ಕನ್ನಡಪ್ರಭವಾರ್ತೆ ವಿರಾಜಪೇಟೆ
ದೇಶದಲ್ಲಿ ಶೋಷಿತ ಸಮುದಾಯದ ಮೇಲೆ ದೌರ್ಜನ್ಯ ನಡೆದಾಗ ದೇಶ ಕಾನೂನು ಸಮುದಾಯ ವ್ಯಕ್ತಿಗಳಿಗೆ ಭದ್ರತೆ ನೀಡುವ ನಿಟ್ಟಿನಲ್ಲಿ ಎಸ್.ಸಿ.ಎಸ್.ಟಿ ಕಾನೂನು ಜಾರಿಗೆಯಾಗಿದೆ. ಈಗ ಕಾಂಗ್ರೇಸ್ ಸರ್ಕಾರ ಹಿಂದೂ ಸಂಘಟನೆಗಳ ಪ್ರಮುಖರನ್ನು ಗುರಿಯಾಗಿಸಿಕೊಂಡು ದಮನ ಮಾಡುವ ಹುನ್ನಾರದಿಂದ ಕಾನೂನು ದುರ್ಬಳಿಕೆ ಮಾಡಿಕೊಂಡಿದೆ ಎಂದು ಬಿಜೆಪಿ ಎಸ್.ಸಿ.ಎಸ್.ಟಿ ಮೋರ್ಚದ ರಾಜ್ಯ ಪ್ರಧಾನ ಕಾರ್ಯದರ್ಶಿ ಪರಮಾನಂದ ಆರೋಪಿಸಿದರು.ಕಾನೂನು ದುರ್ಬಳಕೆ ಹೋರಾಟ ಸಮಿತಿ ವತಿಯಿಂದ ವಿರಾಜಪೇಟೆ ಪೊಲೀಸ್ ಉಪ ವಿಭಾಗದ ಉಪ ಅಧೀಕ್ಷರ ಕಚೇರಿಯ ಮುಂಭಾಗದಲ್ಲಿ ನಡೆದ ಸಂಘಟನೆ ಪ್ರಮುಖರೊಬ್ಬರ ಮೇಲೆ ಕ್ಲುಲ್ಲಕ ಕಾರಣವನ್ನು ಒಡ್ಡಿ ಸುಳ್ಳು ಮೊಕದ್ದಮೆ ದಾಖಲು ಮಾಡಲಾಗಿದೆ ಎಂದು ಬಿಜೆಪಿ ಮತ್ತು ಸಂಘ ಪರಿವಾರ ವತಿಯಿಂದ ನಡೆದ ಬೃಹತ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.ದೇಶವನ್ನು ಕಾಂಗ್ರೆಸ್ ಸರ್ಕಾರ ಸುಮಾರು 60 ವರ್ಷಗಳು ಆಳಿದೆ. ಶೋಷಿತರ ಮೇಲೆ ದೌರ್ಜನ್ಯ ನಡೆದಾಗ ದೌರ್ಜನ್ಯವನ್ನು ತಡೆಗಟ್ಟಲು ಕಾನೂನು ಜಾರಿಗೆ ತಂದಿದೆ. ಆದರೆ ಶೋಷಿತ ಸಮುದಾಯವು ಇಂದಿಗೂ ಏಳಿಗೆ ಕಾಣಲು ಸಾಧ್ಯವಾಗಲಿಲ್ಲಾ ಎಂದು ಆರೋಪಿಸಿದರು.
ಕೊಡಗಿನ ವಿವಿಧ ಸ್ಥಳಗಳಲ್ಲಿ ಅಮಾಯಕರನ್ನು ಗುರಿಯಾಗಿಸಿಕೊಂಡು ಸುಮಾರು 16 ಎಟ್ರಸಿಟಿ ಪ್ರಕರಣ ದಾಖಲು ಮಾಡಲಾಗಿದೆ. ಅಲ್ಲದೆ ಹಿಂದೂ ಸಂಘಟನೆ ಪ್ರಮುಖರಾದ ಹೇಮಂತ್ ಅವರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಇದು ಅಕ್ಷಮ್ಯ ಕಾನೂನು ವಿರೋಧಿ ನೀತಿ. ಅಲ್ಲದೆ ಹಿಂದೂ ಸಂಘಟನೆ ಪ್ರಮುಖರು ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಕಾನೂನು ದುರ್ಬಳಕೆ ಮಾಡುವ ಪ್ರವೃತ್ತಿಯಾಗಿದೆ. ಇದಕ್ಕೆ ಶಾಸಕರು ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಪೊಲೀಸು ಇಲಾಖೆಯು ಒಂದು ಪಕ್ಷದ ಪರವಾಗಿ ಕರ್ತವ್ಯ ನಿರ್ವಹಿಸದೇ ಸರ್ಕಾರದ ನ್ಯಾಯ ಸಮ್ಮತ ತನಿಖೆ ಮಾಡಬೇಕು. ಅಲ್ಲದೆ ಪ್ರಕರಣ ದಾಖಲು ಮಾಡಲಾಗಿರುವ ಹೇಮಂತ್ ಅವರನ್ನು ತಕ್ಷಣವೇ ಪ್ರಕರಣದಿಂದ ಮುಕ್ತಿಗೋಳಿಸುವಂತೆ ರಾಜ್ಯ ಸರ್ಕಾರ ಮತ್ತು ಪೊಲೀಸು ಇಲಾಖೆಯನ್ನು ಆಗ್ರಹಿಸುತ್ತಿದ್ದೇವೆ ಎಂದು ಹೇಳಿದರುಕೊಡಗು ಜಿಲ್ಲಾ ಬಿಜೆಪಿ ಅಕ್ಷರಾದ ರವಿ ಕಾಳಪ್ಪ ಅವರು ಮಾತನಾಡಿ, ಈ ಹಿಂದೆ ಸಾಮರಸ್ಯದಿಂದ ಇದ್ದ ಕೊಡಗು ಜಿಲ್ಲೆಗೆ ಕಳಂಕ ಬರುವ ರೀತಿಯಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಿ ಧರ್ಮಗಳ ಮಧ್ಯೆ ಕಂದಕ ನಿರ್ಮಾಣ ಮಾಡಿರುವ ಕಾಂಗ್ರೆಸ್ ಸರ್ಕಾರ ಇದೀಗ ಮತ್ತೊಮ್ಮೆ ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತಿ ಒಡೆದು ಆಳುವ ನೀತಿಯನ್ನು ಮಾಡುತ್ತಿದೆ. ಕಾಂಗ್ರೇಸ್ ಸರ್ಕಾರಕ್ಕೆ ಒಂದೇ ತಿಳಿದಿರುವುದು ಒಡೆದು ಆಳವ ಪದ್ದತಿ ಎಂದು ಆರೋಪಿಸಿದರು. ಹಿಂದೂ ಸಂಘಟನೆಗಳು ಧರ್ಮದ ಬಗ್ಗೆ ರಾಷ್ಟ್ರದ ಬಗ್ಗೆ ಚಿಂತನೆ ನಡೆಸುತಿದ್ದರು. ಕಾಂಗ್ರೆಸ್ ಸರ್ಕಾರವು ಧರ್ಮವನ್ನು ರಕ್ಷಣೆ ಮಾಡುವವರನ್ನು ಘಾತುಕರೆಂದು ಪ್ರತಿಪಾದಿಸುತಿದ್ದಾರೆ. ವ್ಯಂಗ್ಯವಾಡಿದರು.ಕೊಡಗು ಜಿಲ್ಲಾ ಬಿಜೆಪಿ ಎಸ್.ಟಿ ಮೋರ್ಚದ ಅಧ್ಯಕ್ಷರಾದ ಅಭಿಜೀತ್ ಅವರು ಮಾತನಾಡಿ, ಹಿಂದೂ ಧರ್ಮದ ಉಳಿವಿಗಾಗಿ ಹೋರಾಟ ಮಾಡುವ ವ್ಯಕ್ತಿಗಳನ್ನು ಗುರಿಯಾಗಿಸುವುದು, ಪ್ರಮುಖರನ್ನು ದಮನ ಮಾಡುವ ನೀತಿ ಕಾಂಗ್ರೆಸ್ ಪಕ್ಷದ್ದಾಗಿದೆ. ಕಾಂಗ್ರೆಸ್ ಸರ್ಕಾರ ಧರ್ಮ ಧರ್ಮಗಳ ಮಧ್ಯೆ ಇಬ್ಬಾಗ ಮಾಡುವ ಧರ್ಮ ಅನುಸರಿಸಿಕೊಂಡು ಬರುತ್ತಿದೆ. ಶೋಷಿತರ ಉದ್ಧಾರಕ್ಕಾಗಿ ತಂದಿರುವ ಕಾನೂನನ್ನು ಇಂದು ಕಾಂಗ್ರೆಸ್ ಸರ್ಕಾರ ದುರ್ಬಳಕೆ ಮಾಡಿಕೊಂಡು ಸಾಗುತ್ತಿದೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ದಲಿತರನ್ನು ಎತ್ತಿಕಟ್ಟಿ ಹಿಂದೂ ಸಂಘಟನೆಗಳ ಪ್ರಮುಖರನ್ನು ದಮನ ಮಾಡುವ ನಿಟ್ಟಿನಲ್ಲಿ ಕಾನೂನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಪ್ರತಿಭಟನೆ ವೇಳೆಯಲ್ಲಿ ಸಂಘಟನೆಗಳಿಂದ ಮನವಿ ಸ್ವೀಕರಿಸಿ ಮಾತನಾಡಿದ ವಿರಾಜಪೇಟೆ ಉಪ ವಿಭಾಗ ಡಿವೈಎಸ್ಪಿ ಮೋಹನ್ ಕುಮಾರ್ ಅವರು ತನಿಖೆಯು ಎಂದಿನಂತೆ ನಡೆಯುತ್ತದೆ. ಕಾನೂನು ಬದ್ಧವಾಗಿ ತನಿಖೆಯನ್ನು ನಡೆಸಲಾಗುತ್ತದೆ ಎಂದು ಹೇಳಿದರು.ಪ್ರತಿಭಟನೆಯಲ್ಲಿ ತಾಲೂಕು ಮಂಡಲ ಅಧ್ಯಕ್ಷರಾದ ಸುವೀನ್ ಗಣಪತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೆಲ್ಲಿರ ಚಲನ್ , ಪ್ರಮುಖರಾದ ರೀನಾ ಪ್ರಕಾಶ್, ಯಮುನಾ ಚೆಂಗಪ್ಪ, ವಿಶ್ವ ಹಿಂದೂ ಪರಿಷತ್ ನ ತಾಲೂಕು ಅಧ್ಯಕ್ಷರಾದ ಬಿ.ಎಂ. ಕುಮಾರ್, ನಗರ ಬಿಜೆಪಿ ಅಧ್ಯಕ್ಷ ಟಿ.ಪಿ ಕೃಷ್ಣ, ವಿವಿಧ ಹಿಂದೂ ಪರ ಸಂಘಟನೆಗಳ ಪ್ರಮುಖರು, ವಿರಾಜಪೇಟೆ ಪುರಸಭೆಯ ಸದಸ್ಯರು, ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.