ಕನ್ನಡಪ್ರಭ ವಾರ್ತೆ ವಿಜಯಪುರ
ತಾಲೂಕಿನ ಮಡಸನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಜ್ವಲಂತ ಸಮಸ್ಯೆಯನ್ನು ನಿವಾರಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಈ ವೇಳೆ ರೈತ ಮುಖಂಡ ಸತೀಶ ಪಾಟೀಲ ಮಾತನಾಡಿ, ಜಲಜೀವನ ಮಿಷನ್ ಕಾಮಗಾರಿ ಪೂರ್ಣಗೊಂಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ತವರೂರಲ್ಲಿ ನೀರಿನ ಜ್ವಲಂತ ಸಮಸ್ಯೆ ಉಂಟಾಗಿದ್ದು ನಾಚಿಗೇಡಿತ. ಸಾಕಷ್ಟು ಬಾರಿ ನೀರಿನ ತೊಂದರೆ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಸಚಿವರಿಗೆ ವಿನಂತಿಸಿಕೊಂಡರು ಯಾವುದೇ ಪ್ರಯೋಜನವಾಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರೇ ಕುಡಿಯೋದಕ್ಕೆ ನೀರು ಕೊಡಿ. ಇದು ನಮ್ಮ ದೌರ್ಬಾಗ್ಯ ಎಂದು ಸಚಿವ ಎಂ.ಬಿ.ಪಾಟೀಲ, ಶಾಸಕ ವಿಠ್ಠಲ ಕಟಕದೊಂಡ ಕಾಣೆಯಾಗಿದ್ದಾರೆ. ತಮ್ಮದೇ ಸರ್ಕಾರವಿದ್ದರೂ ನೀರಿನ ಭವಣೆ ನೀಗಿಸದ ಪ್ರಶಂಸೆ ಇವರಿಗಿದೆ. ಇಂತಹ ನಾಯಕರು ನಮಗೇಕೆ ಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕನ್ನೂರನಿಂದ ೨.೫ ಕಿ.ಮೀ ದೂರದಲ್ಲಿರುವ ಮಡಸನಾಳ ಗ್ರಾಮಕ್ಕೆ ನಿರ್ಮಾಣವಾದ ಕೆರೆಗೆ ಪೈಪ್ ಲೈನ್ ಮುಖಾಂತರ ನೀರು ತುಂಬಿಸಿ ಶಾಸ್ವತ ನೀರಿನ ಸಮಸ್ಯೆ ಬಗೆ ಹರಿಸಬೇಕು ಎಂದು ಒತ್ತಾಯಿಸಿದರು.ಸುಭಾಸಗೌಡ ಪಾಟೀಲ ಮಾತನಾಡಿ, ನೀರಿನ ಸಮಸ್ಯೆಗಾಗಿ ತಕ್ಷಣ ಕ್ರಮವಹಿಸಿ ಜೀವಗಳಿಗೆ ನೀರಿನ ದಾಹ ತಣಿಸಬೇಕೆಂದರು. ನಮ್ಮ ಊರಲ್ಲಿ ಕೆರೆ ನಿರ್ಮಾಣವಾಗಿ ೩ ವರ್ಷ ಗತಿಸಿವೆ. ಕುಡಿಯುವ ನೀರು ನೀಡಬೇಕು. ನಮ್ಮ ಭಾಗದಲ್ಲಿಯೇ ಕೆನಾಲ್ ಹೋದರು ನಮಗೆ ನೀರಿನ ತೊಂದರೆಯಾಗುತ್ತಿದ್ದು, ತಕ್ಷಣ ಸಮಸ್ಯೆ ನೀಗಿಸಬೇಕು ಎಂದು ಒತ್ತಾಯಿಸಿದರು.ಗ್ರಾಪಂ ಅಧ್ಯಕ್ಷ ವಿಠ್ಠಲ ಭಜಂತ್ರಿ, ಗ್ರಾಪಂ ಸದಸ್ಯರಾದ ಮಾಸಿದ ಪೂಜಾರಿ, ಭೀಮರಾವ್ ಶಿಂದೆ, ಪುಂಡಲೀಕ ಇಚ್ಚೂರ, ಬಂದು ಶಿಂದೆ, ರವಿಕುಮಾರ ಭವಾನಿಮಠ, ಗಿರಿಮಲ್ಲಗೌಡ ಪಾಟೀಲ, ದತ್ತು ಕಾಂಬಳೆ, ಮಾಳಪ್ಪ ಹಿಪ್ಪರಗಿ, ರಫೀಕ ಮುಲ್ಲಾ ಮುಂತಾದವರು ಇದ್ದರು.