ ಎಂದರು.
ಡಿಸಿಎಂಗೆ ಬೇಡಿಕೆಗೆ ಮೊದಲಿಂದ ಇದೆ:
ಮತ್ತೊಂದೆಡೆ ಹರಿಹರ ತಾಲ್ಲೂಕಿನ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಮಾತನಾಡಿದ ಸಚಿವ ಕೆ.ಎನ್.ರಾಜಣ್ಣ, ಹೆಚ್ಚುವರಿ ಉಪ ಮುಖ್ಯಮಂತ್ರಿ ಸ್ಥಾನಗಳಿಗೆ ನಮ್ಮ ಬೇಡಿಕೆ ಇದ್ದೇ ಇದೆ, ಪಕ್ಷದ ಹೈಕಮಾಂಡ್‌ಗೂ ಈ ಬಗ್ಗೆ ಬೇಡಿಕೆ ಇಟ್ಟಿದ್ದೇವೆ ಎಂದರು.
ಎಲ್ಲಾ ಸಮುದಾಯಗಳಿಗೂ ಅಧಿಕಾರ, ಅವಕಾಶ ನೀಡುವ ಉದ್ದೇಶ ನಮ್ಮದಾಗಿದ್ದು, ಎಲ್ಲ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ಸಿಗಬೇಕು. ಪಂಚ ರಾಜ್ಯಗಳ ಚುನಾವಣೆಯಲ್ಲಿ 3 ರಾಜ್ಯಗಳಲ್ಲಿ ಅಧಿಕಾರ ಹಿಡಿದ ಬಿಜೆಪಿಯೂ ಉಪ ಮುಖ್ಯಮಂತ್ರಿಗಳ ಸ್ಥಾನ ಸೃಷ್ಟಿಸಿದೆ.
ಅದೇ ರೀತಿ ರಾಜ್ಯದಲ್ಲೂ ಉಪ ಮುಖ್ಯಮಂತ್ರಿ ಸ್ಥಾನಗಳನ್ನು ಎಲ್ಲಾ ಸಮುದಾಯಗಳಿಗೂ ನೀಡಲಿ ಎಂಬ ಒತ್ತಾಯ ನಮ್ಮದು. ಕಾಂಗ್ರೆಸ್ ಹೈಕಮಾಂಡ್ ಈ ಬಗ್ಗೆ ಏನು ನಿರ್ಧಾರ ಕೈಗೊಳ್ಳುತ್ತದೋ ಕಾದು ನೋಡೋಣ ಎಂದು ಹೇಳಿದರು.