ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಜಿಲ್ಲಾ ಉಸ್ತುವಾರಿ ಸಚಿವ ಎನ್ .ಚಲುವರಾಯಸ್ವಾಮಿ, ಶಾಸಕ ಎಚ್.ಟಿ.ಮಂಜು ಜಂಟಿಯಾಗಿ ಪಟ್ಟಣ ಹಾಗೂ ತಾಲೂಕಿನ ವಿವಿಧೆಡೆ ಪೂರ್ಣಗೊಂಡ ಕಾಮಗಾರಿಗಳನ್ನು ಉದ್ಘಾಟಿಸಿದರು.ತಾಲೂಕಿನ ಸಂತೇಬಾಚಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಡೆಂಟಾ ವಾಟರ್ ಮತ್ತು ಇನ್ಫ್ರಾ ಸೆಲ್ಯೂಷನ್ ಲಿಮಿಟೆಡ್ ಬೆಂಗಳೂರಿನ ವತಿಯಿಂದ 1.13 ಕೋಟಿ ರು. ವೆಚ್ಚದ ಹೆಚ್ಚುವರಿ ಕಟ್ಟಡ ಲೋಕಾರ್ಪಣೆಗೊಳಿಸಿದ ನಂತರ ಸಚಿವರು ಹಾಗೂ ಶಾಸಕರು ಒಂದೇ ಕಾರಿನಲ್ಲಿ ಪ್ರಯಾಣಿಸಿ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಮಂಚಿಬೀಡು ಗ್ರಾಮದಲ್ಲಿ ಕೆಪಿಟಿಸಿಎಲ್‌ಗೆ ಸೇರಿದ 10 ಕೋಟಿ ರು. ಅಂದಾಜು ವೆಚ್ಚದ ವಿದ್ಯುತ್ ವಿತರಣಾ ಉಪಕೇಂದ್ರ ಉದ್ಘಾಟಿಸಿದರು.
ನಂತರ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಸಾರಿಗೆ ಇಲಾಖೆಗೆ ಸೇರಿದ 1.25 ಕೋಟಿ ರು. ವೆಚ್ಚದ ಬಸ್ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಅಕ್ಕಿಹೆಬ್ಬಾಳು ಬಸ್ ನಿಲ್ದಾಣದ ಮುಖ್ಯ ಕಟ್ಟಡದಲ್ಲಿ 3 ವಾಣಿಜ್ಯ ಮಳಿಗೆಗಳು, 01 ಉಪಹಾರಗೃಹ, ಸಂಚಾರ ನಿಯಂತ್ರಕರ ಕೊಠಡಿ, ಮಹಿಳಾ ವಿಶ್ರಾಂತಿ ಕೊಠಡಿ, ಆಸನಗಳ ವ್ಯವಸ್ಥೆ, ಕುಡಿವ ನೀರಿನ ಸೌಲಭ್ಯ ಮತ್ತು ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ. ಅಕ್ಕಿ ಹೆಬ್ಬಾಳು ಬಸ್ ನಿಲ್ದಾಣದಿಂದ ಮೈಸೂರು, ಕೆ.ಆರ್.ಪೇಟೆ, ಭೇರ್ಯ, ಹುಣಸೂರು, ಜಲಸೂರು, ನಾಗಮಂಗಲ ಮುಂತಾದ ಊರುಗಳಿಗೆ 80 ಟ್ರಿಪ್‌ಗಳ ಬಸ್ ಕಾರ್ಯಾಚರಣೆ ಇರುತ್ತದೆ ಎಂದರು.ಕೃಷಿ ಇಲಾಖೆಗೆ ಸೇರಿದ 60 ಲಕ್ಷ ರು. ವೆಚ್ಚದ ರೈತ ಸಂಪರ್ಕ ಕೇಂದ್ರ, ಪಟ್ಟಣದಲ್ಲಿ 4.80 ಕೋಟಿ ರು. ವೆಚ್ಚದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಉಪಾಹಾರ ಗೃಹ, ಹೆಚ್ಚವರಿ ಕಟ್ಟಡ, ಗ್ರಂಥಾಲಯ ಕಟ್ಟಡವನ್ನು ಉದ್ಘಾಟಿಸಿದರು.
ನಂತರ ಪಟ್ಟಣದ ಜಯನಗರ ಬಡಾವಣೆಯಲ್ಲಿ 3.26 ಕೋಟಿ ರು. ವೆಚ್ಚದ ಮೆಟ್ರಿಕ್ ಅನಂತರದ ಬಾಲಕರ ವಿದ್ಯಾರ್ಥಿ ನಿಲಯ, ಜಲಸೂರು ರಾಜ್ಯ ಹೆದ್ದಾರಿ ಬದಿಯಲ್ಲಿರುವ 3.26 ಕೋಟಿ ರು. ವೆಚ್ಚದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಲೋಕಾರ್ಪಣೆಗೊಳಿಸಿದರು. ಉಪಾಹಾರ ಗೃಹದಲ್ಲಿ ಮಧ್ಯಾಹ್ನದ ಊಟವನ್ನು ಸವಿದರು.ವಿದ್ಯಾರ್ಥಿನಿಲಯವನ್ನು ಉತ್ತಮವಾಗಿ ನಿರ್ವಹಿಸಿ ವಿದ್ಯಾರ್ಥಿನಿಯರಿಗೆ ಗುಣಮಟ್ಟದ ಅಹಾರ ನೀಡಿ, ಮಕ್ಕಳು ಸ್ವಚ್ಛತೆ ಕಪಾಡಲು ಕೈ ಜೋಡಿಸಬೇಕು ಎಂದರು.
ಈ ವೇಳೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಆಯಾ ಇಲಾಖೆ ಅಧಿಕಾರಿಗಳು, ಮುಖಂಡರು ಇದ್ದರು.