ಅತಿವೃಷ್ಠಿ ಪರಿಹಾರ ದುರುಪಯೋಗ: ತಪ್ಪಿತಸ್ಥರ ಬಂಧನಕ್ಕೆ ಆಗ್ರಹಿಸಿ ಅಹೋರಾತ್ರಿ ಧರಣಿ

KannadaprabhaNewsNetwork |  
Published : Feb 04, 2024, 01:34 AM IST
3ಕಕಡಿಯ2ಎ. | Kannada Prabha

ಸಾರಾಂಶ

ತಾಲೂಕಿನ ಕಲ್ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2022-23 ನೇ ಸಾಲಿನ ಅತಿವೃಷ್ಠಿ ಪರಿಹಾರದ ಹಣದಲ್ಲಿ ಅವ್ಯವಹಾರ ಮಾಡಿದವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ತಹಸೀಲ್ದಾರ್ ಕಚೇರಿ ಮುಂದೆ ಕಲ್ಕೆರೆ ರೈತರ ಅಹೋರಾತ್ರಿ ಪ್ರತಿಭಟನೆ 2ನೇ ದಿನಕ್ಕೆ ಕಾಲಿಟ್ಟಿದೆ.

- ಸಂಬಂಧಿಸಿದವರ ಮೇಲೆ ಎಫ್‍ಐಆರ್ ದಾಖಲಿಸಲು ರೈತ ಸಂಘಟನೆಗಳ ಬಿಗಿಪಟ್ಟುಕನ್ನಡಪ್ರಭ ವಾರ್ತೆ, ಕಡೂರು

ತಾಲೂಕಿನ ಕಲ್ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2022-23 ನೇ ಸಾಲಿನ ಅತಿವೃಷ್ಠಿ ಪರಿಹಾರದ ಹಣದಲ್ಲಿ ಅವ್ಯವಹಾರ ಮಾಡಿದವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ತಹಸೀಲ್ದಾರ್ ಕಚೇರಿ ಮುಂದೆ ಕಲ್ಕೆರೆ ರೈತರ ಅಹೋರಾತ್ರಿ ಪ್ರತಿಭಟನೆ 2ನೇ ದಿನಕ್ಕೆ ಕಾಲಿಟ್ಟಿದೆ.

ಕಲ್ಕೆರೆ ಗ್ರಾಪಂ ಈ ಹಿಂದಿನ ವಿ.ಎ. ಪಾಲಾಕ್ಷಪ್ಪ,ಕಂಪ್ಯೂಟರ್ ಆಪರೇಟರ್ ಮಲ್ಲಿಕಾರ್ಜುನ್ ಮತ್ತು 4 ಜನ ಮಧ್ಯವರ್ತಿಗಳು ಸೇರಿ ಪರಿಹಾರದ ಕೋಟ್ಯಂತರ ರು. ವಂಚಿಸಿ ಬೇರೆಯವರ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು.

ಪ್ರಕರಣ ಬೆಳಕಿಗೆ ಬಂದು ಒಂದೂವರೆ ತಿಂಗಳಾದರೂ ಜಿಲ್ಲಾ , ತಾಲೂಕು ಆಡಳಿತಾಧಿಕಾರಿಗಳು ರಾಜಕೀಯ ವ್ಯಕ್ತಿಗಳ ಮಾತಿಗೆ ಮನ್ನಣೆ ನೀಡಿ ಇದುವರೆಗೂ ಯಾರೊಬ್ಬರನ್ನು ಬಂಧಿಸದೇ ಕಾಲಹರಣ ಮಾಡುತ್ತಿದ್ದಾರೆ. ಶುಕ್ರವಾರ ಕಲ್ಕೆರೆ ಯಿಂದ ಕಡೂರು ತಹಸೀಲ್ದಾರ್ ಕಚೇರಿಗೆ ಮಧ್ಯರಾತ್ರಿ ಬಂದು ಧರಣಿ ನಡೆಸುತ್ತಿದ್ದೇವೆ. ಈ ವರೆವಿಗೂ ಯಾರೊಬ್ಬ ಅಧಿಕಾರಿ ಬಂದು ಮಾತನಾಡಿಸಿಲ್ಲ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಬಿ.ಎಚ್.ರವಿ, ಫಯಾಜ್ ಹಾಗೂ ಪ್ರದೀಪ್ ಆಕ್ರೋಶ ವ್ಯಕ್ತಪಡಿಸಿದರು.

ಸುಮಾರು 4 ಗಂಟೆಗೆ ತರೀಕೆರೆ ಉಪ ವಿಭಾಗಾಧಿಕಾರಿ ಡಾ.ಕಾಂತರಾಜ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ತನಿಖೆ ಸಾಗಿದ್ದು ಈಗಾಗಲೇ 940 ಪ್ರಕರಣ ಗುರುತಿಸಿದೆ. ಅಕ್ರಮ ಹಣ ವರ್ಗಾವಣೆಯಾಗಿರುವುದು ಕಂಡು ಬಂದಿದೆ. ಯಾರ ಹಣ ಯಾರಿಗೆ ಹೋಗಿದೆ, ಯಾರಿಗೆ ನ್ಯಾಯವಾಗಿ ಹೋಗಬೇಕಾಗಿತ್ತು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದು ಇನ್ನು 3 ದಿನಗಳಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಲಿದ್ದೇವೆ ಎಂದು ತಿಳಿಸುತ್ತಿದ್ದಂತೆ ಪ್ರತಿಭಟನಕಾರರು ನಾವು ಇದನ್ನು ಒಪ್ಪುವುದಿಲ್ಲ. ಕೂಡಲೆ ಅವರನ್ನು ಅಮಾನತು ಮಾಡಿ ಆದೇಶ ನೀಡಬೇಕು ಹಾಗೂ ತಪ್ಪಿತಸ್ಥರನ್ನು ರಕ್ಷಿಸುವ ಕೆಲಸ ಅಧಿಕಾರಿಗಳು ಮಾಡುತ್ತಿದ್ದಾರೆ. ತಪ್ಪಿತಸ್ಥರ ಹೆಸರನ್ನು ನಾವೇ ಹೇಳುತ್ತೇವೆ. ಕೂಡಲೇ ಅವರನ್ನು ಬಂಧಿಸಿ ಎಂದರು.

ರೈತರ ವಾದಕ್ಕೆ ಉಪ ವಿಭಾಗಾಧಿಕಾರಿ ಒಪ್ಪದೆ, ಸಮಗ್ರ ತನಿಖೆ ನಡೆಯುತ್ತಿದೆ. ಆರೋಪಿಗಳನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಪ್ರತಿಭಟನೆ ನಿಲ್ಲಿಸಿ ಎಂದು ಮನವಿ ಮಾಡಿದರೂ ರೈತರು ಜಗ್ಗದ ಕಾರಣ ಎಸಿ ಯವರು ಸ್ಥಳದಿಂದ ನಿರ್ಗಮಿಸಿದರು.

ಭ್ರಷ್ಟ ಅಧಿಕಾರಿಗಳಿಗೆ ಧಿಕ್ಕಾರ ಎಂದು ರೈತರು ಕೂಗುತ್ತಾ , ಸ್ಥಳಕ್ಕೆ ಜಿಲ್ಲಾಧಿಕಾರಿಗಳೇ ಬಂದು ತಪ್ಪಿತಸ್ಥರ ಅಮಾನತು ಮಾಡಲು ಆಗ್ರಹಿಸಿ ಧರಣಿ ಮುಂದುವರೆಸಿದರು.

ರೈತ ಸಂಘದ ಯುವ ಘಟಕದ ಅಧ್ಯಕ್ಷ ಫಯಾಜ್, ತಾಲೂಕು ಅಧ್ಯಕ್ಷ ಕೋಡಿಹಳ್ಳಿ ಪ್ರದೀಪ್, ಕಲ್ಕೆರೆ ಯತೀಶ್, ಪ್ರಭು, ಶಶಿಧರ್, ಮಲ್ಲಿಕಾರ್ಜುನ್‍ಸ್ವಾಮಿ, ಮಂಜುನಾಥ್,ಕಲ್ಕೆರೆ ಕುಮಾರ್, ಮಂಜುಳಮ್ಮ, ರಾಧಮ್ಮ ಹಾಗೂ ಅಖಿಲ ಕರ್ನಾಟಕ ಯುವಜನ ವಿದ್ಯಾರ್ಥಿ ಒಕ್ಕೂಟದ ರಾಜ್ಯಾಧ್ಯಕ್ಷ ಯಶವಂತ್ ಕಂಚಿ, ಶರತ್ ಬಿಳೆಕಲ್, ಅಜಯ್ ಉಪ್ಪಾರ್ ಸೇರಿದಂತೆ ನೂರಾರು ರೈತರು ಇದ್ದರು.

---ಬಾಕ್ಸ್ ---ಕಲ್ಕೆರೆಯಿಂದ ಶುಕ್ರವಾರ ರಾತ್ರಿ 52 ಕಿ.ಮೀ ಪಾದಯಾತ್ರೆ ನಡೆಸಿ ಕಡೂರು ತಾಲೂಕು ಕಚೇರಿಗೆ ರಾತ್ರಿ 11 ಗಂಟೆಗೆ ಬಂದರೆ ಇಲ್ಲಿ ಯಾರೂ ನಮ್ಮನ್ನು ಕೇಳಲಿಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸಿದರು.

ಬೆಳಗ್ಗೆಯಿಂದ 4 ಗಂಟೆವರೆಗೂ ಸ್ಥಳಕ್ಕೆ ಯಾವೊಬ್ಬ ಅಧಿಕಾರಿಯೂ ಬಾರದಿರುವುದನ್ನು ಖಂಡಿಸಿದ ರೈತ ಸಂಘ ಅಹೋರಾತ್ರಿ ಪ್ರತಿಭಟನೆಗೆ ಸಕಲ ಸಿದ್ಧತೆ ನಡೆಸಿಕೊಂಡು ಊಟ, ತಿಂಡಿ, ಶಾಮಿಯಾನ ಹಾಕಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಪ್ರದೀಪ್ ತಿಳಿಸಿದರು.

3ಕೆಕೆಡಿಯು2.

ಕಡೂರು ತಾಲೂಕು ಕಲ್ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅತಿವೃಷ್ಠಿ ಪರಿಹಾರದ ಹಣ ಅವ್ಯವಹಾರ ಮಾಡಿರು ವವರನ್ನು ಬಂಧಿಸಬೇಕೆಂದು ಆಗ್ರಹಿಸಿ ತಹಸೀಲ್ದಾರ್ ಕಚೇರಿ ಮುಂದೆ ರೈತರು ಅಹೋರಾತ್ರಿ ಪ್ರತಿಭಟನೆಗೆ ಮುಂದಾಗಿರುವುದು.

3ಕೆಕೆಡಿಯು2ಎ.

ಪ್ರತಿಭಟನಕಾರರನ್ನು ಉದ್ದೇಶಿಸಿ ಸಮಸ್ಯೆ ಆಲಿಸಲು ಬಂದ ತರೀಕೆರೆ ಉಪ ವಿಭಾಗಾಧಿಕಾರಿ ಡಾ.ಕಾಂತರಾಜ್ ರೈತರ ಸಮಸ್ಯೆ ಕೇಳಿದರು.ರೈತ ಸಂಘಟನೆಯ ಮುಖಂಡರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ