ದೌರ್ಜನ್ಯ ತಡೆ ಕಾಯ್ದೆ ದುರುಪಯೋಗ: ‘ಹೈ’ ಬೇಸರ

KannadaprabhaNewsNetwork |  
Published : Feb 07, 2026, 02:00 AM IST
ಹೈಕೋರ್ಟ್‌ | Kannada Prabha

ಸಾರಾಂಶ

ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗದ ಮತ್ತು ಪರಿಶಿಷ್ಟ ಜಾತಿಗೆ ಸೇರಿದ ದೊಡ್ಡಬಳ್ಳಾಪುರದ ಕೋನಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೊಠಡಿಗೆ ಹೋಗುವುದಿಲ್ಲ ಎಂದು ಹೇಳಿರುವ ಆರೋಪದ ಮೇಲೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಶ್ಮಿ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ ಕಾಯ್ದೆ) ಅಡಿ ದಾಖಲಾಗಿದ್ದ ಪ್ರಕರಣದ ತನಿಖೆಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗದ ಮತ್ತು ಪರಿಶಿಷ್ಟ ಜಾತಿಗೆ ಸೇರಿದ ದೊಡ್ಡಬಳ್ಳಾಪುರದ ಕೋನಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೊಠಡಿಗೆ ಹೋಗುವುದಿಲ್ಲ ಎಂದು ಹೇಳಿರುವ ಆರೋಪದ ಮೇಲೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಶ್ಮಿ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ ಕಾಯ್ದೆ) ಅಡಿ ದಾಖಲಾಗಿದ್ದ ಪ್ರಕರಣದ ತನಿಖೆಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

ಕೋನಘಟ್ಟ ಗ್ರಾಪಂ ಅಧ್ಯಕ್ಷೆಯಾಗಿದ್ದ ಚಾಂದಿನಿ ನೀಡಿದ್ದ ದೂರು ಆಧರಿಸಿ ತಮ್ಮ ವಿರುದ್ಧ ದೊಡ್ಡಬಳ್ಳಾಪುರ ಗ್ರಾಮೀಣ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸಬೇಕು ಎಂದು ಪಿಡಿಒ ರಶ್ಮಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು, ವಾಲ್ಮೀಕಿ ಜಯಂತಿ ಆಚರಣೆ ಕಾರ್ಯಕ್ರಮಕ್ಕೆ ಭಾಗಿಯಾಗಿಲ್ಲ. ದೂರುದಾರೆಯ ಕೊಠಡಿಗೆ ಹೋಗಿಲ್ಲ ಎಂಬ ಕಾರಣಕ್ಕೆ ಅರ್ಜಿದಾರರ ವಿರುದ್ಧ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಜಾತಿ ನಿಂದನೆ ಮತ್ತು ಶಾಂತಿ ಕದಡುವುದನ್ನು ಪ್ರಚೋದಿಸಲು ಉದ್ದೇಶಪೂರ್ವಕವಾಗಿ ಅವಮಾನ ಮಾಡಿದ ಅಪರಾಧದಡಿ ಎಫ್‌ಐಆರ್‌ ದಾಖಲಾಗಿದೆ. ಅರ್ಜಿದಾರರು ವಿವಾದಿತ ದಿನದಂದು ನಡೆದ ಎಲ್ಲ ಕಾರ್ಯಕ್ರಮಗಳಿಗೆ ಹಾಜರಾಗಿದ್ದಾರೆ ಎಂದು ಅವರ ಪರ ಹಿರಿಯ ವಕೀಲ ಅರುಣ್‌ ಶ್ಯಾಮ್‌ ತಿಳಿಸಿ, ಆ ಕುರಿತ ಪೋಟೋಗಳನ್ನು ಸಲ್ಲಿಸಿದ್ದಾರೆ. ಎಸ್ಸಿ-ಎಸ್ಸಿ (ದೌರ್ಜನ್ಯ) ತಡೆ ಕಾಯ್ದೆಯ ದುರುಪಯೋಗಕ್ಕೆ ಈ ಪ್ರಕರಣ ಮತ್ತೊಂದು ಅತ್ಯುತ್ತಮ ಉದಾಹರಣೆ ಎಂದು ಅಭಿಪ್ರಾಯಪಟ್ಟಿತು.

ಜೊತೆಗೆ, ಅರ್ಜಿದಾರರ ವಿರುದ್ದ ಎಫ್‌ಐಆರ್‌ಗೆ ಸಂಬಂಧಿಸಿದ ಎಲ್ಲ ತನಿಖೆಗೆ ತಡೆಯಾಜ್ಞೆ ನೀಡಿದ ಪೀಠ, ಅರ್ಜಿ ಸಂಬಂಧ ದೊಡ್ಡಬಳ್ಳಾಪುರ ಗ್ರಾಮೀಣಾ ಠಾಣಾ ಪೊಲೀಸರಿಗೆ ಮತ್ತು ಪ್ರಕರಣ ದೂರುದಾರರಾದ ಕೋನಘಟ್ಟ ಗ್ರಾಪಂ ಅಧ್ಯಕ್ಷರಾಗಿದ್ದ ಚಾಂದಿನಿ ಅವರಿಗೆ ತುರ್ತು ನೋಟಿಸ್‌ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.

ಪ್ರಕರಣದ ವಿವರ:

ಚಾಂದಿನಿ ಅವರು 2025ರ ನ.6ರಂದು ಪೊಲೀಸರಿಗೆ ದೂರು ನೀಡಿದ್ದರು. ಆ ದೂರಿನಲ್ಲಿ ‘2025ರ ಅ.31ರಂದು ಮಧ್ಯಾಹ್ನ 12ಕ್ಕೆ ಪಂಚಾಯಿತಿ ಆಡಳಿತ ಮಂಡಳಿ ತುರ್ತು ಸಭೆ ಆಯೋಜಿಸಿದ್ದೆ. ಸಭೆ ನಂತರ ಸಭೆ ನಡಾವಳಿ ಬಗ್ಗೆ ಚರ್ಚಿಸಲು ಪಿಡಿಒ ರಶ್ಮಿ ಅವರನ್ನು ನನ್ನ ಕೊಠಡಿಗೆ ಕರೆದಿದ್ದೆ. ಆಗ ರಶ್ಮಿ, ನಾನು ನಿನ್ನ ಕೊಠಡಿಗೆ ಏಕೆ ಬರಬೇಕು? ಬೇಕಿದ್ದರೆ ನೀನೇ ನನ್ನ ಕೊಠಡಿಗೆ ಬಾ. ಎಸ್ಸಿ ಜನಾಂಗದವಳಾದ ನಿನ್ನ ಕೊಠಡಿಗೆ ನಾನು ಬರುವುದಿಲ್ಲ ಎಂದಿದ್ದರು. ಗ್ರಾಪಂ ಸದಸ್ಯರಾದ ಪ್ರಭಾಕರ್‌, ವಾಲ್ಮೀಕಿ ಜಯಂತಿ ರಾಷ್ಟ್ರೀಯ ಹಬ್ಬದ ಆಚರಣೆಗೆ ಏಕೆ ಬಂದಿಲ್ಲ ಎಂದು ಕೇಳಿದರೆ, ಯಾವ ವಾಲ್ಮೀಕಿ, ಯಾವ ಜಯಂತಿ? ನನಗೇನೂ ಗೊತ್ತಿಲ್ಲ ಎಂದು ರಶ್ಮಿ ಉತ್ತರಿಸಿದ್ದಾರೆ. ಆ ಮೂಲಕ ಪರಿಶಿಷ್ಟ ಜನಾಂಗಕ್ಕೆ ಸೇರಿದ ಮಹಾನ್‌ ದಾರ್ಶನಿಕ ವಾಲ್ಮೀಕಿ ಅವರನ್ನು ನಿಂದಿಸಿದ್ದಾರೆ’ ಎಂದು ದೂರಿನಲ್ಲಿ ಚಾಂದಿನಿ ಆರೋಪಿಸಿದ್ದರು.

ಈ ದೂರು ಆಧರಿಸಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು. ಅದರ ರದ್ದತಿಗೆ ಕೋರಿ ರಶ್ಮಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರ ಶ್ರೀಗಳ ಜ್ಞಾನಮಾರ್ಗ ನಮಗೆ ಆದರ್ಶ
ಮುಂದಿನ ಪೀಳಿಗೆ ಧರ್ಮವಂತರಾಗಿಸೋದೆ ಜೈನ ಧರ್ಮದ ಉದ್ದೇಶ: ಜೈನಮುನಿ ಕುಲರತ್ನಭೂಷಣ ಮಹಾರಾಜರು