ಈಶ್ವರ ಖಂಡ್ರೆಯಿಂದ ಅಧಿಕಾರಿಗಳ ದುರ್ಬಳಕೆ: ಭಗವಂತ ಖೂಬಾ

KannadaprabhaNewsNetwork | Published : May 1, 2024 1:22 AM

ಸಾರಾಂಶ

ಸುಳ್ಳು, ಮೋಸ ಮಾಡಿದ್ದು ಉಸ್ತುವಾರಿ ಸಚಿವ ಖಂಡ್ರೆ ವಿನಾ ನಾನಲ್ಲ. ಸೋಮವಾರ ನಾಲ್ವರು ಪಿಕೆಪಿಎಸ್ ಅಧಿಕಾರಿಗಳು ಅಮಾನತು ಮಾಡುವ ಮೂಲಕ ಖಂಡ್ರೆ ಅಧಿಕಾರ ದುರ್ಬಳಕೆ ಮಾಡಿದ್ದು ಸಾಕ್ಷಿಯಾಗಿದೆ ಎಂದು ಬೀದರ್‌ನಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಆರೋಪ ಮಾಡಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಸೋಲಿನ ಭೀತಿಯಿಂದ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳನ್ನು ಪ್ರಚಾರ ಕಾರ್ಯದಲ್ಲಿ ಬಳಸಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಸಚಿವರು ಹಾಗೂ ಬೀದರ್ ಲೋಕಸಭೆ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಆರೋಪಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಜಿಸಿ ವೇತನ ಪಡೆಯುವ ಉಪನ್ಯಾಸಕರು, ಡಿಸಿಸಿ ಬ್ಯಾಂಕ್ ಹಾಗೂ ಪಿಕೆಪಿಎಸ್‌ನ ಕಾರ್ಯದರ್ಶಿಗಳನ್ನು ತಮ್ಮ ಚುನಾವಣಾ ಕಾರ್ಯದಲ್ಲಿ ಬಳಸಿಕೊಳ್ಳುತಿದ್ದಾರೆ. ಆದರೆ ಜಿಲ್ಲಾಧಿಕಾರಿಗಳು ಇದರಲ್ಲಿ ಯಾರು ಶಾಮಿಲಾಗಿಲ್ಲ ಎಂದು ಸಮಜಾಯುಷಿ ನೀಡಿದ್ದರು. ಆದರೆ ಸೋಮವಾರ ನಾಲ್ವರು ಪಿಕೆಪಿಎಸ್ ಅಧಿಕಾರಿಗಳು ಅಮಾನತು ಮಾಡುವ ಮೂಲಕ ಖಂಡ್ರೆ ಅಧಿಕಾರ ದುರ್ಬಳಕೆ ಮಾಡಿದ್ದು ಸಾಕ್ಷಿಯಾಗಿದೆ ಎಂದರು.

ಶರಣು ಮೋದಿ ಬಗ್ಗೆ ಚಕಾರವೆತ್ತುತ್ತಿಲ್ಲ:

ಅಧಿಕಾರದಲ್ಲಿದ್ದು ಲೂಟಿ ಮಾಡಿದ ಹಣದಿಂದ ಚುನಾವಣೆ ಎದುರಿಸುತ್ತಿದ್ದಾರೆ. ಡಿಸಿಸಿ ಬ್ಯಾಂಕ್ ಮೇಲೆ ದಾಳಿ ನಡೆದಾಗ ಕಲಬುರಗಿಯಲ್ಲಿ ಶರಣು ಮೋದಿಯವರನ್ನು ಪಕ್ಕಗೆ ಕೂಡಿಸಿಕೊಂಡು ಪತ್ರಿಕಾಗೋಷ್ಠಿ ನಡೆಸಿದ್ದರು. ಆದರೆ ಈಗ ಅದೇ ಶರಣು ಮೋದಿ 2 ಕೋಟಿ ಹಣದೊಂದಿಗೆ ಸಿಕ್ಕಿ ಬಿದ್ದಿದ್ದು ಆ ಹಣ ಕೂಡ ಖಂಡ್ರೆ ಅವರದ್ದು ಎಂದು ಹೇಳಲಾಗಿದೆ. ಭ್ರಷ್ಟಾಚಾರದಲ್ಲಿ ಮುಳುಗಿದ ಖಂಡ್ರೆ ಕುಟುಂಬ ಶರಣು ಮೋದಿ ಬಗ್ಗೆ ಚಕಾರ ಎತ್ತಿಲ್ಲ. ಅಲ್ಲದೇ ನೇಹಾ ಹಿರೇಮಠ ವಿಷಯದಲ್ಲಿ ಇಲ್ಲಿಯವರೆಗೆ ಬಾಯಿ ಬಿಚ್ಚಿಲ್ಲ ಏಕೆ ಎಂದು ಖೂಬಾ ಪ್ರಶ್ನಿಸಿದರು.

ಸುಳ್ಳು ಹೇಳುವುದರಲ್ಲಿ ಸಾಗರ ಖಂಡ್ರೆ ತಮ್ಮ ತಂದೆ ಈಶ್ವರ ಖಂಡ್ರೆ ಅವರನ್ನೇ ಮೀರಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಸಲ್ಲಿಸಲಾದ ಅಫಿಡವಿಟ್‌ನಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿಸುವ ಮೂಲಕ ಚುನಾವಣಾ ಆಯೋಗಕ್ಕೂ ಹೆದರುತ್ತಿಲ್ಲ. ಈ ವಿಚಾರವಾಗಿ ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ. ಎಂದು ಖೂಬಾ ಹೇಳಿದರು.

ಕಾಂಗ್ರೆಸ್‌ ಅಭ್ಯರ್ಥಿ ಸೋಲು ಖಚಿತ: ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನವಾಗುವುದು ಗ್ಯಾರಂಟಿ, ಬೀದರ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ಅಮರ ಖಂಡ್ರೆ ಕಳೆದುಕೊಳ್ಳುವುದು ಪಕ್ಕಾ. ಮತ್ತೆ ಉಮಾಕಾಂತ ನಾಗಮಾರಪಳ್ಳಿ ಅವರೆ ಬ್ಯಾಂಕ್‌ನ ಅಧ್ಯಕ್ಷರಾಗುವುದು ಗ್ಯಾರಂಟಿ ಎಂದ ಅವರು, ಎಷ್ಟೇ ಪ್ರಯತ್ನಪಟ್ಟರೂ ಕನಿಷ್ಠ 3 ಲಕ್ಷ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವುದು ಗ್ಯಾರಂಟಿ ಎಂದರು.

ನನ್ನ ವಿರುದ್ಧ ಸುಳ್ಳು ಆರೋಪ: ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಷಣ ತೆಲಂಗಾಣದಲ್ಲಿ ತಿರುಚಿದಂತೆ ಔರಾದ್ ತಾಲೂಕಿನ ಧುಪತಮಹಾಗಾಂವನಲ್ಲಿ ನಾನು ಆಡಿದ ಮಾತುಗಳು ತಿರುಚಲಾಗಿದೆ. ವೈರಲ್ ಥಾಟ್ಸ್ ಎಂಬ ನಕಲಿ ಫೇಸ್‌ಬುಕ್ ಅಕೌಂಟ್ ತೆರೆದು ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲು ಹೊರಟಿದ್ದಾರೆ. ಕಾಂಗ್ರೆಸ್‌ ಬಳಿ ಕಳಂಕಿತರನ್ನು ಹುಟ್ಟು ಹಾಕುವ ಫ್ಯಾಕ್ಟರಿ ಇದೆ. ಶರಣು ಮೋದಿ ಖಂಡ್ರೆ ಅವರ ಕಲೆಕ್ಷನ್ ಏಜೆಂಟ್ ಎಂದಿದ್ದೆ ಅದು ಸಾಬೀತು ಆಗಿದೆ. ಹೀಗಾಗಿ ಈ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಖೂಬಾ ನುಡಿದರು.

ಪತ್ರಿಕಾ ಗೋಷ್ಠಿಯಲ್ಲಿ ಬಿಜೆಪಿ ಕಲಬುರಗಿ ವಿಭಾಗೀಯ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ್, ಮಾಜಿ ಬೂಡಾ ಅಧ್ಯಕ್ಷ ಬಾಬುವಾಲಿ, ನಗರಸಭೆ ಸದಸ್ಯ ಶಶಿ ಹೊಸಳ್ಳಿ, ಪಕ್ಷದ ಸಹ ವಕ್ತಾರ ಬಸವರಾಜ ಪವಾರ, ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ಫರ್ನಾಂಡಿಸ್ ಹಿಪ್ಪಳಗಾಂವ, ದಯಾನಂದ, ಸ್ವಾಮಿದಾಸ ಕೆಂಪೆನೋರ್ ಸೇರಿದಂತೆ ಅನೇಕರು ಇದ್ದರು.

Share this article