ಕನ್ನಡಪ್ರಭ ವಾರ್ತೆ ಚಾಮರಾಜನಗರ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ ಆಸ್ತಿ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನುಳಿದ ಆರೋಪಗಳನ್ನು ಶೀಘ್ರದಲ್ಲಿಯೇ ಬಂಧಿಸಬೇಕು. ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ, ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ಪ್ರಕರಣ ದಾಖಲು ಮಾಡಬೇಕು. ಎಸ್ಸಿ, ಎಸ್ಟಿ ದೌರ್ಜನ್ಯ ಪ್ರಕರಣವನ್ನು ಇವರ ವಿರುದ್ಧ ದಾಖಲು ಮಾಡಬೇಕು ಎಂದು ಆಗ್ರಹಿಸಿದರು.
ಇನ್ನುಳಿದ ಆರೋಪಿಗಳಾದ ಸರಗೂರು ಇಶಾಕ್ ಷರೀಪ್, ಶ್ರೀರಂಗಪಟ್ಟಣದ ಶಿವಣ್ಣ, ಚಿಕ್ಕಂಕಹಳ್ಳಿಯ ರಮೇಶ್ ಅವರನ್ನು ಬಂಧಿಸಬೇಕು. ಡಿವೈಎಸ್ಪಿ ಅವರು ಈ ಪ್ರಕರಣದಲ್ಲಿ ವಿಳಂಬ ಮಾಡುತ್ತಿದ್ದಾರೆ. ಕಳೆದ ಮೂರು ತಿಂಗಳಿಂದಲು ಅವರ ಬಂಧನವಾಗಿಲ್ಲ. ಸಮಿತಿ ವರದಿಯಂತೆ ಅಕ್ರಮದಲ್ಲಿ ಭಾಗಿಯಾಗಿರುವ ಆರ್‌ಐ ಮತ್ತು ವಿಎ ವಿರುದ್ಧ ಶಿಸ್ತು ಕ್ರಮವಾಗಬೇಕು. ಇಲ್ಲದಿದ್ದರೆ ಡಿವೈಎಸ್ಪಿ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇವೆ. ಜಿಲ್ಲಾಡಳಿತದ ಭವನದ ಮುಂದೆ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದರು.ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿಗಳು ನೇಮಕ ಮಾಡಿದ್ದ ಸಮಿತಿಯು ಸಮರ್ಪಕ ವರದಿಯನ್ನು ನೀಡಿದ್ದು, ಸಂಘದ ಆಸ್ತಿ ಅಕ್ರಮವಾಗಿ ಪರಭಾರೆಯಾಗಿರುವುದು ಮೇಲ್ನೂಟಕ್ಕೆ ಸಾಬೀತಾಗಿದೆ. ಅಲ್ಲದೇ ಅಧ್ಯಕ್ಷರು ಮತ್ತು ಆಡಳಿತ ಮಂಡಲಿಯು ಯಾವುದೇ ರೀತಿಯ ಲೆಕ್ಕಪತ್ರಗಳನ್ನು ನೀಡದೇ ಕಾಲಾವಕಾಶವನ್ನು ಪಡೆದುಕೊಂಡು ವಿಳಂಬ ಮಾಡಿದೆ. ಇಂಥ ಸಂಘವನ್ನು ಸೂಪರ್ ಸೀಡ್ ಮಾಡಿ ಆಡಳಿತಾಧಿಕಾರಿಯನ್ನು ನೇಮಕ ಮಾಡುವಂತೆ ಸಮಿತಿ ಹಾಗೂ ಸಹಕಾರ ಸಂಘಗಳ ನಿಬಂಧಕರು ಸರ್ಕಾರ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸಂಪೂರ್ಣ ವರದಿಯನ್ನು ನೀಡಿದೆ. ನ್ಯಾಯಾಲಯದಲ್ಲಿಯ ಸಹ ನಮ್ಮ ಪರವಾದ ತೀರ್ಪು ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದು ಜಾರಿಯಾಗದಂತೆ ಹಾಲಿ ಸಂಘದ ಅಧ್ಯಕ್ಷ ನಂಜುಂಡಸ್ವಾಮಿ, ಕಾರ್ಯದರ್ಶಿ ರಾಜಗೋಪಾಲ್ ಅವರು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದಾರೆ. ಒಂದು ಕಡೆ ಸರಿಯಾಗಿ ಲೆಕ್ಕಪತ್ರಗಳನ್ನು ನೀಡದೆ. ಅಕ್ರಮದಲ್ಲಿ ಭಾಗಿಯಾಗಿರುವ ಆಡಳಿತ ಮಂಡಲಿಯೇ ಸಭೆ ಮಾಡಿ, ನ್ಯಾಯಾಲಯದಲ್ಲಿ ದಾವೆ ಹಾಕಿ ಸಂಘದ ಆಡಳಿತ ಮಂಡಳಿಯ ಪರವಾಗಿ ಹೋರಾಟ ಮಾಡಲು ನಿರ್ಣಯ ಮಾಡಿ, ಕಾರ್ಯದರ್ಶಿಗೆ ಜವಾಬ್ದಾರಿ ನೀಡಿರುವುದು ಸರಿಯಾದ ಕ್ರಮವಲ್ಲ. ಇದರ ಹಿಂದಿನ ಎಲ್ಲಾ ನಡಾವಳಿಗಳಲ್ಲಿ ಎಸ್.ಮಹದೇವಯ್ಯ ಅವರ ಕೈವಾಡ ಇದೆ. ಅವರು ಸರಿಯಾಗಿ ಎರಡು ಕಡೆಯವರಿಗೆ ಮಾಹಿತಿ ರವಾನೆ ಮಾಡಿ, ಸಂಧಾನ ಮಾಡಿದ್ದರೆ, ಇಷ್ಟೊಂದು ದೊಡ್ಡ ಮಟ್ಟಕ್ಕೆ ಪ್ರಕರಣ ಹೋಗುತ್ತಿರಲಿಲ್ಲ. ಅಧ್ಯಕ್ಷರು ಮತ್ತು ನಿರ್ದೇಶಕರನ್ನು ದಾರಿ ತಪ್ಪಿಸುತ್ತಿರುವವರೇ ಎಸ್. ಮಹದೇವಯ್ಯ ಎಂದು ಅಯ್ಯನಪುರ ಶಿವಕುಮಾರ್, ಆರ್. ಮಹದೇವ್ ಕಿಡಿ ಕಾರಿದರು.
ಈ ಆಸ್ತಿಯನ್ನು 30 ವರ್ಷಗಳಿಗೆ ಲೀಜ್ ನೀಡಲು ಇವರಿಗೆ ಅಧಿಕಾರ ಕೊಟ್ಟವರು ಯಾರು? ಯಾವುದೇ ಸಹಕಾರ ಸಂಘಗಳ ಬೈಲ್ ಪ್ರಕಾರ ಸರ್ವ ಸದಸ್ಯರ ಸಭೆಗಳಲ್ಲಿ ತೀರ್ಮಾನವಾದ ಬಳಿಕ ಆಡಳಿತ ಮಂಡಲಿ ಕ್ರಮವಹಿಸುತ್ತದೆ. ಅಲ್ಲದೇ 30 ವರ್ಷಕ್ಕೆ ಲೀಸ್ ನೀಡುವ ಯಾವುದೇ ಅಧಿಕಾರ ಸಹಕಾರಿ ಬೈಲ್‌ದಲ್ಲಿ ಇಲ್ಲ. ಹೀಗಾಗಿ ನೋಂದಾವಣಿಯಾಗಿರುವುದು ಅಕ್ರಮವಾಗಿದ್ದು, ಇದರ ವಿರುದ್ದ ಸಹ ಜಿಲ್ಲಾಧಿಕಾರಿಗಳು ಕ್ರಮ ವಹಿಸಬೇಕು ಎಂದು ಮತ್ತೋರ್ವ ಮುಖಂಡ ನಲ್ಲೂರು ಸೋಮೇಶ್ವರ್ ಒತ್ತಾಯಿಸಿದರು. ಗೋಷ್ಠಿಯಲ್ಲಿ ಸಮಿತಿಯ ಚನ್ನಂಜಯ್ಯ, ಸಿದ್ದಯ್ಯನ ಗೋವಿಂದರಾಜು ಇತರರರು ಇದ್ದರು.