ಶಿರಪೂರ ನೀರಾವರಿ ಹೆಸರಿನಲ್ಲಿ ಅವ್ಯವಹಾರ

KannadaprabhaNewsNetwork |  
Published : May 17, 2025, 01:20 AM IST
ಫೋಟೋ- ಸುಭಾಸ ಗುತ್ತೇದಾರ | Kannada Prabha

ಸಾರಾಂಶ

ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ವಿವಿಧ ಗ್ರಾಮಗಳಾದ ಸರಸಂಬಾ, ನಾಗಲೇಗಾಂವ, ಸಕ್ಕರಗಾ, ಅಂಬೇವಾಡ, ಕಿಣಿ ಅಬ್ಬಾಸ, ಚಿಂಚೋಳಿ (ಕೆ), ಚಿಂಚೋಳಿ (ಬಿ) ಮತ್ತು ಸಾವಳೇಶ್ವರ ಗ್ರಾಮಗಳಲ್ಲಿ ಶಿರಪೂರ ಮಾದರಿಯ ನಾಲಾ ಹೂಳೆತ್ತುವುದು ಮತ್ತು ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗಳಲ್ಲಿ ಭಾರಿ ಅವ್ಯವಹಾರ ನಡೆಯುತ್ತಿದ್ದು ಗುತ್ತಿಗೆದಾರರು ಮತ್ತು ಎಂಜಿನಿಯರರು ಸೇರಿಕೊಂಡು 20 ಕೋಟಿ ರು. ಲೂಟಿ ಮಾಡುತ್ತಿರುವುದನ್ನು ಕೂಡಲೇ ತಡೆಹಿಡಿದು ಸರಕಾರದ ನಿಯಮಗಳ ಪ್ರಕಾರ ತನಿಖೆ ಮಾಡುವಂತೆ ಮಾಜಿ ಶಾಸಕ ಸುಭಾಷ್ ಗುತ್ತೇದಾರ ಆಗ್ರಹಿಸಿದ್ದಾರೆ.

ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ವಿವಿಧ ಗ್ರಾಮಗಳಾದ ಸರಸಂಬಾ, ನಾಗಲೇಗಾಂವ, ಸಕ್ಕರಗಾ, ಅಂಬೇವಾಡ, ಕಿಣಿ ಅಬ್ಬಾಸ, ಚಿಂಚೋಳಿ (ಕೆ), ಚಿಂಚೋಳಿ (ಬಿ) ಮತ್ತು ಸಾವಳೇಶ್ವರ ಗ್ರಾಮಗಳಲ್ಲಿ ಶಿರಪೂರ ಮಾದರಿಯ ನಾಲಾ ಹೂಳೆತ್ತುವುದು ಮತ್ತು ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗಳಲ್ಲಿ ಭಾರಿ ಅವ್ಯವಹಾರ ನಡೆಯುತ್ತಿದ್ದು ಗುತ್ತಿಗೆದಾರರು ಮತ್ತು ಎಂಜಿನಿಯರರು ಸೇರಿಕೊಂಡು 20 ಕೋಟಿ ರು. ಲೂಟಿ ಮಾಡುತ್ತಿರುವುದನ್ನು ಕೂಡಲೇ ತಡೆಹಿಡಿದು ಸರಕಾರದ ನಿಯಮಗಳ ಪ್ರಕಾರ ತನಿಖೆ ಮಾಡುವಂತೆ ಮಾಜಿ ಶಾಸಕ ಸುಭಾಷ್ ಗುತ್ತೇದಾರ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಳಂದ ತಾಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಮಂಜೂರಾಗಿರುವ ಕಾಮಗಾರಿಗಳಾದ ಇಂಡೆಂಟ್ ನಂ. 1614- ಆಳಂದ ತಾಲೂಕಿನ ಸರಸಂಬಾ ಮತ್ತು ನಾಗಲೇಗಾಂವ ಗ್ರಾಮಗಳ ಹತ್ತಿರದ ನಾಲಾ ಹೂಳೆತ್ತುವುದು ಮತ್ತು ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಯು ಸಂಪೂರ್ಣ ಕಳಪೆ ಮಟ್ಟದಾಗಿದ್ದು, ಸರ್ಕಾರದ ನಿಯಮಗಳ ಪ್ರಕಾರ ಅಂದಾಜು ಪಟ್ಟಿಯಲ್ಲಿರುವಂತೆ ಕಾಮಗಾರಿ ಮಾಡಿಲ್ಲ. ನಾಲಾ ಹೂಳೆತ್ತುವ ಕಾಮಗಾರಿಯು ಆಳ ಮತ್ತು ಅಗಲ ವಿಸ್ತೀರ್ಣ ಸುಳ್ಳು ದಾಖಲೆಗಳನ್ನು ತಯಾರಿಸಿ 9.80 ಕೋಟಿ ರು. ಲೂಟಿ ಮಾಡುತ್ತಿರುವುದನ್ನು ಕೂಡಲೇ ತಡೆ ಹಿಡಿಯಬೇಕು. ಸುಳ್ಳು ಲೆಕ್ಕ ಬರೆದಿರುವ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮ್ಮೆ ಹೂಡಬೇಕು. ಸರಸಂಬಾ ಮತ್ತು ನಾಗಲೇಗಾಂವ ಗ್ರಾಮಗಳಲ್ಲಿ ಎಷ್ಟು ಕೀಲೋ ಮೀಟರ್ ನಾಲಾ ಇದೆ ಎನ್ನುದನ್ನು ಮೊದಲು ಪತ್ತೆ ಹಚ್ಚಬೇಕೆಂದು ಒತ್ತಾಯಿಸಿದರು.

ಈ ಹಿಂದೆ ಶಿರಪೂರ ಮಾದರಿ ಎಂದು ಹೇಳಿ 20 ಕೋಟಿ ರು. ಕಾಮಗಾರಿ ಮಾಡಿದ ಸ್ಥಳ ಯಾವುದು? ಈಗ ಮಾಡುತ್ತಿರುವ ಸ್ಥಳ ಯಾವುದು?. ಈ ಹಿಂದಿನ ಲೆಕ್ಕ ತಪಾಸಣಾ ವರದಿ ( 2016- 2017ರಲ್ಲಿ) ತರಿಸಿಕೊಂಡು ಸ್ಥಳ ಪರಿಶೀಲಿಸಬೇಕು. ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಯು ಸಂಪೂರ್ಣ ಕಳಪೆ ಮಟ್ಟದಾಗಿ ನಿರ್ಮಿಸಿದ್ದು, ಅಂದಾಜು ಪಟ್ಟಿಯಲ್ಲಿರುವಂತೆ ಸಾಮಗ್ರಿಗಳನ್ನು ಬಳಸಿಲ್ಲ. ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರದ ಹಣ ಲೂಟಿ ಮಾಡುತ್ತಿದ್ದಾರೆಂದು ದೂರಿದರು.

ಇಂಡೆಂಟ್ ನಂ.1615- ಆಳಂದ ತಾಲೂಕಿನ ಚಿಂಚೋಳಿ(ಕೆ) ಮತ್ತು ಚಿಂಚೋಳಿ(ಬಿ) ಗ್ರಾಮಗಳ ಹತ್ತಿರದ ನಾಲಾ ಹೂಳೆತ್ತುವುದು ಮತ್ತು ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಯಲ್ಲಿ ಭಾರಿ ಅಕ್ರಮ ನಡೆದಿದ್ದು, 2014- 15 ಮತ್ತು 2015-16ನೇ ಸಾಲಿನಲ್ಲಿ ಇದೇ ಗ್ರಾಮಗಳ ಇದೇ ನಾಲಾಗಳಲ್ಲಿ ಇದೇ ರೀತಿಯ ಕಾಮಗಾರಿ ಮಾಡಿ ಸರ್ಕಾರದ 20 ಕೋಟಿ ರು. ಎತ್ತಿ ಹಾಕಿರುತ್ತಾರೆ. ಈಗ ಮತ್ತೆ ಅದೇ ಗ್ರಾಮಗಳಲ್ಲಿ ಒಂದೇ ರೀತಿಯ ಕಾಮಗಾರಿ ಮಾಡುತ್ತಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಅಲ್ಲದೇ ನರೇಗಾ ಕ್ರಿಯಾಯೋಜನೆಯಗಳಲ್ಲಿಯೂ ಪಡಸಾವಳಿ ಗ್ರಾಪಂ ವ್ಯಾಪ್ತಿಯಲ್ಲಿನ ಚಿಂಚೋಳಿ(ಕೆ), ಚಿಂಚೋಳಿ(ಬಿ) ಗ್ರಾಮಗಳಲ್ಲಿ ಇದೇ ನಾಲಾಗಳ ಹೂಳೆತ್ತುವ ಕಾಮಗಾರಿಗಳು ಇವೆ. ಹಾಗಾದರೆ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಮಾಡಿರುವ ಕಾಮಗಾರಿ ಯಾವುದು? ಶಿರಪೂರ ಮಾದರಿಯಲ್ಲಿ ಮಾಡುತ್ತಿರುವ ಕಾಮಗಾರಿ ಯಾವುದು?. ಇಲ್ಲಿ ಭಾರಿ ಅಕ್ರಮ ನಡೆದಿರುವುದು ಕಂಡು ಬರುತ್ತದೆ ಎಂದು ಸಂಶಯ ವ್ಯಕ್ತಪಡಿಸಿದರು.

ಕಿಣಿ ಅಬ್ಬಾಸ, ಸಕ್ಕರಗಾ ಮತ್ತು ಅಂಬೆವಾಡ ಗ್ರಾಮಗಳಲ್ಲಿ ಶಿರಪೂರ ಮಾದರಿಯ ಚೆಕ್ ಡ್ಯಾಮ್ ನಿರ್ಮಾಣ ಮತ್ತು ನಾಲಾ ಹೂಳೆತ್ತುವ ಕಾಮಗಾರಿಗಳಿಗಾಗಿ 5 ಕೋಟಿ 96 ಲಕ್ಷ ರು. ಮಂಜೂರಾಗಿದೆ. ಅಂಬೆವಾಡ ಮತ್ತು ಕಿಣಿ ಅಬ್ಬಾಸ್ ಗ್ರಾಮಗಳು ಸಾವಳೇಶ್ವರ ಗ್ರಾಪಂ ವ್ಯಾಪ್ತಿಯಲ್ಲಿ ಬರುತ್ತವೆ. ಸಕ್ಕರಗಾ ಗ್ರಾಮವು ಸರಸಂಬಾ ಗ್ರಾಪಂ ವ್ಯಾಪ್ತಿಗೆ ಬರುತ್ತದೆ. ಉದ್ಯೋಗ ಖಾತ್ರಿಯಲ್ಲಿ ಮಾಡಿದ ಚೆಕ್ ಡ್ಯಾಮ್ ಯಾವುದು?. ಉದ್ಯೋಗ ಖಾತ್ರಿಯಲ್ಲಿ ಹೂಳೆತ್ತಿದ ನಾಲಾ ಯಾವುದು? ಕೃಷಿ ಇಲಾಖೆಯ ಜಲಾನಯನ ಕಾಮಗಾರಿಗಳಲ್ಲಿ ನಿರ್ಮಿಸಿದ ಚೆಕ್ ಡ್ಯಾಮ್‌ಗಳು ಯಾವುವು? ಮತ್ತು ಪ್ರಸ್ತುತ ಶಿರಪೂರ ಮಾದರಿಯಲ್ಲಿ ನಾಲಾ ಹೂಳೆತ್ತುತ್ತಿರುವುದು ಯಾವುದು? ಎಲ್ಲವೂ ಅನುಮಾನಕ್ಕೆ ಕಾರಣವಾಗಿವೆ ಎಂದು ಆರೋಪಿಸಿದರು.

ಕಿಣಿ ಅಬ್ಬಾಸ, ಸಕ್ಕರಗಾ ಮತ್ತು ಅಂಬೇವಾಡ ಗ್ರಾಮಗಳಲ್ಲಿ ಎಷ್ಟು ಕಿಲೋಮೀಟರ್ ನಾಲಾ ಇದೆ ?. ಒಟ್ಟು ಆರು ಕೋಟಿಯಲ್ಲಿ ಎಷ್ಟು ಕಿಲೋಮೀಟರ್ ನಾಲಾ ಹೂಳೆತ್ತಲಾಗಿದೆ. ಎಷ್ಟು ಆಳವಾಗಿ ಹೂಳೆತ್ತಲಾಗಿದೆ?. ಎಲ್ಲವೂ ನಿಗೂಢವಾಗಿದೆ ಇದೊಂದು ಹಣ ಲೂಟಿ ಮಾಡುವ ತಂತ್ರವಾಗಿದೆ ಎಂದರು.

2014- 15 ಮತ್ತು 2015- 16 ನೇ ಸಾಲಿನಲ್ಲಿ ಕೈಗೊಂಡಿರುವ ಕಾಮಗಾರಿಗಳು ಯಾವುವು?. ಎಷ್ಟು ಕೀಲೋ ಮೀಟರ್ ಅದರಿಂದ ಹೆಚ್ಚಾದ ನೀರಾವರಿ ಕ್ಷೇತ್ರ ಎಷ್ಟು?. ಶಿರಪೂರ ಮಾದರಿ ಎಂದು ಖರ್ಚು ಮಾಡಿರುವ 20 ಕೋಟಿ ರು ಮೂಲ ಉದ್ದೇಶವೇನು? ಈ ಪ್ರದೇಶಗಳಲ್ಲಿ ಶಿರಪೂರ ಮಾದರಿಯ ಕಾಮಗಾರಿಯಿಂದ ನೀರನ್ನು ಬಳಸಿಕೊಂಡು ಕೃಷಿ ಮಾಡಿ ಆರ್ಥಿಕವಾಗಿ ಬಲಾಢ್ಯರಾದ ಈ ಭಾಗಗಳ ರೈತರ ಹೆಸರುಗಳನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಆಳಂದ ಮಂಡಲ ಮಾಜಿ ಅಧ್ಯಕ್ಷ ಆನಂದರಾವ ಪಾಟೀಲ ಕೋರಳ್ಳಿ, ಪುರಸಭೆ ಸದಸ್ಯ ಶಿವಪುತ್ರ ನಡಗೇರಿ, ಜಿಲ್ಲಾ ಬಿಜೆಪಿ ಮುಖಂಡ ಸಂತೋಷ ಹಾದಿಮನಿ ಇದ್ದರು.

ತನಿಖೆ ನಡೆಸದಿದ್ದರೆ ಹೋರಾಟ

ಸರ್ಕಾರದ ನಿಯಮಾವಳಿಗಳ ಪ್ರಕಾರ ಅಂದಾಜು ಪಟ್ಟಿಯಲ್ಲಿರುವಂತೆ ಕಾಮಗಾರಿಯನ್ನು ಸಂಪೂರ್ಣ ತನಿಖೆ ಮಾಡಬೇಕು. ಅದಕ್ಕಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳ ತನಿಖಾ ತಂಡ ರಚಿಸಬೇಕು. ಅಲ್ಲಿಯವರೆಗೆ ಬಿಲ್ಲುಗಳನ್ನು ತಡೆ ಹಿಡಿಯಬೇಕು. ಎಲ್ಲಾ ಗ್ರಾಮಗಳಲ್ಲಿ ಉದ್ಯೋಗ ಖಾತ್ರಿಯಲ್ಲಿ ಮಾಡಿರುವ ನಾಲಾ ಹೂಳೆತ್ತುವ ಕಾಮಗಾರಿಗಳು ಇಲ್ಲಿ ಪುನರಾವರ್ತನೆಯಾಗಿರುವುದನ್ನು ತಾಳೆ ಮಾಡಬೇಕು. ತಪ್ಪು ಮಾಡಿರುವ, ಸುಳ್ಳು ದಾಖಲೆಗಳನ್ನು ತಯಾರಿಸಿರುವ ಮತ್ತು ಇದಕ್ಕೆ ಸಹಕರಿಸಿರುವ ಮೇಲಾಧಿಕಾರಿಗಳ ವಿರುದ್ಧ ಉಗ್ರ ಕಾನೂನು ಕ್ರಮ ಜರುಗಿಸಿ ಸಾರ್ವಜನಿಕರಿಗೆ ನ್ಯಾಯ ದೊರಕಿಸಿ ಕೊಡಬೇಕು ಇಲ್ಲದಿದ್ದರೇ ವಿಭಾಗೀಯ ಕಚೇರಿಯ ಮುಂದೆ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎನ್‌ಡಿಎ ಮೈತ್ರಿ ಕೂಟದಿಂದ ಕೇಂದ್ರ ಸಚಿವ ಕುಮಾರಸ್ವಾಮಿ ಹುಟ್ಟುಹಬ್ಬ ಆಚರಣೆ
ಪತ್ರಕರ್ತರಿಗೆ ಸ್ಪಂದಿಸುತ್ತಿದ್ದ ಶಾಮನೂರು ಸದಾ ಸ್ಮರಣೀಯ