- ಜಗಳೂರು ಪಪಂ ಅಧ್ಯಕ್ಷ, ಸದಸ್ಯರು ಗರಂ । ಪೌರಕಾರ್ಮಿಕರಿಗೆ ಅನ್ಯಾಯ ಮಾಡಲ್ಲ: ಮುಖ್ಯಾಧಿಕಾರಿ
ಕನ್ನಡಪ್ರಭ ವಾರ್ತೆ ಜಗಳೂರು
ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಅಧ್ಯಕ್ಷ ನವೀನ್ ಕುಮಾರ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಸಭೆಯಲ್ಲಿ ಸಮುದಾಯ ಸಂಘಟನಾ ಅಧಿಕಾರಿಯಿಂದ ಹಣದ ಅಕ್ರಮ ವಿಚಾರದ ಬಗ್ಗೆ ಕಾವೇರಿದ ಚರ್ಚೆ ನಡೆಯಿತು.ಸಮುದಾಯ ಸಂಘಟನಾ ಅಧಿಕಾರಿ ಎಂ.ಕೃಷ್ಣನಾಯ್ಕ ತಮ್ಮ ವ್ಯಾಪ್ತಿಯಲ್ಲಿ ಸದಸ್ಯರ ಗಮನಕ್ಕೆ ತಾರದೇ ಲಕ್ಷಗಟ್ಟಲೇ ಹಣ ಬಿಡಿಸುವ ಮೂಲಕ ಅಕ್ರಮ ಎಸಗಿದ್ದಾರೆ. ಈ ಬಗ್ಗೆ ಅವರು ಸಭೆಗೆ ನೈಜಮಾಹಿತಿ ನೀಡಬೇಕು ಎಂದು ಪ.ಪಂ. ಸದಸ್ಯರಾದ ರಮೇಶ್, ದೇವರಾಜ್ ಶಕೀಲ್ ಅಹಮ್ಮದ್, ಮಂಜುನಾಥ್, ಸಿದ್ದಪ್ಪ ಇನ್ನಿತರೆ ಸದಸ್ಯರು ಸಭೆಯಲ್ಲಿ ಪ್ರಶ್ನಿಸಿದರು.
ಘಟನೆ ವಿಕೋಪಕ್ಕೆ ಹೋಗುತ್ತಿರುವುದು ಅರಿತ ಅಧ್ಯಕ್ಷ ನವೀನ್ ಕುಮಾರ್ ಕುರ್ಚಿಯಿಂದ ಕೆಳಗಿಳಿದು ಬಂದು ಸಮುದಾಯ ಸಂಘಟನಾ ಅಧಿಕಾರಿ ಕೃಷ್ಣನಾಯ್ಕರಿಗೆ ತರಾಟೆಗೆ ತೆಗೆದುಕೊಂಡರು. ನೀವು ಈ ರೀತಿ ಮಾತನಾಡಬಾರದು. ಸರ್ಕಾರದ ಭಾಗವಾಗಿ ಸದಸ್ಯರು ಕೆಲಸ ಮಾಡುತ್ತಾರೆ. ಸರ್ಕಾರಕ್ಕೆ ಎಂದರೆ ನೀವು ಯಾರಿಗೆ ವರದಿ ನೀಡುತ್ತೀರಿ? ಮುಖ್ಯಾಧಿಕಾರಿಗಳು ಸರ್ಕಾರದ ಅಧಿಕಾರಿಗಳಲ್ಲವೇ? ನಾವು ಚುನಾಯಿತ ಪ್ರತಿನಿಧಿಗಳಲ್ಲವೆ ಎಂದರು. ಬಳಿಕ ಸದಸ್ಯರನ್ನೂ ಸಮಾಧಾನಪಡಿಸಿ, ಸಭೆ ಮುಂದುವರಿಯಲು ಅನುವು ಮಾಡಿಕೊಟ್ಟರು.
ಸದಸ್ಯ ಕಾಯಿ ಸಿದ್ದಪ್ಪ ಮಾತನಾಡಿ, ಸಮುದಾಯ ಸಂಘಟನಾ ಅಧಿಕಾರಿಯಿಂದ ಟೆಂಡರ್ ಪ್ರಕ್ರಿಯೆ ವಸ್ತುಗಳ ಖರೀದಿ ವೆಚ್ಚದಲ್ಲಿ ಅವ್ಯವಹಾರವಾಗಿದೆ. ಕೇವಲ ಆನ್‌ಲೈನ್‌ನಲ್ಲಿ ₹25,000 ಬೆಲೆ ಬಾಳುವ ಕಡಿಮೆ ದರದ ಕಟ್ಟಿಂಗ್ ಮಿಷನ್ ₹91,000ಕ್ಕೆ ಖರೀದಿ ಮಾಡಿದ್ದಾರೆ. ಟೀ ಶರ್ಟ್ ₹87300, ಟೋಪಿ ₹ 87,000, ಬೀದಿಬದಿ ಕಾರ್ಡ್ ₹81000, ಪಾರ್ಕ್ ಅಭಿವೃದ್ಧಿಗೆ ₹90,000 ಖರ್ಚು ಮಾಡಲಾಗಿದೆ. ಈ ಎಲ್ಲದರ ಹಣ ಬಳಕೆಯಲ್ಲಿ ಗೋಲ್ ಮಾಲ್ ನಡೆದಿದೆ. ಸೂಕ್ತ ತನಿಖೆ ಮಾಡುವಂತೆ ಸದಸ್ಯರು ಆಗ್ರಹಿಸಿದರು.
ಪೌರಕಾರ್ಮಿಕರಿಗೆ ವೇತನ ತಡೆಹಿಡಿಯಲಾಗಿದೆ. ಕಸದ ವಾಹನ ಡಿಸೇಲ್, ಚಾಲಕರು, ಪೌರಕಾರ್ಮಿಕರಿಗೆ ವೇತನಕೊಡಿ. ಕೆಲಸಗಾರರಿಗೂ ಕುಟುಂಬ ಜೀವನವಿದೆ. ಪಟ್ಟಣ ಸ್ವಚ್ಛಗೊಳಿಸುವವವರಿಗೆ ಅನ್ಯಾಯ ಎಸಗಬೇಡಿ ಎಂದು ಸದಸ್ಯರಾದ ದೇವರಾಜ್, ರೇವಣ್ಣ, ರಮೇಶ್, ನಿರ್ಮಲ ಕುಮಾರಿ ಧ್ವನಿಗೂಡಿಸಿದರು.
ಪಟ್ಟಣದಲ್ಲಿನ ಒಟ್ಟು 65 ಮೋಟಾರ್‌ಗಳಲ್ಲಿ ತಿಂಗಳಿಗೆ ಬೋರ್‌ವೆಲ್ ಮೋಟಾರ್ ಪಂಪ್ ಎಷ್ಟು ರಿಪೇರಿಗೆ ಬರುತ್ತವೆ, ಖರ್ಚಾದ ಹಣದ ಮಾಹಿತಿ ಕೊಡಿ. ದುಂದು ವೆಚ್ಚ ಆಗದಂತೆ ಅಧಿಕಾರಿಗಳು ಕ್ರಮವಹಿಸಬೇಕು. ಕೆಲ ಪಾರ್ಕ್‌ಗಳಲ್ಲಿ ಗೇಟ್ ಕಳವು, ಒತ್ತುವರಿ ಬಗ್ಗೆ ಕಾಳಜಿ ವಹಿಸಬೇಕು ಎಂದು ಒತ್ತಾಯಿಸಿದರು.
ಪತ್ರಕರ್ತರಿಗೆ ನಿವೇಶನ ಕುರಿತು ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಆಡಳಿತಾವಧಿಯಲ್ಲಿ ಪಟ್ಟಣ ಪಂಚಾಯಿತಿ ಸಭೆಯಲ್ಲಿ ತೀರ್ಮಾನವಾಗಿತ್ತು. ಈ ಬಾರಿ ನಿವೇಶನ ವ್ಯವಸ್ಥೆ ನೀಡಬೇಕು ಎಂದು ಸದಸ್ಯ ದೇವರಾಜ್ ಸಭೆ ಮುಂದಿಟ್ಟರು. ಉಳಿದ ಸದಸ್ಯರು ಧ್ವನಿಗೂಡಿಸಿ ನಡಾವಳಿಗೆ ಸರ್ವಾನುಮತದಿಂದ ಅಧ್ಯಕ್ಷರು ಸೇರಿದಂತೆ ಎಲ್ಲ ಸದಸ್ಯರು ಅನುಮೋದನೆ ನೀಡಿದರು.
- - -
-11ಜೆ.ಜಿ.ಎಲ್.4: ಜಗಳೂರು ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಪಪಂ ಅಧ್ಯಕ್ಷ ನವೀನ್ ಕುಮಾರ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. -11ಜೆ.ಜಿ.ಎಲ್.5: ಜಗಳೂರು ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಪಪಂ ಅಧ್ಯಕ್ಷ ನವೀನ್ ಕುಮಾರ್ ಅಧ್ಯಕ್ಷತೆ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ, ಸದಸ್ಯರು ಸಮುದಾಯ ಸಂಘಟನಾ ಅಧಿಕಾರಿಯ ನಿರ್ಲಕ್ಷ್ಯದ ಹೇಳಿಕೆಗೆ ಕೆರಳಿ ತರಾಟೆಗೆ ತೆಗೆದುಕೊಂಡರು.