- ₹35 ಸಾವಿರ ದಂಡ ವಿಧಿಸಿ ತೀರ್ಪು । ನ್ಯಾಮತಿ ತಾಲೂಕಿನ ಜಿ.ಕಡದಕಟ್ಟೆ ವಾಸಿ ಚಂದ್ರು ಅಪರಾಧಿ
- - -ದಾವಣಗೆರೆ: ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ, ₹35 ಸಾವಿರ ದಂಡ ವಿಧಿಸಿ, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್‌ಟಿಎಸ್‌ಸಿ-1 ನ್ಯಾಯಾಲಯ ತೀರ್ಪು ನೀಡಿದೆ.
ನ್ಯಾಮತಿ ತಾಲೂಕಿನ ಜಿ.ಕಡದಕಟ್ಟೆ ಗ್ರಾಮದ ವಾಸಿ ಚಂದ್ರು ಅಲಿಯಾಸ್ ಚಂದ್ರಪ್ಪ (23) ಅಪರಾಧಿ. 17 ವರ್ಷದ ಅಪ್ರಾಪ್ತೆಯನ್ನು 2 ವರ್ಷಗಳ ಮುಂಚೆ ಅಪಹರಿಸಿದ್ದ ಚಂದ್ರು ವಿರುದ್ಧ ನ್ಯಾಮತಿ ಠಾಣೆಯಲ್ಲಿ ಬಾಲಕಿ ಪಾಲಕರು ದೂರು ನೀಡಿದ್ದರು. ಪೊಲೀಸರು ಬಂಧಿಸಿ, ಜೈಲಿಗೆ ಕಳಿಸಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದನು.ಇಷ್ಟಾದರೂ, ಅಪ್ರಾಪ್ತೆಯ ಊರಿನಲ್ಲೇ ಸಂಬಂಧಿಕರ ಮನೆಯಲ್ಲಿದ್ದ ಚಂದ್ರ, ಬಾಲಕಿಯ ತಂದೆ, ತಾಯಿ ಕೆಲಸಕ್ಕೆ ಹೋಗಿದ್ದಾಗ ಪ್ರೀತಿ, ಮದುವೆ ಎಂದು ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದನು. ಆಗಲೂ ಮಗಳ ತಂಟೆಗೆ ಬರದಂತೆ ಪೋಷಕರು ಬುದ್ಧಿ ಹೇಳಿದ್ದರು. ಅಪ್ರಾಪ್ತೆ ಪೋಷಕರ ಮಾತಿಗೆ ಕಿಮ್ಮತ್ತು ನೀಡದ ಆರೋಪಿ ಚಂದ್ರು 2022ರ ಜೂನ್ 6ರಂದು ರಾತ್ರಿ ಬಾಲಕಿಯ ಮೇಲೆ ಲೈಂಗಿಕ ಸಂಪರ್ಕ ನಡೆಸಿದ್ದನು. ಗರ್ಭಿಣಿಯಾಗಿದ್ದು ತಿಳಿದು ಮನೆಯಲ್ಲಿದ್ದ ಯಾವುದೋ ಮಾತ್ರೆ ನುಂಗಿ ಹೊಟ್ಟೆನೋವು ಎಂದ ಮಗಳನ್ನು ವೈದ್ಯರು ತಪಾಸಣೆ ನಡೆಸಿದಾಗ ಆಕೆ ನಾಲ್ಕೂವರೆ ತಿಂಗಳ ಗರ್ಭಿಣಿ ಎಂಬ ವಿಚಾರ ಗೊತ್ತಾಯಿತು.
ಆಗ ಬಾಲಕಿಯ ಪೋಷಕರು ಚಂದ್ರು ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನ್ಯಾಮತಿ ಠಾಣೆಯಲ್ಲಿ ದೂರು ನೀಡಿದ್ದರಿಂದ ಕಲಂ 376(2)(ಎನ್), 506 ಐಪಿಸಿ ಮತ್ತು 6 ಪೋಕ್ಸೋ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಲಾಗಿತ್ತು. ಆಗಿನ ಹೊನ್ನಾಳಿ ವೃತ್ತ ನಿರೀಕ್ಷಕ ಟಿ.ವಿ. ದೇವರಾಜ ತನಿಖೆ ಕೈಗೊಂಡು, ತನಿಖೆ ನಡೆಸಿ, ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್‌ಟಿಎಸ್‌ಸಿ-1 ನ್ಯಾಯಾಲಯದ ನ್ಯಾಯಾಧೀಶ ಶ್ರೀರಾಮ ನಾರಾಯಣ ಹೆಗಡೆ ಅವರು ಚಂದ್ರು ಅಲಿಯಾಸ್ ಚಂದ್ರಪ್ಪನನ್ನು ಅಪರಾಧಿ ಎಂದು ತೀರ್ಮಾನಿಸಿ, ತೀರ್ಪು ಘೋಷಿಸಿದರು. ಅಪರಾಧಿ ಆರೋಪಿ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದು, ಈ ಅವಧಿ ಪರಿಗಣಿಸಿ, ಶಿಕ್ಷೆ ಅವಧಿ ಸೆಟ್ ಆಫ್ ಮಾಡಲಾಗಿದೆ. ಆರೋಪಿಯಿಂದ ವಸೂಲು ಮಾಡಿದ ದಂಡದ ಒಟ್ಟು ಮೊತ್ತ ₹35 ಸಾವಿರವನ್ನು ಸಂತ್ರಸ್ಥೆಗೆ ನೀಡಬೇಕು. ಅಲ್ಲದೆ, ಸಂತ್ರಸ್ಥೆಗೆ ಸರ್ಕಾರದಿಂದ ₹4 ಲಕ್ಷ ಪರಿಹಾರ ನೀಡುವಂತೆ ತೀರ್ಪು ನೀಡಿದರು.
ಪ್ರಕರಣದಲ್ಲಿ ಪಿರ್ಯಾದಿ ಪರ ಸರ್ಕಾರಿ ವಕೀಲ ಎ.ಎಂ.ಬಸವರಾಜ ನ್ಯಾಯ ಮಂಡನೆ ಮಾಡಿದರು. ತನಿಖಾಧಿಕಾರಿ ಟಿ.ಎನ್. ದೇವರಾಜ, ಸಿಬ್ಬಂದಿ ಹಾಗೂ ಸರ್ಕಾರಿ ವಕೀಲರಿಗೆ ಎಸ್‌ಪಿ ಉಮಾ ಪ್ರಶಾಂತ ಅಭಿನಂದಿಸಿದ್ದಾರೆ.- - -
(ಸಾಂದರ್ಭಿಕ ಚಿತ್ರ)