ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರು. ಆದಾಯ ತರುವ ತಾಲೂಕಿನ ದಬ್ಬಣಗದ್ದೆ ಮತ್ತು ಮುಂಡಳ್ಳಿ ಮರಳು ಕ್ವಾರಿಯಿಂದ ಪರ್ಮಿಟ್ ಇಲ್ಲದೇ ನೂರಾರು ಲೋಡು ಅಕ್ರಮ ಮರಳು ಸಾಗಣೆಯಾಗಿದ್ದು, ಇದಕ್ಕೆ ಬೆಂಬಲವಾಗಿ ನಿಂತ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಬೇಕು. ಮೇ 6 ರಂದು ಒಂದೇ ದಿನ ದಬ್ಬಣಗದ್ದೆ ಕ್ವಾರಿಯಿಂದ 200 ಲೋಡು ಮರಳು ಅಕ್ರಮವಾಗಿ ಸಾಗಿಸಲಾಗಿದೆ. ಈ ವಿಚಾರದಲ್ಲಿ ಜಿಲ್ಲಾಡಳಿತ ಸತ್ತು ಮಲಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿವಮೊಗ್ಗ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ದ ಕೆಂಡಾಮಂಡಲವಾದ ಆರಗ ಜ್ಞಾನೇಂದ್ರ, ಅಕ್ರಮ ಮರಳು ಸಾಗಾಣಿಕೆಗೆ ಬೆಂಬಲವಾಗಿ ನಿಂತಿರುವ ನಿಮ್ಮಂಥವರ ವಿರುದ್ದವೇ ಕ್ರಮ ಜರುಗಿಸಬೇಕಿದೆ. ಇಲಾಖೆಯನ್ನು ಸಮರ್ಥವಾಗಿ ನಿರ್ವಹಿಸಲಾಗದ ನಿಮ್ಮ ಸೇವೆಯ ಅಗತ್ಯವಿಲ್ಲ. ನೀವು ಇಲ್ಲಿಂದ ಹೊರಟು ಹೋಗೋದೇ ಸೂಕ್ತ ಎಂದು ಗದರಿದರು.ಮುಂಡಳ್ಳಿ ಕ್ವಾರಿಯಿಂದ ಸಾಗಿಸುತ್ತಿರುವ ಮರಳಿಗೆ ಜಿಎಸ್‍ಟಿ ಕೂಡ ಪಾವತಿಸಿಲ್ಲ. ಈ ಬಗ್ಗೆ ಗುತ್ತಿಗೆದಾರರ ಕಡೆಯಿಂದ ಸರಿಯಾದ ಮಾಹಿತಿಯೂ ಇಲ್ಲ. ಮರಳು ಲೂಟಿ ಹೊಡೆಯುವುದರಲ್ಲಿ ತಾಲೂಕಿನ ತಹಸೀಲ್ದಾರ್, ಜಿಲ್ಲೆಯ ಭೂ ಮತ್ತು ಗಣಿ ಇಲಾಖೆ ಅಧಿಕಾರಿಗಳು ಪೊಲೀಸರು ಶಾಮೀಲಾಗಿದ್ದು, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ರಾಜ್ಯ ಭೂ ಮತ್ತು ಗಣಿ ಇಲಾಖೆ ಹಿರಿಯ ನಿರ್ದೆಶಕರಿಗೆ ದೂರವಾಣಿಯ ಮೂಲಕ ಒತ್ತಾಯಿಸಿದರು.
ಈ ಬಗ್ಗೆ ಸಮಜಾಯಿಷಿ ಹೇಳಲು ಬಂದ ಗುತ್ತಿಗೆದಾರರ ಕಡೆಯವರಿಗೆ ನಿಯಮದಂತೆ ನಿರ್ವಹಣೆ ಮಾಡಲು ಅಸಾಧ್ಯವಾದಲ್ಲಿ ಲೀಸ್ ಸರಂಡರ್ ಮಾಡಿ ಎಂದರಲ್ಲದೇ ನಿಯಮಬಾಹಿರವಾಗಿ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ. ಇದರ ಹಿಂದೆ ಕೆಲ ರಾಜಕಾರಣಿಗಳ ಕುತಂತ್ರ ಇದ್ದು, ಅವರ ಮುಖವಾಡ ಕಳಚಬೇಕಿದೆ ಎಂದು ಹೇಳಿದರು.
ಶಿವಮೊಗ್ಗ ಉಪವಿಭಾಗಾಧಿಕಾರಿ ಸತ್ಯನಾರಾಯಣ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಪ್ರವೀಣ್, ಮಂಡಲ ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್, ಬೇಗುವಳ್ಳಿ ಸತೀಶ್, ಕವಿರಾಜ್ ಬೇಗುವಳ್ಳಿ, ಮಧುರಾಜ್ ಹೆಗ್ಡೆ ಇದ್ದರು.
ತೀರ್ಥಹಳ್ಳಿ ತಾಲೂಕಿನ ಮುಂಡಳ್ಳಿ ಮರಳು ಕ್ವಾರಿಯಿಂದ ನಿಯಮವನ್ನು ಉಲ್ಲಂಘಿಸಿ ಮರಳು ಸಾಗಿಸಲಾಗುತ್ತಿದೆ ಎಂಬ ಆರೋಪದ ಮೇಲೆ ಶಾಸಕ ಆರಗ ಜ್ಞಾನೇಂದ್ರ ಸೋಮವಾರ ದಿಡೀರ್ ದಾಳಿ ನಡೆಸಿ ನದಿ ದಂಡೆಯಲ್ಲಿ ಗಡಿ ಪ್ರದೇಶದ ಬಗ್ಗೆ ಪರಿಶೀಲನೆ ನಡೆಸಿದರು.