ಹಾವೇರಿ: ನಗರದಲ್ಲಿ ಡಿಸಿಸಿ ಬ್ಯಾಂಕ್ ಪ್ರಾದೇಶಿಕ ಕಚೇರಿ ಆರಂಭಿಸುವುದು ಸೇರಿದಂತೆ, ಇತರ ಕೆಲ ಬೇಡಿಕೆಗಳ ಈಡೇರಿಸಿಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹಾಗೂ ಜಿಲ್ಲೆಯ ಶಾಸಕರು ರೈತ ಮುಖಂಡರಿಗೆ ಭರವಸೆ ನೀಡಿದ್ದಾರೆ.
ಹಾವೇರಿ ಜಿಲ್ಲಾಧಿಕಾರಿ ಕಚೇರಿ ಎದುರು ವಿವಿಧ ಬೇಡಿಕೆಗಳ ಈಡೇರಿಕೆಗ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ 12 ದಿನಗಳಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಸುವರ್ಣಸೌಧದಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ಜರುಗಿತು.ರೈತರ ಬೇಡಿಕೆಗಳನ್ನು ಆಲಿಸಿದ ಸಚಿವ ಶಿವಾನಂದ ಪಾಟೀಲ, ಡಿಸಿಸಿ ಬ್ಯಾಂಕ್ ವಿಭಜನೆ ಕಷ್ಟ. ಆರ್ಥಿಕ ಸಂಕಷ್ಟದಲ್ಲಿರುವ ಧಾರವಾಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವಿಭಜನೆ ಮಾಡಿದರೆ ಮುಚ್ಚುವ ಸ್ಥಿತಿ ನಿರ್ಮಾಣವಾಗಲಿದೆ. ಹೀಗಾಗಿ, ಹಾವೇರಿಯಲ್ಲಿ ಪ್ರಾದೇಶಿಕ ಕಚೇರಿ ಆರಂಭಿಸಿ ಹಾವೇರಿ ಜಿಲ್ಲೆಯ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಹೇಳಿದರು.
ನಬಾರ್ಡ್ ಪುನರ್ಧನ ಪ್ರಮಾಣ ಕಡಿಮೆಯಾಗಿರುವುದರಿಂದ ಕೃಷಿ ಸಾಲ ವಿತರಣೆ ಸಮಸ್ಯೆಯಾಗುತ್ತಿದೆ. ಡಿಸಿಸಿ ಬ್ಯಾಂಕುಗಳು ಪ್ರತಿಶತ ಶೇ. 60ರಷ್ಟು ಕೃಷಿಗೆ ಶೇ. 40ರಷ್ಟು ಕೃಷಿಯೇತರ ಸಾಲ ನೀಡುತ್ತಿದ್ದವು. ಕೃಷಿ ಸಾಲ ವಸೂಲಾತಿಯಲ್ಲಿ ಸಮಸ್ಯೆಯಾದರೆ ಕೃಷಿಯೇತರ ಸಾಲದಿಂದ ಸರಿಪಡಿಸಿಕೊಳ್ಳಲಾಗುತ್ತಿತ್ತು. ನಬಾರ್ಡ್ ಪುನರ್ಧನ ಪ್ರಮಾಣ ಕಡಿಮೆಯಾಗಿರುವುದರಿಂದ ಡಿಸಿಸಿ ಬ್ಯಾಂಕುಗಳ ಸಾಲ ವಿತರಣಾ ಸಾಮರ್ಥ್ಯ ಕಡಿಮೆಯಾಗುತ್ತಿದೆ ಎಂದು ವಿವರಿಸಿದರು.ಕೃಷಿ ಪಂಪ್‌ಸೆಟ್‌ಗಳಿಗೆ ಸೋಲಾರ್ ಅಳವಡಿಸುವ ಯೋಜನೆ ಸಾಧುವಲ್ಲ ಎಂದು ರೈತ ಸಂಘದ ಮುಖಂಡರು ಪ್ರತಿಪಾದನೆ ಮಾಡಿದ ಹಿನ್ನೆಲೆಯಲ್ಲಿ ಪ್ರಾಯೋಗಿಕವಾಗಿ ಹಾವೇರಿಯಲ್ಲಿ ಸೋಲಾರ್ ಪಂಪ್‌ಸೆಟ್ ಯೋಜನೆ ಅನುಷ್ಠಾನಕ್ಕೆ ತರಬೇಕು. ಯಶಸ್ವಿಯಾದರೆ ಮಾತ್ರ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ತರಬೇಕು ಎಂದು ಸಚಿವರು ಹೇಳಿದರು.
ಸೋಲಾರ್ ಪಂಪ್‌ಸೆಟ್ ಯೋಜನೆಗೆ ರೈತ ಸಂಘ ವಿರೋಧವಿಲ್ಲ. ಆದರೆ, ಈ ಯೋಜನೆ ಯಶಸ್ವಿಯಾಗುವುದಿಲ್ಲ ಎಂಬ ಅನುಮಾನ ಇದೆ. 500 ಅಡಿ ನೀರು ಎತ್ತಲು ಸಾಧ್ಯವಿಲ್ಲ. ಹೀಗಾಗಿ, ನಮ್ಮ ವಿರೋಧವಿದೆ. ಯಶಸ್ವಿಯಾದರೆ ನಮ್ಮ ತಕರಾರು ಇಲ್ಲ ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು.ಬೆಳೆ ವಿಮಾ ಯೋಜನೆಯಲ್ಲಿ ಇನ್ನೂ 33 ಅರ್ಜಿಗಳು ಇತ್ಯರ್ಥವಾಗಬೇಕಿದೆ. 102 ಅರ್ಜಿಗಳಲ್ಲಿ 69 ಇತ್ಯರ್ಥವಾಗಿದ್ದು, ಬಾಕಿ ಉಳಿದ ಅರ್ಜಿಗಳನ್ನೂ ಶೀಘ್ರ ಇತ್ಯರ್ಥಪಡಿಸಬೇಕು ಎಂದು ಮನವಿ ಮಾಡಿದರು. ವಿವರ ಪಡೆದ ಸಚಿವರು ಸಂಬಂಧಪಟ್ಟ ವಿಮಾ ಕಂಪನಿಯೊಂದಿಗೆ ಚರ್ಚಿಸಿ ಪರಿಹರಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ₹30 ಕೋಟಿ ಬೆಳೆಹಾನಿ ಪರಿಹಾರ ಕೊಡಬೇಕಾಗಬಹುದು. ಇದು ಖಾಸಗಿ ವಿಮಾ ಕಂಪನಿಗೆ ಹೊರೆಯಾಗದು. ಆದ್ದರಿಂದ ಇತ್ಯರ್ಥಪಡಿಸಿ ಎಂದು ರೈತ ಮುಖಂಡರು ಮನವಿ ಮಾಡಿದರು.
ವಿದ್ಯುತ್ ಸಮಸ್ಯೆ ಬಗ್ಗೆ ಹಾಗೂ ಟ್ರಾನ್ಸ್‌ಫಾರ್ಮರ್ ಸುಟ್ಟು ರೈತರಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಹುಬ್ಬಳ್ಳಿ ವಿದ್ಯುತ್ ಕಂಪನಿ ವ್ಯವಸ್ಥಾಪಕ ನಿರ್ದೇಶಕಿ ವೈಶಾಲಿ ಅವರು ಸಮಸ್ಯೆಗಳನ್ನು ಆಲಿಸಿ ತ್ವರಿತವಾಗಿ ಪರಿಹರಿಸುವ ಭರವಸೆ ನೀಡಿದರು. ಟೆಂಡರ್ ಪಡೆದು ಕೆಲಸ ಮಾಡದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಎಂದು ರೈತ ಮುಖಂಡರು ಆಗ್ರಹಪಡಿಸಿದರು.ಅತಿವೃಷ್ಟಿ ಹಾನಿ ಪರಿಹಾರ ಕೆಲ ತಾಂತ್ರಿಕ ಕಾರಣಗಳಿಗೆ ಬಾಕಿ ಇದೆ. ತ್ವರಿತವಾಗಿ ಪರಿಹಾರ ವಿತರಣೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಸಭೆಗೆ ತಿಳಿಸಿದರು. ಎಸ್‌ಡಿಆರ್‌ಎಫ್ ಮಾದರಿಯಲ್ಲಿ ಪರಿಹಾರ ನೀಡಬೇಕು ಎಂದು ರೈತ ಮುಖಂಡರು ಮನವಿ ಮಾಡಿದರು. ಹಾಲಿನ ಪ್ರೋತ್ಸಾಹ ಧನ ಬಾಕಿ ಇರುವ ಬಗ್ಗೆ ಮಾಹಿತಿ ಪಡೆದ ಸಚಿವರು ಬಾಕಿ ಪ್ರೋತ್ಸಾಹ ಧನ ಬಿಡುಗಡೆ ಮಾಡಿ ಎಂದು ನಿರ್ದೇಶಿಸಿದರು.
ಸಭೆಯಲ್ಲಿ ಶಾಸಕರಾದ ದರ್ಶನ ಪುಟ್ಟಣ್ಣಯ್ಯ, ಯು.ಬಿ. ಬಣಕಾರ, ಬಸವರಾಜ ಶಿವಣ್ಣವರ, ಯಾಸೀರ್ ಖಾನ್ ಪಠಾಣ, ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವ ನೀರಲಿಗಿ, ಹೆಸ್ಕಾಂ ಎಂಡಿ ವೈಶಾಲಿ, ಕೃಷಿ ನಿರ್ದೇಶಕ ಜಿ. ಪುತ್ರ, ಕೆಎಂಎಫ್ ಜಂಟಿ ನಿರ್ದೇಶಕ ಡಾ. ಕೆಂಪರಾಜ, ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.ಹೋರಾಟ ಕೈಬಿಡುವ ಕುರಿತು ನಿರ್ಧಾರ ಇಂದುಜಿಲ್ಲಾ ಉಸ್ತುವಾರಿ ಸಚಿವರು ರೈತ ಮುಖಂಡರನ್ನು ವಿಧಾನಸೌಧಕ್ಕೆ ಕರೆಸಿ ಚರ್ಚೆ ಮಾಡಿದ್ದಕ್ಕೆ ಧನ್ಯವಾದಗಳು. ಆದರೆ, ಅಹೋರಾತ್ರಿ ಧರಣಿ ನಿಲ್ಲಿಸಬೇಕೋ ಬೇಡವೋ ಎಂಬ ಕುರಿತು ಬುಧವಾರ ರೈತರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಹಾಗೂ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ತಿಳಿಸಿದ್ದಾರೆ.ಮುಖಂಡರ ಜೊತೆ ಚರ್ಚೆಕೆಡಿಪಿ ಸಭೆಗೆ ಪೂರ್ವದಲ್ಲಿ ರೈತ ಸಂಘದ ಮುಖಂಡರ ಸಭೆ ಕರೆದು ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಾಗುವುದು. ರೈತರ ಬೇಡಿಕೆಗಳ ಬಗ್ಗೆ ಮಾಹಿತಿ ಇದ್ದರೆ ಪರಿಹಾರಕ್ಕೆ ಅನುಕೂಲವಾಗಲಿದೆ. ಹೀಗಾಗಿ ಇನ್ನು ಮುಂದೆ ಕೆಡಿಪಿ ಸಭೆಗೆ ಮುನ್ನ ರೈತ ಮುಖಂಡರೊಂದಿಗೆ ಚರ್ಚೆ ಮಾಡಲಾಗುವುದು.
- ಶಿವಾನಂದ ಪಾಟೀಲ, ಸಚಿವ