ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಬೈರತಿ ಬಸವರಾಜ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ ನ್ಯಾಯಮೂರ್ತಿ ಎಸ್.ಸುನೀಲ್ ದತ್ ಯಾದವ್ ಅವರ ಪೀಠ ಶುಕ್ರವಾರ ಆದೇಶಿಸಿದೆ. ಜೊತೆಗೆ, 2025ರ ಡಿ.26ರಂದು ಹೈಕೋರ್ಟ್‌ನ ರಜಾಕಾಲದ ಏಕ ಸದಸ್ಯ ಪೀಠ ಬಸವರಾಜ್ ಅವರಿಗೆ ಮಂಜೂರು ಮಾಡಿದ್ದ ಮಧ್ಯಂತರ ನಿರೀಕ್ಷಣಾ ಜಾಮೀನನ್ನೂ ಇದೇ ವೇಳೆ ತೆರವುಗೊಳಿಸಲಾಗಿದೆ.
ಇದರಿಂದ 2ನೇ ಬಾರಿಗೆ ನಿರೀಕ್ಷಣಾ ಜಾಮೀನು ಅರ್ಜಿ ಹೈಕೋರ್ಟ್‌ನಿಂದ ತಿರಸ್ಕಾರಗೊಂಡಿದ್ದು, ಸಿಐಡಿ ಪೊಲೀಸರಿಂದ ಬೈರತಿ ಬಸವರಾಜು ಅವರಿಗೆ ಬಂಧನ ಭೀತಿ ಎದುರಾಗಿದೆ.ಹೆಚ್ಚಿನ ತನಿಖೆ ಒಳಗಾಗಲು ಸಿದ್ಧ. ಇದರಿಂದ ನಿಗದಿತ ಅವಧಿಗೆ ಮಾತ್ರ ತಮ್ಮನ್ನು ತನಿಖಾಧಿಕಾರಿಗಳ ವಶಕ್ಕೆ ನೀಡಬಹುದು ಎಂಬ ಬಸವರಾಜ್ ಅವರ ಮನವಿಯನ್ನು ನ್ಯಾಯಪೀಠ ತಿರಸ್ಕರಿಸಿದೆ.
ತನಿಖಾ ದಾಖಲೆಗಳು, ಫೋಟೋ ಮತ್ತು ಸಿಡಿಆರ್‌ಗಳನ್ನು ಪರಿಶೀಲಿಸಿದಾಗ ಅರ್ಜಿದಾರರು ತನಿಖೆ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದು ನಿಚ್ಚಳವಾಗಿ ತಿಳಿದು ಬರುತ್ತದೆ. ಸಿಡಿಆರ್, ತನಿಖಾ ವರದಿ ಮತ್ತು ಇತರೆ ಆರೋಪಿಗಳೊಂದಿಗೆ ಅರ್ಜಿದಾರರು ಇರುವ ಪೋಟೋಗಳನ್ನು ಆರೋಪಿ ಎದುರಿಗೆ ಇಟ್ಟು ತನಿಖೆ ನಡೆಸಬೇಕಾದ ಅವಶ್ಯಕತೆ ಇದೆ. ತನಿಖಾ ದಾಖಲೆಗಳ ಕುರಿತು ಹೆಚ್ಚಿನ ಪರೀಕ್ಷೆಗೆ ಒಳಪಡಿಸಬೇಕಾದ ಮತ್ತು ಆ ಕುರಿತು ಅರ್ಜಿದಾರರು ವಿವರಣೆ ನೀಡಬೇಕಾದ ಅಗತ್ಯವಿದೆ. ವಿಚಾರಣೆ ಅಥವಾ ಹೇಗೆ ವಿಚಾರಣೆ ಮಾಡಬೇಕೆಂದು ಅರ್ಜಿದಾರರು ನಿರ್ದೇಶಿಸಲು ಸಾಧ್ಯವಿಲ್ಲ. ಹಾಗಾಗಿ, ಬೈರತಿ ಬಸರಾಜ್ ಅವರ ಕಸ್ಟೋಡಿಯಲ್ (ವಶಕ್ಕೆ ಪಡೆದು) ವಿಚಾರಣೆ ನಡೆಸಬೇಕು ಎಂಬ ತನಿಖಾಧಿಕಾರಿಗಳ ಮನವಿ ತಳ್ಳಿಹಾಕಲಾಗದು ಎಂದು ಪೀಠ ಹೇಳಿದೆ.
ಭೂ ವ್ಯಾಜ್ಯಕ್ಕೆ ಸಂಬಂಧಿಸಿ ಅರ್ಜಿದಾರರು ಮತ್ತು ಮೃತರ ನಡುವೆ ಈ ಹಿಂದೆಯೇ ದ್ವೇಷವಿತ್ತು. ಯಾವುದೇ ಅಹಿತಕರ ಘಟನೆ ಸಂಭವಿಸಿದಲ್ಲಿ ಅದಕ್ಕೆ ಅರ್ಜಿದಾರರು, ಪ್ರಕರಣದ ಮೊದಲನೇ ಆರೋಪಿ ಜಗದೀಶ್ ಜವಾಬ್ದಾರರಾಗುತ್ತಾರೆ ಎಂದು ಲಿಖಿತವಾಗಿ ಮೃತ ಶಿವು ಹಿಂದೆಯೇ ದೂರು ನೀಡಿದ್ದರು. ಇದರಿಂದ ಶಿವುಗೆ ಜೀವ ಭಯವಿತ್ತು ಎಂಬುದು ದೃಢಪಡುತ್ತದೆ. ಮೃತ ವ್ಯಕ್ತಿ ಹಾಗೂ ಆತನ ತಾಯಿ ಅರ್ಜಿದಾರರು ಬೈರತಿ ಅವರ ವಿಧಾನಸಭಾ ಕ್ಷೇತ್ರದಲ್ಲೇ ವಾಸ ಮಾಡುತ್ತಿರುವ ಕಾರಣ ನಿರೀಕ್ಷಣಾ ಜಾಮೀನು ನೀಡಿದರೆ, ತನಿಖೆಗೆ ಅಡ್ಡಿಪಡಿಸುವ ಸಾಧ್ಯತೆಗಳಿವೆ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ಜಮೀನು ವಿವಾದ ಸಂಬಂಧ ಬೆಂಗಳೂರಿನ ಹಲಸೂರು ಕೆರೆಯ ಸಮೀಪದ ಮನೆಯೊಂದರ ಎದುರು 2025ರ ಜುಲೈನಲ್ಲಿ ಬಿಕ್ಲು ಶಿವ ಕೊಲೆ ನಡೆದಿತ್ತು. ಸಿಐಡಿ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಬೈರತಿ ಬಸವರಾಜು ಐದನೇ ಆರೋಪಿ. 2025ರ ಆ.12ರಂದು ಸಿಐಡಿ ಪೊಲೀಸರು ಪ್ರಕರಣದಲ್ಲಿ ಕೋಕಾ ನಿಯಮಗಳನ್ನು ಹೇರಿದ್ದರು. ಈ ಕ್ರಮ ರದ್ದತಿಗೆ ಮತ್ತು ನಿರೀಕ್ಷಣಾ ಜಾಮೀನು ಮಂಜೂರಾತಿಗೆ ಕೋರಿ ಬಸವರಾಜು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.