ಕನ್ನಡಪ್ರಭ ವಾರ್ತೆ ಅಥಣಿ
ರಾಜ್ಯದಲ್ಲಿ ಪುಂಡಾಟಿಕೆ ನಡೆಸುತ್ತಿರುವ ಎಂಇಎಸ್ ನಿಷೇಧ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ನಡೆದ ಕರ್ನಾಟಕ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.ಬಂದ್ ಹಿನ್ನೆಲೆ ಪಟ್ಟಣದ ಬಹುತೇಕ ವ್ಯಾಪಾರಿಗಳು ತಮ್ಮ ಅಂಗಡಿ ಮುಂಗಟ್ಟು ಬಂದ್ ಮಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಶಾಲಾ ಕಾಲೇಜುಗಳು ಮತ್ತು ಸಾರಿಗೆ ವ್ಯವಸ್ಥೆ ಎಂದಿನಂತೆ ಕಾರ್ಯನಿರ್ವಹಿಸಿದವು. ಬೆಳಗ್ಗೆ 10 ಗಂಟೆಯ ನಂತರ ಕರವೇ ಕಾರ್ಯಕರ್ತರು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸಮಾವೇಶಗೊಂಡು ಬೈಕ್ ರ್‍ಯಾಲಿ ನಡೆಸುತ್ತಿದ್ದಂತೆ ಅಲ್ಲಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಅಂಗಡಿಗಳನ್ನು ಬಂದ್ ಮಾಡಿ ಬೆಂಬಲ ವ್ಯಕ್ತಪಡಿಸಿದರು. ಪಟ್ಟಣದ ಡಾ.ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಕಿಲಹೊತ್ತು ಜೇವರ್ಗಿ-ಸಂಕೇಶ್ವರ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಿದರು.
ಈ ವೇಳೆ ಪ್ರತಿಭಟನೆ ನೇತೃತ್ವ ವಹಿಸಿದ್ದ ಕರವೇ ಶಿವರಾಮೇಗೌಡ ಬಣದ ಚಿಕ್ಕೋಡಿ ವಿಭಾಗೀಯ ಅಧ್ಯಕ್ಷ ವಿನಯಗೌಡ ಪಾಟೀಲ ಮಾತನಾಡಿ, ಬೆಳಗಾವಿ ಗಡಿ ವಿಚಾರವಾಗಿ ಮತ್ತು ಎಂಇಎಸ್ ಮತ್ತು ಶಿವಸೇನೆ ಕಾರ್ಯಕರ್ತರು ಮೇಲಿಂದ ಮೇಲೆ ಕನ್ನಡಿಗರ ಮೇಲೆ ನಡೆಸುತ್ತಿರುವ ದೌರ್ಜನ್ಯ ಸಂಘಟನೆಯಿಂದ ತೀವ್ರವಾಗಿ ಖಂಡಿಸುತ್ತೇವೆ. ಮರಾಠಿಗರ ಪುಂಡಾಟಿಕೆ ಹತ್ತಿಕ್ಕುವಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಕನ್ನಡ ನಾಡಿನ ಅನ್ನ, ನೀರು ಸೇವಿಸಿ ನಾಡದ್ರೋಹಿ ಕೃತ್ಯ ಎಸಗುವವರನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.ಅಥಣಿ ತಾಲೂಕ ಘಟಕದ ಕರವೇ ಅಧ್ಯಕ್ಷ ಉದಯ ಮಾಕಾಣಿ ಮಾತನಾಡಿ, ಬೆಳಗಾವಿಯಲ್ಲಿ ಮೇಲಿಂದ ಮೇಲೆ ನಾಡದ್ರೋಹಿ ಕೃತ್ಯ ಎಸಗುತ್ತಿರುವ ಮರಾಠಿಗರ ವಿರುದ್ಧ ಕಾನೂನು ರೀತಿ ಶಿಸ್ತು ಕ್ರಮ ಕೈಗೊಳ್ಳಬೇಕು. ಕೂಡಲೇ ರಾಜ್ಯದಲ್ಲಿರುವ ಎಂಇಎಸ್ ಮತ್ತು ಶಿವಸೇನೆ ಸಂಘಟನೆಗಳನ್ನು ನಿಷೇಧಿಸಬೇಕು. ಉತ್ತರ ಕರ್ನಾಟಕದ ಬಹುದಿನಗಳ ನೀರಾವರಿ ಯೋಜನೆಗಳಾದ ಮಹದಾಯಿ ಕಳಸಾ ಬಂಡೂರಿ ಯೋಜನೆ, ಮೇಕೆದಾಟು ಯೋಜನೆ ಸರ್ಕಾರ ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಬೇಕು. ಕನ್ನಡಿಗರಿಗೆ ಉದ್ಯೋಗಾವಕಾಶ ನೀಡುವಲ್ಲಿ ವಿಶೇಷ ಮೀಸಲಾತಿ ಕಾಯ್ದೆ ಜಾರಿಗೆ ತರಬೇಕು ಎಂದರು.
ರೈತ ಸಂಘದ ಅಧ್ಯಕ್ಷ ಮಹಾದೇವ ಮಡಿವಾಳ ಮಾತನಾಡಿ, ಯಾವುದೇ ಸರ್ಕಾರಗಳು ಬಂದರೂ ನಮ್ಮ ರೈತ ಕುಲಕ್ಕೆ ಅನ್ಯಾಯವಾಗುತ್ತಿದೆ. ನಾವು ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಕಬ್ಬಿನ ಕಾರ್ಖಾನೆಗಳು ತೂಕದಲ್ಲಿ ಮೋಸ, ಸೂಕ್ತ ದರ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಂತರ ಉಪತಹಸೀಲ್ದಾರ್ ಬಿ.ವೈ.ಹೊಸಕೇರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಈ ವೇಳೆ ಕರವೇ ಉಪಾಧ್ಯಕ್ಷ ಸಿದ್ದು ಹಂಡಗಿ, ಅನಿಲ ಒಡೆಯರ, ಸುಕುಮಾರ ಮಾದರ, ರಾಜು ವಾಘಮೊರೆ, ಅನಿಲ ಭಜಂತ್ರಿ, ಅಶೋಕ ಗೌರಗೊಂಡ, ಅನಿಲ ಪಾಟೀಲ, ಗಿರೀಶ ಭಾಮನೆ, ಶೋಭಾ ಮಾಳಿ, ಹನುಮವ್ವ ದಂಡಗಿ, ಸುರೇಖಾ ಜಾನಕಿ, ಸುನಿಲ ಸಂಕ, ಶಂಕರ ಮಗದುಮ ಸಿದ್ದು ಮಾಳಿ, ವಿಲಾಸ ಕುಲಕರ್ಣಿ, ಪರಶುರಾಮ ಕಾಂಬಳೆ, ಮುತ್ತುರಾಜ ಗೊಲ್ಲರ ಸೇರಿ ಇತರರು ಹೋರಾಟದಲ್ಲಿ ಭಾಗವಹಿಸಿದ್ದರು.