ಆನ್‌ಲೈನ್‌ ತರಗತಿಗೆ ಸಚಿವರು, ತಜ್ಞರ ವಿರೋಧ

KannadaprabhaNewsNetwork |  
Published : May 13, 2026, 01:00 AM ISTUpdated : May 13, 2026, 10:23 AM IST
School

ಸಾರಾಂಶ

ಆನ್‌ಲೈನ್ ಮಾದರಿ ತರಗತಿ ನಡೆಸುವಂತೆ ಪ್ರಧಾನಿ ಮೋದಿ ಅವರ ಕರೆಗೆ ರಾಜ್ಯದ ಶಿಕ್ಷಣ ಸಚಿವರು, ಶಿಕ್ಷಣ ತಜ್ಞರು, ಖಾಸಗಿ ಶಾಲಾ ಸಂಘಟನೆಗಳ ಪ್ರತಿನಿಧಿಗಳು ತೀವ್ರ ಆಕ್ಷೇಪ, ವಿರೋಧ ವ್ಯಕ್ತಪಡಿಸಿದ್ದಾರೆ.

  ಬೆಂಗಳೂರು :  ದೇಶ ಎದುರಿಸುತ್ತಿರುವ ತೈಲ ಬಿಕ್ಕಟ್ಟು ಪರಿಸ್ಥಿತಿ ನಿರ್ವಹಿಸಲು ಶಾಲೆಗಳಲ್ಲಿ ಕೋವಿಡ್‌ ಸಮಯದಂತೆ ಆನ್‌ಲೈನ್ ಮಾದರಿ ತರಗತಿ ನಡೆಸುವಂತೆ ಪ್ರಧಾನಿ ಮೋದಿ ಅವರ ಕರೆಗೆ ರಾಜ್ಯದ ಶಿಕ್ಷಣ ಸಚಿವರು, ಶಿಕ್ಷಣ ತಜ್ಞರು, ಖಾಸಗಿ ಶಾಲಾ ಸಂಘಟನೆಗಳ ಪ್ರತಿನಿಧಿಗಳು ತೀವ್ರ ಆಕ್ಷೇಪ, ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಮಾಧ್ಯಮಗಳಲ್ಲಿ ಮಾತನಾಡಿದ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಮೋದಿ ಅವರು ಜನಸಾಮಾನ್ಯರಿಗೆ ತಿಳಿವಳಿಕೆ ಇಲ್ಲ ಅಂದುಕೊಂಡಿದ್ದಾರೆ. ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಯುದ್ಧ ಆಗಿರಲಿಲ್ವಾ? ಮೋದಿ ಹೇಳಿದಾಕ್ಷಣ ನಾವು ಮಾಡಬೇಕು ಅಂತ ಏನೂ ಇಲ್ಲ. ಕೇಂದ್ರದವರು ನಮ್ಮ ಮೇಲೆ ದಬ್ಬಾಳಿಕೆ ‌ಮಾಡಲು ಸಾಧ್ಯ ಇಲ್ಲ. ಮುಖ್ಯಮಂತ್ರಿ ಇದ್ದಾರೆ, ಚರ್ಚಿಸುತ್ತೇವೆ ಎಂದು ಹೇಳಿದ್ದಾರೆ.

ಚುನಾವಣೆಗಳು ಬಂದಾಗ ಭಾವನಾತ್ಮಕವಾಗಿ ಜನರ ಜೊತೆ ಆಟ ಆಡುತ್ತಾರೆ. ಕೋವಿಡ್‌ ಅವಧಿಯಲ್ಲಿ ತಮಟೆ ಬಾರಿಸಿ ಎಲ್ಲರನ್ನೂ ಮಂಗ ಮಾಡಿದರು. ಪದೇ ಪದೆ ಜನರನ್ನು ಯಾಮಾರಿಸಲು ಆಗಲ್ಲ. ವಿವಿಧ ರಾಜ್ಯಗಳ ಚುನಾವಣೆಗಳೆಲ್ಲ ಮುಗಿದ ಮೇಲೆ ಪೆಟ್ರೋಲ್‌, ಡೀಸೆಲ್‌ ಕಡಿಮೆ ಬಳಸಿ, ವರ್ಕ್‌ ಫ್ರಂ ಹೋಂ ಮಾಡಿ, ಆನ್‌ಲೈನ್ ತರಗತಿ ಮಾಡಿ ಅಂತ ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರದ ವಿದೇಶಿ ನೀತಿ ನಿರೂಪಣೆ ವೈಫಲ್ಯವೇ ಇದಕ್ಕೆಲ್ಲ ಕಾರಣ. ದೇಶದ ಜನರ ಮುಂದೆ ‌ಮೋದಿ ಕ್ಷಮೆ ‌ಕೇಳಬೇಕು ಎಂದರು.

ಜಾಗಟೆ ಹೊಡೆದಷ್ಟು ಸುಲಭ ಅಲ್ಲ:

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಮಾತನಾಡಿ, ಕೇಂದ್ರ ಸರ್ಕಾರ ಹೇಳಿದಾಕ್ಷಣ ನಾವು ಆನ್‌ಲೈನ್‌ ತರಗತಿ ನಡೆಸುವ ಬಗ್ಗೆ ಆದೇಶಿಸಲು ಸಾಧ್ಯವಿಲ್ಲ. ಈ ಬಗ್ಗೆ ಸಿಎಂ ತೀರ್ಮಾನ ತೆಗೆದುಕೊಳ್ಳುತ್ತಾರೆ. ನಮ್ಮಲ್ಲಿ ಆನ್‌ಲೈನ್‌ ತರಗತಿ ನಡೆಸುವಂಥ ಸಮಸ್ಯೆ ಉದ್ಭವಿಸಿಲ್ಲ ಎಂದರು.

ಪ್ರಧಾನಿ ‌ಮೋದಿ ಒಂದು ‌ಕಡೆ ಯಾವುದೇ ‌ಬಿಕ್ಕಟ್ಟು ಇಲ್ಲ, ತೊಂದರೆ ಇಲ್ಲ ಅಂತ ಹೇಳುತ್ತಾರೆ. ಚುನಾವಣೆ ಮುಗಿದ ಮೇಲೆ ಸಮಸ್ಯೆ ಶುರುವಾಗಿದೆ ಅಂತಾರೆ. ಇವರ ದ್ವಂದ್ವ ‌ನಿಲುವಿನಿಂದಲೇ ಜನ ನಂಬಲು ಹೋಗಲ್ಲ. ವಿಶ್ವಗುರು ಅಂತ ಹೇಳ್ತಾರೆ. ಕೋವಿಡ್‌ಗೂ ಇದಕ್ಕೂ ಅಜಾಗಜಾಂತರ ವ್ಯತ್ಯಾಸ ಇದೆ. ಕೋವಿಡ್ ‌ನಲ್ಲಿ ಇಡೀ ವಿಶ್ವವೇ ತಲ್ಲಣಗೊಂಡಿತ್ತು. ಇವರು ‌ಜಾಗಟೆ ಬಡೆದಷ್ಟೇ ಸುಲಭ ಅಲ್ಲ ಈಗ. ಇದಕ್ಕೆ ‌ಕಾಲವೇ ಉತ್ತರ ಕೊಡಲಿದೆ ಎಂದು ಹೇಳಿದರು.

ಖಾಸಗಿ ಶಾಲಾ ಸಂಘಟನೆಗಳ ವಿರೋಧ

ಪ್ರಧಾನಿ ಅವರ ಆನ್‌ಲೈನ್‌ ಶಿಕ್ಷಣದ ಸಲಹೆಗೆ ಖಾಸಗಿ ಶಾಲಾ ಸಂಘಟನೆಗಳಾದ ಕ್ಯಾಮ್ಸ್‌, ಕುಸ್ಮಾ, ಕೃಪಾ ಸೇರಿ ವಿವಿಧ ಸಂಘಟನೆಗಳ ಪ್ರತಿನಿಧಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಕ್ಯಾಮ್ಸ್‌ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್‌, ಪ್ರಧಾನಿ ಅವರ ಸಲಹೆ ಅತ್ಯಂತ ವಿಷಾದನೀಯ. ಇದು ಅವೈಜ್ಞಾನಿಕ ಸಲಹೆ. ಕೋವಿಡ್‌ ಸಮಯದಲ್ಲಿ ಆನ್‌ಲೈನ್‌ ಮಾದರಿ ಅನುಸರಿಸಿದ್ದರಿಂದ ಮಕ್ಕಳಿಗೆ ಶೈಕ್ಷಣಿಕವಾಗಿ ಆದ ಅನ್ಯಾಯ ಇಂದಿಗೂ ಸರಿಹೋಗಿಲ್ಲ. ಕಲಿಕಾ ಗುಣಮಟ್ಟವೂ ಕುಸಿದಿದೆ. ಯಾವುದೇ ಸಂದರ್ಭದಲ್ಲೂ ಆನ್‌ಲೈನ್‌ ಶಿಕ್ಷಣ ಶಾಲಾ ಮಕ್ಕಳಿಗೆ ಪರ್ಯಾಯ ಅಲ್ಲ. ಕಲಿಕಾ ವಿಧಿ ವಿಧಾನಕ್ಕೆ ಭೌತಿಕ ತರಗತಿ ಅತಿ ಮುಖ್ಯ ಎಂದಿದ್ದಾರೆ.

ಕೃಪಾ ಸಂಘಟನೆ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ, ಶಾಲೆಗಳಲ್ಲಿ ಆನ್ ಲೈನ್ ತರಗತಿ ನಡೆಸಲು ನಮ್ಮ ವಿರೋಧ ಇದೆ. ಮತ್ತೆ ಆನ್‌ಲೈನ್ ತರಗತಿ ನಡೆಸಿದರೆ ಕೋವಿಡ್ ಕಾಲದಂತೆ ಶಿಕ್ಷಣದ ಗುಣಮಟ್ಟ ಕುಸಿಯುವ ಆತಂಕವಿದೆ ಎಂದಿದ್ದಾರೆ.

ಮೋದಿ ಅವರ ಆನ್‌ಲೈನ್‌ ಶಿಕ್ಷಣ ಹೇಳಿಕೆ ಅತ್ಯಂತ ಆತಂಕಕಾರಿ ಮತ್ತು ಮಕ್ಕಳ ವಿರೋಧಿ ಹೇಳಿಕೆ. ಕೋವಿಡ್‌ ಅವಧಿಯ ಆನ್‌ಲೈನ್‌ ಶಿಕ್ಷಣದ ದುಷ್ಪರಿಣಾಮದಿಂದ ಇಂದಿಗೂ ಲಕ್ಷಾಂತರ ಮಕ್ಕಳು ಮಾನಸಿಕ ಒತ್ತಡ, ಏಕಾಂಗಿತನ, ಕಲಿಕಾ ಹಿನ್ನಡೆ, ದೃಷ್ಟಿದೋಷ, ಮೊಬೈಲ್‌ ವ್ಯಸನ ಮತ್ತು ಸಾಮಾಜಿಕ ಸಂಬಂಧ ಕಡಿಗೊಳಿಸುವಂಥ ಗಂಭೀರ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಶಿಕ್ಷಣ ಕೇವಲ ಪಠ್ಯವಿಷಯವನ್ನು ಆನ್‌ಲೈನ್‌ ತರಗತಿಯಲ್ಲಿ ನೀಡುವ ನಿಷ್ಕ್ರಿಯ ಪ್ರಕ್ರಿಯೆಯಲ್ಲ. ಮಕ್ಕಳ ಬೌದ್ಧಿಕ, ಮಾನಸಿಕ ಮತ್ತು ದೈಹಿಕ ಸೇರಿ ಸಮಗ್ರ ಬೆಳವಣಿಗೆಯ ಪ್ರಕ್ರಿಯೆಯಾಗಿದೆ.

- ನಿರಂಜನಾರಾಧ್ಯ, ಶಿಕ್ಷಣ ತಜ್ಞ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಖಾಲಿ ಕುರ್ಚಿ ಇಟ್ಟು ಎಚ್‌ಡಿಕೆ ಹೈಡ್ರಾಮಾ: ಸಚಿವರ ಟೀಕೆ
ಮಾದಕ ಮುಕ್ತ ಭಾರತಕ್ಕೆ ಕೈಜೋಡಿಸಿ: ಗೌರ್ನರ್‌