ವಿದ್ಯಾರ್ಥಿನಿಯರ ಹಾಸ್ಟೆಲ್ ಬಳಿ ಅಸಭ್ಯ ವರ್ತನೆ: ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ

KannadaprabhaNewsNetwork |  
Published : Apr 25, 2024, 01:09 AM IST
ಫೋಟೊ ಶೀರ್ಷಿಕೆ: 24ಆರ್‌ಎನ್‌ಆರ್2ರಾಣಿಬೆನ್ನೂರು ನಗರದ ವಿದ್ಯಾರ್ಥಿನಿಯರ ಹಾಸ್ಟೆಲ್ ಬಳಿ ಅಸಭ್ಯವಾಗಿ ವರ್ತಿಸುತ್ತಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವAತೆ ಆಗ್ರಹಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿನಿಯರು ಶಹರ ಪಿಎಸ್‌ಐ ಗಡ್ಡೆಪ್ಪ ಗುಂಜುಟಗಿ ಅವರಿಗೆ ಮನವಿ ಸಲ್ಲಿಸಿದರು.  | Kannada Prabha

ಸಾರಾಂಶ

ರಾಣಿಬೆನ್ನೂರು ನಗರದ ಬಸ್ ನಿಲ್ದಾಣ, ಶಾಲಾ ಕಾಲೇಜು, ಹಾಸ್ಟೆಲ್ ಕಡೆಗಳಲ್ಲಿ ವಿದ್ಯಾರ್ಥಿನಿಯರಿಗೆ, ಮಹಿಳೆಯರಿಗೆ ಚೂಡಾಯಿಸುವುದು, ರೇಗಿಸುವ ಪುಂಡ-ಪೋಕರಿಗಳ ಹಾವಳಿ ಹೆಚ್ಚಾಗಿದೆ. ವಿದ್ಯಾರ್ಥಿನಿಯರು, ಮಹಿಳೆಯರು ಭಯಪಡುವಂತಹ ವಾತಾವರಣ ನಿರ್ಮಾಣವಾಗಿದೆ ಎಂದು ಎಸ್‌ಎಫ್‌ಐ ಹೇಳಿದೆ.

ರಾಣಿಬೆನ್ನೂರು: ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಚೂಡಾಯಿಸುವ, ಲೈಂಗಿಕವಾಗಿ ಪ್ರಚೋದಿಸುವ ಕಾಮುಕ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು ಹಾಗೂ ವಿದ್ಯಾರ್ಥಿನಿಯರು-ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಬುಧವಾರ ನಗರದಲ್ಲಿ ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿನಿಯರು ಶಹರ ಪಿಎಸ್‌ಐ ಗಡ್ಡೆಪ್ಪ ಗುಂಜುಟಗಿ ಅವರಿಗೆ ಮನವಿ ಸಲ್ಲಿಸಿದರು.

ನಗರದ ಬಸ್ ನಿಲ್ದಾಣ, ಶಾಲಾ ಕಾಲೇಜು, ಹಾಸ್ಟೆಲ್ ಕಡೆಗಳಲ್ಲಿ ವಿದ್ಯಾರ್ಥಿನಿಯರಿಗೆ, ಮಹಿಳೆಯರಿಗೆ ಚೂಡಾಯಿಸುವುದು, ರೇಗಿಸುವ ಪುಂಡ-ಪೋಕರಿಗಳ ಹಾವಳಿ ಹೆಚ್ಚಾಗಿದ್ದು, ಒಬ್ಬಂಟಿಯಾಗಿ ಓಡಾಡಲು ವಿದ್ಯಾರ್ಥಿನಿಯರು, ಮಹಿಳೆಯರು ಭಯಪಡುವಂತಹ ವಾತಾವರಣ ನಿರ್ಮಾಣವಾಗಿದೆ. ಅದರಲ್ಲಿಯೂ ನಗರದ ಹೊರವಲಯದ ಕಮಲಾ ನಗರ ಹಾಗೂ ಈಶ್ವರಿ ನಗರದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಸುತ್ತಮುತ್ತಲೂ ಅನೇಕ ದಿನಗಳಿಂದ ವಿದ್ಯಾರ್ಥಿನಿಯರು ಹೋಗುವಾಗ ಬರುವಾಗ ಕೆಲವರು ಚೂಡಾಯಿಸುವುದು, ರೇಗಿಸುವುದು ಹಾಗೂ ಹಾಸ್ಟೆಲ್ ಹಿಂಭಾಗದಲ್ಲಿ ಬಂದು ಅರೆಬೆತ್ತಲೆಯಲ್ಲಿ ನಿಲ್ಲುವುದು, ಲೈಂಗಿಕವಾಗಿ ಪ್ರಚೋದಿಸುವ, ಸೈಕೋ ಕಾಮುಕರ ಹಾವಳಿಯಿಂದ ವಿದ್ಯಾರ್ಥಿನಿಯರು ದಿನನಿತ್ಯವೂ ನರಕಯಾತನೆ ಅನುಭವಿಸುತ್ತಿದ್ದಾರೆ. ಪರೀಕ್ಷೆಯ ಸಮಯ ಇರುವುದರಿಂದ ಮನೆಯಲ್ಲಿ ತಿಳಿಸಿದರೆ ಶಿಕ್ಷಣದಿಂದ ಬಿಡಿಸುತ್ತಾರೆ ಎಂಬ ಭಯದಿಂದ ಹೇಳುತ್ತಿಲ್ಲ. ಆದರೆ ದಿನನಿತ್ಯವೂ ಪುಂಡರ ಹಾವಳಿಯಿಂದ ನರಳುತ್ತಿದ್ದಾರೆ. ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕುವಲ್ಲಿ ಸರ್ಕಾರ ಮತ್ತು ಅಧಿಕಾರಿಗಳು ವಿಫಲವಾಗಿದ್ದು, ಇದರಿಂದ ದೌರ್ಜನ್ಯಗಳು, ಅತ್ಯಾಚಾರಗಳು ಹೆಚ್ಚುತ್ತಲಿದೆ. ಬಸ್ ನಿಲ್ದಾಣ, ಶಾಲಾ-ಕಾಲೇಜ್, ಕಾಂಪೌಂಡ್ ಗೋಡೆಯ ಮೇಲೆ ಕುಳಿತುಕೊಂಡು ರೇಗಿಸುವುದು, ಚೂಡಾಯಿಸುವ ಕೃತ್ಯ ಮಾಡುವ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಲು ಹೇಳಿದಾಗ ಪೊಲೀಸ್ ಅಧಿಕಾರಿಗಳು ಸಾಕ್ಷಿ ಕೇಳುತ್ತಾರೆ. ಕಂಪ್ಲೇಂಟ್ ಕೊಡಿ ಎಂದು ಹೇಳುತ್ತಾರೆ. ಕಾನೂನಾತ್ಮಕವಾಗಿ ಕೇಸ್ ದಾಖಲು ಮಾಡಬೇಕು. ಆದರೆ ಕೆಲವು ಮನೆತನಗಳಲ್ಲಿ ಹೆಣ್ಣು ಹೊರಗೆ ಓದಲು ಕಳುಹಿಸುವುದ ಕಷ್ಟ. ಈ ಸಂದರ್ಭದಲ್ಲಿ ಆ ಮಹಿಳೆ, ವಿದ್ಯಾರ್ಥಿನಿಯರು ಪೊಲೀಸ್ ಠಾಣೆ, ಕೋರ್ಟ್ ಎಂದು ಓಡಾಡಲು ಸಾಧ್ಯವಿಲ್ಲ. ಆದ್ದರಿಂದ ಪೊಲೀಸ್ ಇಲಾಖೆ ಸ್ವಯಂ ದೂರ ದಾಖಲಿಸಿಕೊಂಡು ಕಾಮುಕ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು ಹಾಗೂ ವಿದ್ಯಾರ್ಥಿನಿಯರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಎಸ್‌ಎಫ್‌ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್., ತಾಲೂಕು ಅಧ್ಯಕ್ಷ ಶ್ರೀಧರ ಚಲವಾದಿ, ಸಾವಿತ್ರಿ ಲಮಾಣಿ, ಲಕ್ಷಣ ಕೆಂಗಪ್ಪಳವರ, ವಿವೇಕ್ ಫನಸೆ, ಮಲ್ಲಿಗೆ ಆರ್.ಜೆ. ಮತ್ತಿತರರಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌