ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರಣ್ಯ ಅಧಿಕಾರಿಗಳು ಭ್ರಷ್ಟಾಚಾರ ನಡೆಸುತ್ತಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಕಳೆದೊಂದು ದಶಕದ ಅವಧಿಯಲ್ಲಿ ಆನೆ ಕಂದಕ, ಸೋಲಾರ್ ತಂತಿ ಬೇಲಿ, ರೈಲ್ವೆ ಬ್ಯಾರಿಕೇಡ್ ನಿರ್ಮಾಣ, ಕೆರೆ ನಿರ್ಮಾಣ, ಕೆರೆ ಹೂಳೆತ್ತುವುದು, ಸಸ್ಯ ಕ್ಷೇತ್ರಗಳ ನಿರ್ಮಾಣ ಮತ್ತು ಸಸಿ ನೆಡುವ ವಿವಿಧ ಯೋಜನೆಗಳಿಗೆ ಕೋಟ್ಯಾಂತರ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ, ಆದರೆ ಇದು ಸಮರ್ಪಕವಾಗಿ ಬಳಕೆಯಾಗಿಲ್ಲ. ಯಾವುದೇ ಹಣ್ಣು ಹಂಪಲಿನ ಗಿಡ ಮರಗಳನ್ನು ಬೆಳೆಸುವ ಪ್ರಯತ್ನ ಮಾಡಿಲ್ಲ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ರೈತರು ಸ್ವಂತ ಉಪಯೋಗಕ್ಕೆ ಮರ ಕಡಿಯಲು ಅನುಮತಿ ಕೋರಿ ಸಲ್ಲಿಸಿರುವ ಹಲವಾರು ಅರ್ಜಿಗಳಿಗೆ ಬಹಳಷ್ಟು ವರ್ಷಗಳಿಂದ ಅನುಮತಿ ನೀಡದೇ ಸತಾಯಿಸಲಾಗುತ್ತಿದ್ದು, ಈ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಅಧಿಕ ಭಾರದ ಟ್ರಕ್‌ಗಳ ಸಂಚಾರ ನಿರ್ಬಂಧಿಸಿದ್ದರೂ ಸಿಲ್ವರ್ ಮರಗಳ ಸಾಗಾಟ ಮುಂದುವರಿದಿದ್ದು, ಅಕ್ರಮಕ್ಕೆ ಕಾರಣವಾಗಿರುವ ಚೆಕ್‌ಪೋಸ್ಟ್‌ಗಳಲ್ಲಿ ಸಿಸಿಟಿವಿ ಅಳವಡಿಸಬೇಕು. ಅರಣ್ಯ ಇಲಾಖೆಯಲ್ಲಿ ಕಳೆದ 10 ವರ್ಷಗಳಲ್ಲಿ ಕೋಟ್ಯಂತರ ರು. ಅವ್ಯವಹಾರ ಆಗಿದ್ದು, ಈ ಬಗ್ಗೆ ಸೂಕ್ತ ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.ಪ್ರಸ್ತುತ ಅರಣ್ಯ ಇಲಾಖೆಯಲ್ಲಿ ಸಾರ್ವಜನಿಕರ ಭೇಟಿಗಾಗಿ ಮಧ್ಯಾಹ್ನ 3 ಗಂಟೆಯ ಬಳಿಕ ಸಮಯವನ್ನು ನೀಡಲಾಗುತ್ತಿದೆ. ಆದರೆ, ಜಿಲ್ಲೆಯ ವಿವಿಧೆಡೆಗಳಿಂದ ತಮ್ಮ ಸಣ್ಣ ಪುಟ್ಟ ಕೆಲಸ ಕಾರ್ಯಗಳಿಗಾಗಿ ಆಗಮಿಸುವವರು ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದು, ಇಲಾಖಾ ಕೆಲಸ ಕಾರ್ಯಗಳಿಗೆ ಬೆಳಗ್ಗಿನಿಂದ ಸಂಜೆಯವರೆಗೆ ಅವಕಾಶವನ್ನು ಕಲ್ಪಿಸಬೇಕು. ಅರಣ್ಯ ಕಚೇರಿಗಳಲ್ಲಿ ಕಳೆದ ಅನೇಕ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಬೇಕು ಎಂದು ಅರವಿಂದ್ ಕುಟ್ಟಪ್ಪ ಆಗ್ರಹಿಸಿದರು.
ಮುಂಗಾರಿನ ಹಿನ್ನೆಲೆಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಅಧಿಕ ತೂಕದ ವಾಹನಗಳ ಸಂಚಾರಕ್ಕೆ ಜಿಲ್ಲಾಧಿಕಾರಿಗಳು ನಿರ್ಬಂಧ ವಿಧಿಸಿದ್ದಾರೆ. ಆದರೆ, ರಾತ್ರಿ 12 ಗಂಟೆಯ ಬಳಿಕ ಜಿಲ್ಲೆಯ ಚೆಕ್ ಪೋಸ್ಟ್‌ಗಳ ಮೂಲಕ ಅಧಿಕ ತೂಕದ ಲಾರಿಗಳ ಸಂಚಾರ ನಿರಾತಂಕವಾಗಿ ಮುಂದುವರೆದಿದೆ ಎಂದು ಗಮನ ಸೆಳೆದರು. ಬೆಳೆಗಾರರು ನೀಡುವ ಮರಗಳ ಸಾಗಾಟಕ್ಕೆ 365 ದಿವಸಗಳ ಕಾಲ ಜಿಲ್ಲೆಯಲ್ಲಿ ಅವಕಾಶ ಒದಗಿಸಬೇಕು ಎಂದು ಒತ್ತಾಯಿಸಿದರು.ಸಂಘದ ಉಪಾಧ್ಯಕ್ಷ ಕೆ.ಎ.ಆದಂ, ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಎ.ಮನೋರಂಜನ್, ಕಾನೂನು ವಿಭಾಗದ ವಕ್ತಾರ ಸಿ.ಬಿ.ಪೂವಣ್ಣ, ಸಾಮಾಜಿಕ ಜಾಲತಾಣದ ವಕ್ತಾರ ಕೆ.ಕೆ.ಹಂಸ ಹಾಗೂ ಸದಸ್ಯ ಸಿ.ಎಂ.ಯಾಹ್ಯಾ ಸುದ್ದಿಗೋಷ್ಠಿಯಲ್ಲಿದ್ದರು.