ನವಲಗುಂದ: ತಾಲೂಕಿನ ಅಳಗವಾಡಿ ಗ್ರಾಪಂನಲ್ಲಿ 15ನೇ ಹಣಕಾಸು ಯೋಜನೆಯಡಿ ಕೋಟ್ಯಾಂತರ ರುಪಾಯಿಗಳ ಅವ್ಯವಹಾರ ನಡೆದಿದೆ, ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒಗಳು ಸೇರಿ ಸರ್ಕಾರಿ ಜಾಗೆಯನ್ನು ಅಧ್ಯಕ್ಷರ ಕುಟುಂಬದವರ ಹೆಸರಿಗೆ ಬದಲಾವಣೆ ಮಾಡಿದ್ದಾರೆಂದು ಆರೋಪಿಸಿ ಅಳಗವಾಡಿ ಗ್ರಾಮಸ್ಥರು ಬುಧವಾರ ಜಿಲ್ಲಾ ಲೋಕಾಯುಕ್ತ ಎಸ್ಪಿ ಎಸ್.ಟಿ. ಸಿದ್ಧಲಿಂಗಪ್ಪ ಅವರಿಗೆ ಮನವಿ ಸಲ್ಲಿಸಿದರು.
15ನೇ ಹಣಕಾಸು ಯೋಜನೆಯಲ್ಲಿ ಗ್ರಾಮದ ಅಭಿವೃದ್ಧಿ ಹೆಸರಿನಲ್ಲಿ ಕೊಟ್ಯಂತರ ರುಪಾಯಿಗಳ ನಕಲಿ ಬಿಲ್‌ಗಳನ್ನು ಸೃಷ್ಠಿಸಲಾಗಿದೆ. ಗ್ರಾಪಂ ಅಧ್ಯಕ್ಷರು ಅಧಿಕಾರ ದುರ್ಬಳಕೆ ಮಾಡಿಕೊಂಡು ಸರ್ಕಾರಿ ಜಾಗವನ್ನು ತಮ್ಮ ಕುಟುಂಬಸ್ಥರ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆಂದು ಆರೋಪಿಸಿದ ಗ್ರಾಮಸ್ಥರು ಶೀಘ್ರ ತನಿಖೆ ನಡೆಸುವಂತೆ ಮನವಿ ಮಾಡಿದರು.
ಶಿರೂರು ಗ್ರಾಪಂ ವ್ಯಾಪ್ತಿಯ ಆಹೆಟ್ಟಿ ಗ್ರಾಮಸ್ಥರು 2021ರಿಂದ ಗ್ರಾಪಂನಲ್ಲಿ ನಡೆದ ಅವ್ಯವಹಾರ ತನಿಖೆ ನಡೆಸುವಂತೆ ಮನವಿ ಸಲ್ಲಿಸಿದರು.ಮನವಿಗೆ ಸ್ಪಂದಿಸಿದ ಲೋಕಾಯುಕ್ತರು ಈ ಕುರಿತಾಗಿ ಸೂಕ್ತ ತನಿಖೆ ನಡೆಸಿ ಕೂಡಲೇ ವರದಿ ಸಲ್ಲಿಸುವಂತೆ ತಾಪಂ ಇಒ ಭಾಗ್ಯಶ್ರೀ ಜಹಗೀರದಾರ ಅವರಿಗೆ ಸೂಚಿಸಿದರು.
ನಂತರ ತಾಲೂಕಿನ ನಾನಾ ಇಲಾಖೆಯಲ್ಲಿನ ಅಭಿವೃದ್ಧಿ ಕೆಲಸಗಳ ಕುರಿತಾಗಿ ಅಧಿಕಾರಿಗಳಿಂದ ಲೋಕಾಯುಕ್ತರು ಮಾಹಿತಿ ಪಡೆದರಲ್ಲದೇ ದಿನಪತ್ರಿಕೆಗಳಲ್ಲಿ ಬರುವ ದೂರುಗಳನ್ನು ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ ಮಾಡಿದಲ್ಲಿ ಲೋಕಾಯುಕ್ತದಲ್ಲಿ ಸ್ವಯಂಪ್ರೇರಣೆಯಿಂದ ದೂರು ದಾಖಲಿಸಿಕೊಳ್ಳುವುದಾಗಿ ಎಚ್ಚರಿಸಿದರು.ಲೋಕಾಯುಕ್ತ ಡಿ.ಎಸ್.ಪಿ ಬಿ.ಎನ್. ಪಾಟೀಲ್, ಸಿಪಿಐ ಪ್ರಸಾದ ಪನೇಕರ, ತಹಸೀಲ್ದಾರ್ ಸುಧೀರ ಸಾಹುಕಾರ, ತಾಪಂ ಇಒ ಭಾಗ್ಯಶ್ರೀ ಜಹಗೀರದಾರ ಹಾಗೂ ಲೋಕಾಯುಕ್ತ ಸಿಬ್ಬಂದಿಗಳು ಇದ್ದರು.