ಇಂದರಪಾಶ ಚಿಂಚರಕಿ
ಕನ್ನಡಪ್ರಭ ವಾರ್ತೆ ಮಸ್ಕಿ2023-24 ಹಾಗೂ 2024-25ನೇ ಸಾಲಿನಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಹಾಗೂ 15ನೇ ಹಣಕಾಸಿನಲ್ಲಿ ಹಣ ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ಆರೋಪ ಮಾಡಿ ದೂರು ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಹಣ ದುರುಪಯೋಗ ಸಾಬೀತು ಆಗಿರುವುದರಿಂದ ಮಸ್ಕಿ ತಾಲೂಕಿನ ತಲೇಖಾನ್ ಗ್ರಾಪಂ ಅಧ್ಯಕ್ಷೆ ಉಮ್ಮವ್ವ ಗ್ಯಾನಪ್ಪ ಅವರನ್ನು ಸದಸ್ಯತ್ವ ಸ್ಥಾನದಿಂದ ಅನರ್ಹಗೊಳಿಸಿ ಗ್ರಾಮೀಣ ಅಭಿವೃದ್ಧಿ ಇಲಾಖೆಯ ಅಧಿಕಾರಿ ಶಿವುಕುಮಾರ ಆದೇಶ ಹೊರಡಿಸಿದ್ದಾರೆ.
ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಲೇಖಾನ್ ಗ್ರಾಪಂನಲ್ಲಿ ಅನುದಾನ ದುರುಪಯೋಗ ಹಾಗೂ ವಸತಿ ಯೋಜನೆಗಳು ಸೇರಿದಂತೆ ಇನ್ನಿತರ ಆರೋಪಗಳು ಇದ್ದವು, ಇದಕ್ಕೆ ಪೂರಕ ಎಂಬಂತೆ ಇತ್ತೀಚೆಗೆ ವಸತಿ ಇಲಾಖೆಯ ಅಧಿಕಾರಿಗಳು ಸಹ ತಲೆಕಾನ್ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿನ ವಾಸ್ತವ ಸ್ಥಿತಿಗತಿಗಳನ್ನು ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಅಲ್ಲದೇ ಅಲ್ಲಿನ ಗ್ರಾಪಂ ಸದಸ್ಯರು ಸೇರಿದಂತೆ ಗ್ರಾಮಸ್ಥರು ಪರ ವಿರೋದವಾಗಿ ಪ್ರತಿಭಟನೆಗಳು ಸಹ ನಡೆಸಿದ್ದರು. ಆದರೆ ಈಗ ಸರ್ಕಾರದ ಅಧಿಕಾರಿಗಳು ದೂರಿನ ಅನ್ವಯ ತನಿಖೆ ನಡೆಸಿ ಭ್ರಷ್ಟಾಚಾರ ನಡೆಸಿದ್ದವರಿಗೆ ಬಿಸಿ ಮುಟ್ಟಿಸಿದ್ದು ಇನ್ನು ಮುಂದೆ ಸರ್ಕಾರದ ಅನುದಾನವನ್ನು ದುರುಪಯೋಗ ನಡೆಸಿ ಭ್ರಷ್ಟಾಚಾರ ನಡೆಸುವ ಜನಪ್ರತಿನಿಧಿ ಹಾಗೂ ಅಧಿಕಾರಿಗಳಿಗೆ ಬಿಸಿ ತುಪ್ಪವಾಗಿ ಪರಿಣಮಿಸಲಿದೆ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.ಹಣ ದುರುಪಯೋಗ ಸಾಬೀತು ಅಧ್ಯಕ್ಷೆ ಸದಸ್ಯತ್ವ ಅನರ್ಹ: ತಾಲೂಕಿನ ತಲೇಖಾನ ಗ್ರಾಪಂ ಅಧ್ಯಕ್ಷರಾದ ಉಮ್ಮವ್ವ ಗ್ಯಾನಪ್ಪ ಅವರ ವಿರುದ್ಧ 2023-24 ಮತ್ತು 2024-25ನೇ ಸಾಲಿನಲ್ಲಿ ನರೇಗಾ ಯೋಜನೆಯಡಿಯಲ್ಲಿ ಚೆಕ್ ಮೆಷರ್ಮೆಂಟ್ ಇಲ್ಲದ 22 ಪ್ರಕರಣಗಳಲ್ಲಿ ನಿಯಮಬಾಹಿರವಾಗಿ ಹಣ ಪಾವತಿಸಿರುವ ಆರೋಪ ಮತ್ತು 15ನೇ ಹಣಕಾಸು ಯೋಜನೆಯಡಿ ನಿರ್ವಹಿಸಿದ ಕಾಮಗಾರಿಗಳನ್ನು ಸರ್ಕಾರದ ಮಾರ್ಗಸೂಚಿ ಹಾಗೂ ನಿಯಮಗಳನ್ನು ಪಾಲಿಸದೇ ಅನುದಾನವನ್ನು ಖರ್ಚು ಮಾಡಿದ ಆರೋಪವನ್ನು ಸದಸ್ಯ ಮೌನೇಶ್ ರಾಥೋಡ ಆರೋಪ ಮಾಡಿದ ಹಿನ್ನೆಲೆ ಅಧಿಕಾರಿಗಳು ತನಿಖೆ ನಡೆಸಿದಾಗ ಹಣ ದುರ್ಬಳಕೆ ಆರೋಪ ಸಾಬೀತು ಆಗಿರುವುದರಿಂದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಗ್ರಾಪಂ ರಾಜ್ ಅಧಿನಿಯಮ-1993ರ ಪ್ರಕರಣ-43(ಎ) ಮತ್ತು 48(4)ರನ್ವಯ ಗ್ರಾಪಂ ಸದಸ್ಯತ್ವದಿಂದ ತೆಗೆದುಹಾಕಿ, ಮತ್ತು 43(ಎ)(2)ರನ್ವಯ ಮುಂದಿನ ಆರು ವರ್ಷಗಳ ಅವಧಿಯವರೆಗೆ ಚುನಾವಣೆಗೆ ನಿಲ್ಲದಂತೆ ಸರ್ಕಾರದ ಆದೇಶ ಸಂಖ್ಯೆ: ಆರ್‌ಡಿಪಿಆರ್ 60 ಜಿಪಿಎ 2025, 06.11.2025. ರಂದು
ಅನರ್ಹಗೊಳಿಸಿ ಆದೇಶಿಸಿದೆ. ಈಗಲಾದರೂ ಮುಂದೆ ಗ್ರಾಪಂ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸರ್ಕಾರದ ಹಣ ದುರ್ಬಳಕೆ ನಿಲ್ಲುತ್ತಾ ಕಾದು ನೋಡಬೇಕಿದೆ.-----
ಮಸ್ಕಿ ತಾಲೂಕಿನ ತಲೆಖಾನ್ ಗ್ರಾಪಂ ಅಧ್ಯಕ್ಷೆ ವಿರುದ್ದ ನರೇಗಾ ಯೋಜನೆಯಡಿಯಲ್ಲಿ ಚೆಕ್ ಮೆಷರ್ಮೆಂಟ್ ಇಲ್ಲದ 22 ಪ್ರಕರಣಗಳಲ್ಲಿ ನಿಯಮಬಾಹಿರವಾಗಿ ಹಣ ಪಾವತಿಸಿರುವ ಆರೋಪ, 15ನೇ ಹಣಕಾಸು ಯೋಜನೆಯಡಿ ನಿರ್ವಹಿಸಿದ ಕಾಮಗಾರಿಗಳನ್ನು ಸರ್ಕಾರದ ಮಾರ್ಗಸೂಚಿ ಹಾಗೂ ನಿಯಮಗಳನ್ನು ಪಾಲಿಸದೇ ಅನುದಾನವನ್ನು ಖರ್ಚು ಮಾಡಿದ ಆರೋಪ, ಗ್ರಾಮೀಣ ಅಭಿವೃದ್ಧಿ ಇಲಾಖೆಯಿಂದ ಗ್ರಾಪಂ ಅಧ್ಯಕ್ಷೆ ಅನರ್ಹಗೊಳಿಸಿ ಆದೇಶ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಗ್ರಾಪಂ ರಾಜ್ ಅಧಿನಿಯಮ-1993ರ ಪ್ರಕರಣ-43(ಎ) ಮತ್ತು 48(4)ರನ್ವಯ ಗ್ರಾಮ ಪಂಚಾಯಿತಿ ಸದಸ್ಯತ್ವದಿಂದ ತೆಗೆದುಹಾಕಿ, ಮತ್ತು 43(ಎ)(2)ರನ್ವಯ ಮುಂದಿನ ಆರು ವರ್ಷಗಳ ನಿಲ್ಲದಂತೆ ಆದೇಶಿಸಲಾಗಿದೆ.-----
ತಲೇಖಾನ್ ಗ್ರಾಪಂನಲ್ಲಿ ಅದ್ಯಕ್ಷರು 15ನೇ ಹಣಕಾಸು ಯೋಜನೆಯಲ್ಲಿ ಹಣ ದುರುಪಯೋಗ ಹಾಗೂ ನರೇಗಾ ಕಾಮಗಾರಿಯಲ್ಲಿ ಭ್ರಷ್ಟಾಚಾರ ಆರೋಪಗಳಿದ್ದವು, ಆದ್ದರಿಂದ ನಾವು ಕಳೆದ ಹಲವು ದಿನಗಳಿಂದ ಕಾನೂನು ಹೋರಾಟ ನಡೆಸಲಾಯಿತು. ಈಗ ಸರ್ಕಾರ ಅಧ್ಯಕ್ಷರನ್ನು ಅನರ್ಹ ಮಾಡಿ ಆದೇಶ ಹೋರಡಿಸಿದೆ ಇದರಿಂದ ನ್ಯಾಯ ದೊರಕಿದೆ.ಮೌನೇಶ ಎಸ್.ರಾಥೋಡ್ ಗ್ರಾಪಂ ಸದಸ್ಯರು ಹಡಗಲಿ ತಾಂಡಾ.