ಔಷಧ ಮಳಿಗೆ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ, ವ್ಯತ್ಯಯವಿಲ್ಲ

KannadaprabhaNewsNetwork |  
Published : May 21, 2026, 04:15 AM ISTUpdated : May 21, 2026, 05:16 AM IST
Medical

ಸಾರಾಂಶ

ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘಟನೆಯು (ಎಐಒಸಿಡಿ) ಇ-ಫಾರ್ಮಸಿ ಹಾಗೂ ಆನ್‌ಲೈನ್ ಮೂಲಕ ಔಷಧ ಮಾರಾಟ ವಿರೋಧಿಸಿ ಬುಧವಾರ ದೇಶಾದ್ಯಂತ ನೀಡಿದ್ದ ಬಂದ್ ಕರೆಗೆ ರಾಜಧಾನಿ ಬೆಂಗಳೂರು ಸೇರಿ ರಾಜ್ಯಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

 ಬೆಂಗಳೂರು :  ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘಟನೆಯು (ಎಐಒಸಿಡಿ) ಇ-ಫಾರ್ಮಸಿ ಹಾಗೂ ಆನ್‌ಲೈನ್ ಮೂಲಕ ಔಷಧ ಮಾರಾಟ ವಿರೋಧಿಸಿ ಬುಧವಾರ ದೇಶಾದ್ಯಂತ ನೀಡಿದ್ದ ಬಂದ್ ಕರೆಗೆ ರಾಜಧಾನಿ ಬೆಂಗಳೂರು ಸೇರಿ ರಾಜ್ಯಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನೈತಿಕ ಬೆಂಬಲ ಮಾತ್ರ

ಬಂದ್ ಕರೆಗೆ ಬೆಂಗಳೂರು ಫಾರ್ಮಾ ರಿಟೈಲರ್ಸ್ ಆ್ಯಂಡ್ ಡಿಸ್ಟ್ರಿಬ್ಯೂಟರ್ಸ್ ಫೋರಂ ಸಂಯೋಜಿತವಾಗಿರುವ ಔಷಧ ಮಳಿಗೆಗಳು ಮುಚ್ಚುವ ಮೂಲಕ ಬೆಂಬಲ ವ್ಯಕ್ತಪಡಿಸಿದವು. ಆದರೆ ಕರ್ನಾಟಕ ಫಾರ್ಮಾ ರಿಟೈಲರ್ಸ್ ಆ್ಯಂಡ್ ಡಿಸ್ಟ್ರಿಬ್ಯೂಟರ್ಸ್ ಆರ್ಗನೈಸೇಷನ್ (ಕೆಎಫ್‌ಆರ್‌ಡಿಒ) ಸಂಯೋಜಿತವಾಗಿರುವ ಮಳಿಗೆಗಳು ನೈತಿಕ ಬೆಂಬಲ ಮಾತ್ರ ವ್ಯಕ್ತಪಡಿಸಿದ್ದವು.

ಹೀಗಾಗಿ ಕೆಎಫ್‌ಆರ್‌ಡಿಒ ಸಂಯೋಜಿತ ಮಳಿಗೆಗಳ ಮಾಲೀಕರು ಕಪ್ಪು ಪಟ್ಟಿ ಧರಿಸಿ ಎಂದಿನಂತೆ ಕಾರ್ಯನಿರ್ವಹಿಸಿದರು. ಮತ್ತೊಂದೆಡೆ, ಬುಧವಾರ ಬೆಳಗ್ಗೆ ಔಷಧ ಮಳಿಗೆ ತೆರೆಯಲು ಮುಂದಾದ ಕೆಲ ಮಳಿಗೆಗಳನ್ನು ಕೆಲ ಹೋರಾಟಗಾರರು ಬಲವಂತವಾಗಿ ಮುಚ್ಚಿಸಿದ ಘಟನೆಯೂ ನಡೆಯಿತು.

ಬಹುತೇಕ ಔಷಧ ಮಳಿಗೆ ಓಪನ್:

ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘಟನೆ ದೇಶಾದ್ಯಂತ 12.40ಕ್ಕೂ ಅಧಿಕ ಔಷಧ ವ್ಯಾಪಾರಿಗಳನ್ನು ಪ್ರತಿನಿಧಿಸುತ್ತದೆ. ರಾಜ್ಯದಲ್ಲಿ 45 ಸಾವಿರ ಚಿಲ್ಲರೆ ಔಷಧ ವ್ಯಾಪಾರಿಗಳಿದ್ದಾರೆ. ಇವರಲ್ಲಿ ಕೆಲವರು ಮಾತ್ರವೇ ಬಂದ್‌ನಲ್ಲಿ ಭಾಗಿಯಾಗಿದ್ದವು. ಬಹುತೇಕ ಚಿಲ್ಲರೆ ಮಾರಾಟ ಮಳಿಗೆಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಇವಲ್ಲದೆ ಸರ್ಕಾರಿ ಹಾಗೂ ಆಸ್ಪತ್ರೆ ಆಸ್ಪತ್ರೆಗಳ ಆವರಣದಲ್ಲಿನ ಔಷಧ ಮಳಿಗೆಗಳು ಸಹ ಎಂದಿನಂತೆ ತೆರೆದಿದ್ದವು.

ಜತೆಗೆ ಜೆನರಿಕ್ ಔಷಧಿ ಮಳಿಗೆ ಸೇರಿ ಸರ್ಕಾರಿ ಔಷಧ ಮಳಿಗೆಗಳ ಸೇವೆಯಲ್ಲಿ ಅಡಚಣೆಯಾಗಿಲ್ಲ. ಹೀಗಾಗಿ ಔಷಧ ಮಾರಾಟದಲ್ಲಿ ಗಮನಾರ್ಹ ವ್ಯತ್ಯಯ ಉಂಟಾಗಲಿಲ್ಲ ಎನ್ನಲಾಗಿದೆ.

ಔಷಧ ಮಳಿಗೆಗಳ ಒಗ್ಗಟ್ಟಿನಲ್ಲಿ ಒಡಕು:

ರಾಷ್ಟ್ರಮಟ್ಟದ ಬಂದ್ ಕರೆಗೆ ಬೆಂಗಳೂರು ಫಾರ್ಮಾ ರಿಟೈಲರ್ಸ್ ಆ್ಯಂಡ್ ಡಿಸ್ಟ್ರಿಬ್ಯೂಟರ್ಸ್ ಫೋರಂ ಬೆಂಬಲ ವ್ಯಕ್ತಪಡಿಸಿದ್ದರೆ ಕರ್ನಾಟಕ ಫಾರ್ಮಾ ರಿಟೈಲರ್ಸ್ ಆ್ಯಂಡ್ ಡಿಸ್ಟ್ರಿಬ್ಯೂಟರ್ಸ್ ಆರ್ಗನೈಸೇಷನ್ (ಕೆಎಫ್‌ಆರ್‌ಡಿಒ) ನೈತಿಕ ಬೆಂಬಲ ಮಾತ್ರ ನೀಡಿತ್ತು. ಔಷಧ ಮಳಿಗೆಗಳ ಸಂಘಗಳಲ್ಲಿ ಮೂಡದ ಒಮ್ಮತದಿಂದಾಗಿ ಬಂದ್‌ಗೆ ನಿರೀಕ್ಷಿತ ಬೆಂಬಲ ವ್ಯಕ್ತವಾಗಿಲ್ಲ ಎಂದು ತಿಳಿದುಬಂದಿದೆ.

ಕಾಯ್ದೆಯ ಸ್ಪಷ್ಟ ಉಲ್ಲಂಘನೆ ಆರೋಪ:

ಕರ್ನಾಟಕ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ ಅಸೋಸಿಯೇಷನ್ ಮತ್ತು ಬೆಂಗಳೂರು ಫಾರ್ಮಾ ರಿಟೇಲರ್ಸ್ ಆ್ಯಂಡ್ ಡಿಸ್ಟ್ರಿಬ್ಯೂಟರ್ಸ್ ಫೋರಂನ ಅಧ್ಯಕ್ಷ ಆರ್.ರಘುನಾಥ್ ರೆಡ್ಡಿ ಮಾತನಾಡಿ, ಬುಧವಾರದ ಬಂದ್ ಯಶಸ್ವಿಯಾಗಿದೆ. ಸಂಘಗಳಿಗೆ ಸಂಯೋಜಿತವಾಗಿರುವ ಎಲ್ಲಾ 26,000 ಮಳಿಗೆಗಳಲ್ಲಿ ಬಹುತೇಕ ಮಳಿಗೆಗಳು ಮುಚ್ಚಿದ್ದವು. ಆನ್‌ಲೈನ್ ಔಷಧಾಲಯಗಳು ಔಷಧಗಳು ಮತ್ತು ಸೌಂದರ್ಯವರ್ಧಕಗಳ ಕಾಯ್ದೆಯನ್ನು ಸ್ಪಷ್ಟವಾಗಿ ಉಲ್ಲಂಘನೆಯಾಗಿದೆ. ಹೀಗಾಗಿ ಮುಷ್ಕರ ಅನಿವಾರ್ಯವಾಯಿತು ಎಂದಿದ್ದಾರೆ.

ನೈತಿಕ ಬೆಂಬಲ ಮಾತ್ರ ನೀಡಿದ್ದೆವು

ಇ-ಫಾರ್ಮಸಿ, ಆನ್‌ಲೈನ್‌ ಮೂಲಕ ಔಷಧ ಮಾರಾಟಕ್ಕೆ ನಮ್ಮ ವಿರೋಧವಿದೆ. ಆದರೆ, ಔಷಧ ಮಳಿಗೆ ಬಂದ್‌ಗೆ ನಾವು ಬೆಂಬಲಿಸಿಲ್ಲ. ಬದಲಿಗೆ ನೈತಿಕ ಬೆಂಬಲ ಮಾತ್ರ ನೀಡಿದ್ದೆವು. ಬಹುತೇಕ ಔಷಧ ಮಳಿಗೆಗಳು ತೆರೆದಿದ್ದವು.

-ಜಯರಾಮ್, ಕರ್ನಾಟಕ ಫಾರ್ಮಾ ರಿಟೈಲರ್ಸ್ ಆ್ಯಂಡ್ ಡಿಸ್ಟ್ರಿಬ್ಯೂಟರ್ಸ್ ಆರ್ಗನೈಸೇಷನ್ ಅಧ್ಯಕ್ಷ ಜಯರಾಮ್‌

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

2 ವರ್ಷದ ಮಗುಗೆ ಶಸ್ತ್ರ ಚಿಕಿತ್ಸೆ ಮಾಡಿ 480 ಗ್ರಾಂ ಕೂದಲು, ರಬ್ಬರ್‌ ತೆಗೆದರು
ಖರೀದಿ ನೆಪದಲ್ಲಿ 3 ಕೋಟಿ ಮೌಲ್ಯದ ಚಿನ್ನಾಭರಣ ಸುಲಿಗೆ