ಹುಬ್ಬಳ್ಳಿ: ಕೆಎಲ್ಇ ಸಂಸ್ಥೆಯ ನಿರ್ದೇಶಕ ಹಾಗೂ ಶಿಕ್ಷಣ ಪ್ರೇಮಿ ಶಂಕರಣ್ಣ ಮುನವಳ್ಳಿ ಅವರ 75ನೇ ಜನ್ಮ ದಿನದ ಅಂಗವಾಗಿ ಶಂಕರಣ್ಣ ಈಶ್ವರಪ್ಪ ಮುನವಳ್ಳಿ ಅಮೃತ ಮಹೋತ್ಸವ ಅಭಿನಂದನಾ ಸಮಿತಿ ವತಿಯಿಂದ ನಗರದ ಖಾಸಗಿ ಹೋಟೆಲ್‌ನ ಬೃಹತ್ ವೇದಿಕೆಯಲ್ಲಿ ಭಾನುವಾರ ಸಂಜೆ ಅಮೃತ ಮಹೋತ್ಸವ ಸಮಾರಂಭ ವಿಜೃಂಭಣೆಯಿಂದ ಜರುಗಿತು.
ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರು ಹಾಗೂ ಕಲಾವಿದರಿಂದ ನಡೆದ ಸಂಗೀತ ಕಾರ್ಯಕ್ರಮಕ್ಕೆ ಮೆರಗು ತಂದುಕೊಟ್ಟಿತು. ರೇಡಿಯೋ ಜಾಕಿ ಹಾಗೂ ಗಾಯಕ ಆರ್.ಜೆ. ರಸೀದ್ ಹಾಡಿದ ಗೊಂಬೆ ಹೇಳುತೈತೆ...ಮತ್ತೆ ಹೇಳುತೈತೆ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಸಮಾರಂಭದಲ್ಲಿ ಶಂಕರಣ್ಣ ಮುನವಳ್ಳಿ ಜೀವನ ಸಾಧನೆ ಮತ್ತು ವ್ಯಕ್ತಿತ್ವ ಕುರಿತು ವಿಡಿಯೋ ಪ್ರದರ್ಶನ ಮಾಡಲಾಯಿತು. ಈ ವೇಳೆ ಮಾರ್ಗದರ್ಶಿ ಎಂಬ ಅಭಿನಂದನಾ ಗ್ರಂಥವನ್ನು ಗಣ್ಯರು ಲೋಕಾರ್ಪಣೆ ಮಾಡಿದರು. 75ನೇ ಜನ್ಮ ದಿನದ ಆಚರಿಸಿಕೊಂಡು ಶಂಕರಣ್ಣ ಮುನವಳ್ಳಿಯವರಿಗೆ ಗಣ್ಯರು, ರಾಜಕಾರಣಿಗಳು, ಉದ್ಯಮಿಗಳು, ಸ್ನೇಹಿತರು, ಬಂಧು-ಬಾಂಧವರು ಶಾಲು ಹೊದಿಸಿ, ಸನ್ಮಾನಿಸುವ ಮೂಲಕ ಶುಭಾಶಯ ಕೋರಿದರು.ಈ ವೇಳೆ ನಡೆದ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶಂಕರಣ್ಣ ಮುನವಳ್ಳಿ ಗದಗದಿಂದ ಇಲ್ಲಿಗೆ ಬಂದು ವ್ಯಾಪಾರ ಆರಂಭಿಸಿ ಮುಂದೆ ಶಿಕ್ಷಣ ಕ್ಷೇತ್ರಕ್ಕೆ ಬಂದು ಕೆಎಲ್‌ಇ ಸಂಸ್ಥೆ ನಿರ್ದೇಶಕರಾಗಿ, ಗುರುಸಿದ್ದೇಶ್ವರ ಕೋ ಆಪ್ ಬ್ಯಾಂಕ್ ಅಧ್ಯಕ್ಷರಾಗಿ ಮಾದರಿ ಸೇವೆ ಸಲ್ಲಿಸಿದ್ದಾರೆ. ಎಲ್ಲ ಉದ್ಯಮದಲ್ಲಿ ತಮ್ಮ ಛಾಪು ಮೂಡಿಸಿದ ಅತ್ಯಂತ ಸರಳ ಹಾಗೂ ಸಹೃದಯಿ ವ್ಯಕ್ತಿಯಾಗಿದ್ದಾರೆ ಎಂದರು.
ಸಂಸದ ಜಗದೀಶ ಶೆಟ್ಟರ್ ಮಾತನಾಡಿ, ಗುರುಸಿದ್ದೇಶ್ವರ ಬ್ಯಾಂಕ್ ಅಭಿವೃದ್ಧಿ, ಕೆಎಲ್ ಇ ಸಂಸ್ಥೆ ಬೆಳವಣಿಗೆಗೆ ಶಂಕರಣ್ಣ ಅವರ ಶ್ರಮ ಅಧಿಕವಾಗಿದೆ. ಕೋರೆ ತಂಡದಲ್ಲಿ ಮುನವಳ್ಳಿ ಪ್ರಧಾನ ವ್ಯಕ್ತಿ. ಹುಬ್ಬಳ್ಳಿ ಭಾಗದಲ್ಲಿ ಶಿಕ್ಷಣ ಸಂಸ್ಥೆ ಬೆಳೆಸುವಲ್ಲಿ ಕೋರೆ, ಮುನವಳ್ಳಿ ಶ್ರಮ ಅಧಿಕವಾಗಿದೆ ಎಂದರು.
ಉದ್ಯಮಿ ಡಾ. ವಿಜಯ ಸಂಕೇಶ್ವರ, ಯಾವುದೇ ಅಧಿಕಾರ ಇಲ್ಲದಿದ್ದರೂ ಇರುವ ಕೆಲಸದಲ್ಲಿ ಸಮಾಜ ಸೇವೆ ಮಾಡಿದ ವ್ಯಕ್ತಿ ಮುನವಳ್ಳಿಯವರಾಗಿದ್ದಾರೆ ಎಂದು ಶ್ಲಾಘಿಸಿದರು.
ಶಂಕರಣ್ಣ ಮುನವಳ್ಳಿ ಮಾತನಾಡಿ, ಎನಗಿಂತ ಕಿರಿಯರಿಲ್ಲ, ಶಿವ ಭಕ್ತರಿಗಿಂತ ಹಿರಿಯರಿಲ್ಲ ಎಂಬಂತೆ 75 ವರ್ಷ ಸಮಾಜ ಸೇವೆ ಮಾಡಲು ಭಗವಂತ ಅವಕಾಶ ನೀಡಿದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ತಾವೆಲ್ಲರೂ ತೋರಿದ ಈ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋಣಿ. ದೇವರು ಅವಕಾಶ ಕೊಟ್ಟರೆ ಮುಂಬರುವ ದಿನಗಳಲ್ಲಿ 50 ಜನರಿಗೆ ಉಚಿತ ಸಾಮೂಹಿಕ ವಿವಾಹ, ಆರೋಗ್ಯ ತಪಾಸಣೆ ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಕ್ರಮ ಮಾಡುವ ಉದ್ದೇಶ ಇಟ್ಟುಕೊಂಡಿದ್ದೇನೆ ಎಂದರು.
ವಿಪ ಸದಸ್ಯೆ ಹೇಮಲತಾ ನಾಯಕ, ಸಚಿವ ಸಂತೋಷ ಲಾಡ್, ಶಾಸಕರಾದ ಬಸವರಾಜ ರಾಯರಡ್ಡಿ, ಎಸ್.ವಿ. ಸಂಕನೂರ, ಮಹಾಂತೇಶ ಕೌಜಲಗಿ, ಜಗದೀಶ ಗುಡಗುಂಡಿ, ಅರವಿಂದ ಬೆಲ್ಲದ, ಮೋಹನ ಲಿಂಬಿಕಾಯಿ, ಮಾಂತೇಶ ಕವಟಗಿಮಠ, ವಿಪ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮಾಜಿ ಸಂಸದ ಐ.ಜಿ. ಸನದಿ, ಎಸ್.ಪಿ. ಸಂಶಿಮಠ, ಎಸ್.ಐ. ಚಿಕ್ಕನಗೌಡ್ರ, ಡಾ. ಅಶೋಕ ಶೆಟ್ಟರ್, ಡಿ.ಆರ್. ಪಾಟೀಲ, ಶರಣಪ್ಪ ಮತ್ತಿಕಟ್ಟಿ, ಮಹೇಂದ್ರ ಸಿಂಘಿ, ಮಾಜಿ ಮೇಯರ್ ಈರೇಶ ಅಂಚಟಗೇರಿ, ವಿಜಯಾನಂದ ಹೊಸಕೋಟಿ, ಚನ್ನವೀರ ಮುಂಗರವಾಡಿ, ಕೆಎಲ್ ಇ ಸಂಸ್ಥೆಯ ವಿವಿಧ ಕಾಲೇಜಿನ ಪ್ರಾಚಾರ್ಯರು, ಪ್ರಾಧ್ಯಾಪಕರು, ಚೇಂಬರ್ ಆಫ್ ಕಾಮರ್ಸ್‌ನ ಪದಾಧಿಕಾರಿಗಳು ಹಾಗೂ ಗುರುಸಿದ್ಧೇಶ್ವರ ಬ್ಯಾಂಕ್, ಎಪಿಎಂಸಿ ವರ್ತಕರ ಸಂಘ ಪದಾಧಿಕಾರಿಗಳು ಇದ್ದರು.