ಕನ್ನಡಪ್ರಭ ವಾರ್ತೆ ಚಾಮರಾಜನಗರ
ಪುಣಜನೂರು ಗ್ರಾಪಂ ಅಧ್ಯಕ್ಷ ಶಿವಿಬಾಯಿ ಹಾಗೂ ಪಿಡಿಒ ಪಂಚಾಯಿತಿಗೆ ಬಂದಿರುವ 15ನೇ ಹಣಕಾಸು ಯೋಜನೆಯ 30 ಲಕ್ಷ ರು.ಗಳನ್ನು ನಕಲಿ ಬಿಲ್‌ಗಳನ್ನು ಸೃಷ್ಟಿಸಿ, ದುರಪಯೋಗಪಡಿಸಿಕೊಂಡಿದ್ದಾರೆ. ಇವರನ್ನು ಉನ್ನತ ಮಟ್ಟದ ತನಿಖೆಗೊಳಪಡಿಸಬೇಕೆಂದು ಪಂಚಾಯಿತಿಯ 13ಕ್ಕೂ ಹೆಚ್ಚು ಸದಸ್ಯರು ಜಿಪಂ ಸಿಇಒ, ಉಪ ಕಾರ್ಯದರ್ಶಿ ಹಾಗೂ ತಾಪಂ ಆಡಳಿತಾಧಿಕಾರಿಗಳಿಗೆ ದೂರು ನೀಡಿದರು. ಗ್ರಾಪಂ ಅಧ್ಯಕ್ಷೆಯಾಗಿರುವ ಶಿವಿಬಾಯಿ ಹಾಗೂ ಗ್ರಾಪಂ ಅಭಿವೃದ್ದಿ ಅಧಿಕಾರಿ ಗ್ರಾಮ ಸಭೆಯನ್ನು ನಡೆಸದೇ 15ನೇ ಹಣಕಾಸು ಯೋಜನೆ ಕ್ರಿಯಾಯೋಜನೆಯನ್ನು ತಯಾರು ಮಾಡಿಲ್ಲ. ಜೊತೆಗೆ ಆಯಾ ಗ್ರಾಪಂ ಸದಸ್ಯರ ಗಮನಕ್ಕೂ ತರದೇ ಏಕಪಕ್ಷಿಯವಾಗಿ ತೀರ್ಮಾನ ಮಾಡಿ, ಹಣವನ್ನು ಲೂಟಿ ಮಾಡಿದ್ದಾರೆ. ಈ ಬಗ್ಗೆ ಸದಸ್ಯರು ಪ್ರಶ್ನೆ ಮಾಡಿದರೆ ಉಡಾಫೆ ಉತ್ತರ ನೀಡುತ್ತಿದ್ದಾರೆ. ಅಲ್ಲದೇ ಕಾಮಗಾರಿಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಪುಸ್ತಕ ಮತ್ತು ಲೆಕ್ಕ ಪತ್ರಗಳಲ್ಲಿ ಮಾತ್ರ ಹಣವನ್ನು ನಮೂದಿಸಿದ್ದಾರೆ. ವಾಸ್ತವಾಗಿ ಅವರು ನಮೂದಿರುವ ಯಾವ ಗ್ರಾಮಗಳಲ್ಲಿಯೂ ಸಹ ಕಾಮಗಾರಿ ನಡೆದಿಲ್ಲ. ಯಾವುದೇ ರೀತಿ ಸವಲತ್ತುಗಳನ್ನು ನೀಡಿಲ್ಲ. ನಮ್ಮ ಗಮನಕ್ಕೂ ಸಹ ಬಂದಿಲ್ಲ ಎಂದು ಸಿಇಒ ಅವರಿಗೆ ಸಲ್ಲಿಸಿರುವ ಲಿಖಿತ ದೂರಿನಲ್ಲಿ ತಿಳಿಸಿದ್ದಾರೆ. ಗ್ರಾಮ ಸಭೆ ನಡೆಸಿ, ಆ ವಾರ್ಡಿನ ಸದಸ್ಯರ ಒಪ್ಪಿಗೆ ಪಡೆದು ನಂತರ ಪಂಚಾಯಿತಿ ಸದಸ್ಯರ ಸಾಮಾನ್ಯ ಸಭೆಯನ್ನು ನಡೆಸಿ, ಚರ್ಚೆ ಮಾಡಿದ ಬಳಿಕ ಕ್ರಿಯಾ ಯೋಜನೆ ತಯಾರಿಸಬೇಕು. ಆದರೆ ಇದ್ಯಾವುದನ್ನು ಮಾಡದೇ, ಪದೇ ಪದೇ ಪಂಚಾಯಿತಿ ವ್ಯಾಪ್ತಿಗಳ ಗ್ರಾಮಗಳಿಗೆ ಕುಡಿಯುವ ನೀರು ನಿರ್ವಹಣೆಗೆ ಮತ್ತು ಮೋಟಾರ್ ದುರಸ್ತಿ ಹೆಸರಿನಲ್ಲಿ ಫೋರ್ಜರಿ ಬಿಲ್‌ಗಳನ್ನು ತಯಾರು ಮಾಡಿ ಹಣ ಡ್ರಾ ಮಾಡಲಾಗಿದೆ. ಈ ವಿಚಾರ ಕುರಿತು ಈ ಹಿಂದೆ ಕೂಡ ಮೌಖಿಕ ದೂರು ನೀಡಿದ್ದು, ಅನಿಲ್ ಎಲೆಕ್ಟ್ರಾನಿಕ್ಸ್ & ಪ್ರಭು ಎಲೆಕ್ಟ್ರಾನಿಕ್ ಹೆಸರಿನಲ್ಲಿ ಸುಮಾರು 30 ಲಕ್ಷಕ್ಕೂ ಹೆಚ್ಚು ಹಣ ದುರುಪಯೋಗ ಬಗ್ಗೆ ದಾಖಲೆಗಳ ಸಮೇತ ಜಿಪಂ. ಸಿಇಒ ಮೋನಾ ರೋತಾ, ಉಪ ಕಾರ್ಯದರ್ಶಿ ಲಕ್ಷ್ಮೀ, ತಾಪಂ ಆಡಳಿತಾಧಿಕಾರಿ ದೀಪಾ ಅವರಿಗೆ ದೂರು ನೀಡಿದರು. ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲರಿಗೆ ಮೀಸಲಾದ ಹಣ, ಹಾಗೂ ಉನ್ನತ ಶಿಕ್ಷಣದ ಪ್ರೋತ್ಸಾಹ ಧನಕ್ಕೆ ನೀಡಲಾಗುವ ಹಣವನ್ನು ಕೂಡ ಇತರೆ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ. ಇದರ ಬಗ್ಗೆ ತನಿಖೆಯಾಗಬೇಕಾಗಿದೆ. ಈ ಬಗ್ಗೆ ಬ್ಯಾಂಕ್‌ನ ಇ-ಗ್ರಾಮ ಸ್ವರಾಜ್ ಪೋರ್ಟಲ್ ನಲ್ಲಿ ಮಾಹಿತಿ ತೆಗೆದುಕೊಂಡಿದ್ದು ಒಂದೇ ಏಜೆನ್ಸಿಗೆ ಪದೇ ಪದೇ ಬಿಲ್ ಮಾಡಿರುವುದು. ಒಂದೇ ಕಾಮಗಾರಿಗೆ ಮತ್ತೊಮ್ಮೆ ಬಿಲ್ ಮಾಡಿರುವುದು ಕಂಡು ಬಂದಿದೆ. ಹೀಗಾಗಿ ನಮ್ಮ ವಾರ್ಡುಗಳು ಹಾಗೂ ಗ್ರಾಮಗಳು ಅಭಿವೃದ್ದಿಯಾಗದೇ ಹಾಗೆ ಉಳಿವಿದೆ. ಆದರೆ, ಈ ಹೆಸರಿನಲ್ಲಿ ಬಿಲ್‌ಗಳು ಆಗಿ. ಹಣ ಡ್ರಾ ಮಾಡಿಕೊಳ್ಳಲಾಗಿದೆ. ಈ ಕುರಿತು ಗ್ರಾಪಂಗೆ ಆಗಮಿಸಿ ಉನ್ನತ ಮಟ್ಟದ ತನಿಖೆಯಾಗಬೇಕು. ಅಧ್ಯಕ್ಷರು ಹಾಗೂ ಪಿಡಿಒ ವಿರುದ್ಧ ಶಿಸ್ತು ಕ್ರಮವಾಗಬೇಕು ಎಂದು ದೂರು ನೀಡಿದ್ದಾರೆ.ಈ ಸಂದರ್ಭದಲ್ಲಿ ಪುಣಜನೂರು ಗ್ರಾಪಂ ಸದಸ್ಯರಾದ ಚಂದ್ರಶೇಖರ್, ಗಂಗಾಶಂಕರ್, ಶಭಿನಾ ಬಾನು, ಕುಮಾರಿಬಾಯಿ, ಆರ್. ಮಣಿನಾಯ್ಕ್, ಮಹೇಶ್ ನಾಯಕ್, ರಂಗಸ್ವಾಮಿ, ಮಹೇಶ್, ನಂಜುಂಡ, ಗೀತಾ ಸಿದ್ದರಾಜು.ಕುಮಾರ್, ಲಲಿತಾಬಾಯಿ, ಬಸಮ್ಮ, ಪಿ.ನಾಗನಾಯಕ್, ತಾಪಂ ಮಾಜಿ ಸದಸ್ಯ ಪಿ. ಕುಮಾರನಾಯ್ಕ್, ಗ್ರಾಪಂ ಮಾಜಿ ಅಧ್ಯಕ್ಷ ಸಾಮಿರ್ ಪಾಷಾ, ಮಾಜಿ ಉಪಾಧ್ಯಕ್ಷ ಶಿವನಾಯಕ್ ಇದ್ದರು.