ದ.ಕ.: ಗುಡುಗು ಸಹಿತ ಉತ್ತಮ ಮಳೆ

KannadaprabhaNewsNetwork | Published : Jan 10, 2024 1:46 AM

ಸಾರಾಂಶ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಸೋವವಾರ ರಾತ್ರಿ ಹಾಗೂ ಮಂಗಳವಾರ ರಾತ್ರಿ ಗುಡುಗು ಸಹಿತ ಭಾರಿ ಮಳೆಯಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಅರಬ್ಬಿ ಸಮುದ್ರದಲ್ಲಿ ಸೈಕ್ಲೋನ್‌ನಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕಾಲಿಕ ಮಳೆ ಮಂಗಳವಾರವೂ ಮುಂದುವರಿದಿದೆ. ಮುಂಜಾನೆ ಮತ್ತು ಸಂಜೆ ವೇಳೆಗೆ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಮಳೆಯಿಂದಾಗಿ ಮಂಗಳೂರಿನ ಲ್ಯಾಂಡ್‌ ಲಿಂಕ್ಸ್‌ ಬಳಿ ರಸ್ತೆಯ ತಡೆಗೋಡೆಯು ಚರಂಡಿಗೆ ಕುಸಿದು ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ಲ್ಯಾಂಡ್ ಲಿಂಕ್ಸ್‌ ಹಾಗೂ ನಾಗಕನ್ನಿಕಾ ಸಂಪರ್ಕ ರಸ್ತೆಯ ಕಾಂಕ್ರಿಟ್‌ ತಡೆಗೋಡೆ ಕುಸಿದಿದ್ದು, ಬೃಹತ್‌ ವಾಹನಗಳು ಸಂಚರಿಸಲು ತೊಂದರೆಯಾಗಿದೆ. ಮಳೆ ಮುಂದುವರಿದರೆ ಇನ್ನಷ್ಟು ಕುಸಿಯುವ ಆತಂಕ ಎದುರಾಗಿದ್ದು, ಕೂಡಲೆ ಸರಿಪಡಿಸುವಂತೆ ಮಹಾನಗರ ಪಾಲಿಕೆಯನ್ನು ಸ್ಥಳೀಯರು ಒತ್ತಾಯಿಸಿದ್ದಾರೆ.

ಸೋಮವಾರ ತಡರಾತ್ರಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಗುಡುಗು ಸಿಡಿಲಿನಿಂದ ಕೂಡಿದ ಧಾರಾಕಾರ ಮಳೆ ಸುರಿದಿತ್ತು. ಮಂಗಳವಾರ ಬೆಳಗ್ಗೆ ಬೆಳ್ತಂಗಡಿ, ಉಪ್ಪಿನಂಗಡಿ, ಮಂಗಳೂರು, ಬಂಟ್ವಾಳ ಭಾಗಗಳಲ್ಲಿ ಅಲ್ಪ ಮಳೆಯಾಗಿದ್ದರೆ, ಮಧ್ಯಾಹ್ನದವರೆಗೂ ಮೋಡ ಕವಿದ ವಾತಾವರಣವಿತ್ತು.

ಮಧ್ಯಾಹ್ನದ ಬಳಿಕ ಕೊಂಚ ಬಿಸಿಲು ಆವರಿಸಿದ್ದು, ಸಂಜೆ ವೇಳೆಗೆ ಮಂಗಳೂರು ನಗರ ಸೇರಿದಂತೆ ಉಳ್ಳಾಲ, ಪುತ್ತೂರು, ಬಂಟ್ವಾಳ, ವಿಟ್ಲ, ಬೆಳ್ತಂಗಡಿ ಭಾಗದಲ್ಲಿ ಉತ್ತಮ ಮಳೆಯಾಗಿದೆ.

ಬುಧವಾರವೂ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಕೆಲವೆಡೆ ಕೃತಕ ಪ್ರವಾಹ: ಮಳೆಗಾಲದಲ್ಲಿ ಮಳೆ ಕೊರತೆಯಾಗಿದ್ದರಿಂದ ಜಿಲ್ಲೆಯ ಬಹುತೇಕ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಹಾಕಲಾಗಿದೆ. ಉತ್ತಮ ಮಳೆ ಸುರಿದಿದ್ದರಿಂದ ಹೆಚ್ಚಿನ ಕಿಂಡಿ ಅಣೆಕಟ್ಟುಗಳು ಭರ್ತಿಯಾಗಿ ಪಕ್ಕದ ಗದ್ದೆಗಳಿಗೆ ಕೃತಕ ಪ್ರವಾಹ ಉಂಟಾದ ಬಗ್ಗೆ ವರದಿಯಾಗಿದೆ. ಆದರೆ ಹಗಲು ಹೊತ್ತಿನಲ್ಲಿ ಮಳೆ ಬಿಟ್ಟಿದ್ದರಿಂದ ಹಾನಿ ಸಂಭವಿಸಿಲ್ಲ.

ಉಡುಪಿ ಜಿಲ್ಲಾದ್ಯಂತ ಉತ್ತಮ ಮಳೆ: ಅರಬ್ಬಿ ಸಮುದ್ರದಲ್ಲಿ ಚಂಡಮಾರುತದ ಪರಿಣಾಮ ಸೋಮವಾರ ಮತ್ತು ಮಂಗಳವಾರ ರಾತ್ರಿ ಜಿಲ್ಲಾದ್ಯಂತ ಉತ್ತಮ ಮಳೆಯಾಗಿದೆ. ಹವಾಮಾನ ಇಲಾಖೆ ಇನ್ನೂ ಒಂದೆರಡು ದಿನಗಳ ಕಾಲ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಮುನ್ನೆಚ್ಚರಿಕೆ ನೀಡಿದೆ.

ಸೋಮವಾರ ಮಧ್ಯರಾತ್ರಿಯ ನಂತರ ಮಳೆಯಾಗಿದ್ದರೆ, ಮಂಗಳವಾರ ಸಂಜೆಯಾಗುತ್ತಲೇ ಮಳೆ ಆರಂಭವಾಯಿತು. ಮಳೆಯ ಜೊತೆಗೆ ವಿಪರೀತ ಗಾಳಿ, ಮಿಂಚು ಗುಡುಗು ಕೂಡ ಕಾಣಿಸಿಕೊಂಡಿತು.

ಸೋಮವಾರ ರಾತ್ರಿ ಸುರಿದ ಮಳೆಗೆ ಕಾಪು ತಾಲೂಕಿನ ಮೂಳೂರು ಗ್ರಾಮದ ಮಹಮ್ಮದ್ ಸುಹೇಲ್ ಎಂಬವರ ಮನೆ ಮೇಲ್ಛಾವಣಿ ಮತ್ತು ಗೋಡೆಗಳಿಗೆ ಹಾನಿಯಾಗಿ 2 ಲಕ್ಷ ರು. ನಷ್ಟ ಉಂಟಾಗಿದೆ. ಬೈಂದೂರು ತಾಲೂಕಿನ ತೆಗ್ಗರ್ಸೆ ಗ್ರಾಮದ ಅಬ್ಬಕ್ಕ ಎಂಬವರ ಮನೆಗೆ ಮರ ಬಿದ್ದು 35 ಸಾವಿರ ರು. ನಷ್ಟ ಸಂಭವಿಸಿದೆ.

ಮಂಗಳವಾರ ಮುಂಜಾನೆವರೆಗೆ ಜಿಲ್ಲೆಯಲ್ಲಿ ಸರಾಸರಿ 8.30 ಮಿ.ಮೀ. ಮಳೆಯಾಗಿದೆ. ತಾಲೂಕುವಾರು ಕಾರ್ಕಳ 12.20, ಕುಂದಾಪುರ 1.10, ಉಡುಪಿ 20.90, ಬೈಂದೂರು 1.40, ಬ್ರಹ್ಮಾವರ 3.90, ಕಾಪು 48.90, ಹೆಬ್ರಿ 0.80 ಮಿ.ಮೀ. ಮಳೆ ದಾಖಲಾಗಿದೆ.

ಮೂಲ್ಕಿ ತಾಲೂಕಲ್ಲಿ ಮಳೆಗೆ ಅಲ್ಲಲ್ಲಿ ಹಾನಿ: ಮೂಲ್ಕಿ ತಾಲೂಕಿನಲ್ಲಿ ಕಳೆದ ಎರಡು ದಿನಗಳಲ್ಲಿ ರಾತ್ರಿ ಗುಡುಗು ಸಹಿತ ಭಾರೀ ಮಳೆದ ಸುರಿದ ಪರಿಣಾಮ ಕೆಲವು ಕಡೆಗಳಲ್ಲಿ ಕೃಷಿ ಭೂಮಿ ಮಳೆ ನಿಂತು ಹೆಚ್ಚಿನ ನಷ್ಟವುಂಟಾಗಿದೆ.

ಶಾಂಭವಿ ಮತ್ತು ನಂದಿನಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ .ನಂದಿನಿ ನದಿಯ ಅಣೆಕಟ್ಟಿನ ಬಾಗಿಲು ಹಾಕಲಾಗಿದ್ದು, ನೀರಿನ ಪ್ರಮಾಣ ಹೆಚ್ಚಾದ ಕಾರಣ, ಕೆಲವೊಂದು ಕಿಂಡಿಗಳ ಬಾಗಿಲನ್ನು ತೆಗೆದು ಹೆಚ್ಚಿನ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ, ನಂದಿನಿ ನದಿ ತೀರದ ಸಿತ್ಲ, ಕಟೀಲು, ಮಿತ್ತಬೈಲು, ನಡುಗೋಡು, ಪುಚ್ಚಾಡಿ, ಪಂಜದಲ್ಲಿ ಅಣೆಕಟ್ಟಗಳಿದ್ದು, ಹೆಚ್ಚಿನ ಅಣೆಕಟ್ಟಿನ ಕೆಲವೊಂದು ಬಾಗಿಲು ತೆಗೆದು ನೀರನ್ನು ಹೊರಬಿಡಲಾಗಿದೆ‌. ಮಳೆಯ ಕಾರಣ ಗದ್ದೆಗಳಲ್ಲಿ ನೀರು ತುಂಬಿದ್ದು ಕೆಲವು ಕಡೆ ನಾಟಿ ಕಾರ್ಯಕ್ಕೂ ಹಿನ್ನಡೆಯಾಗಿದೆ.

Share this article