ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಲ್ಲಿ ಶಾಸಕರ ಅನುದಾನದ ₹೧೭ ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಬಸ್ ತಂಗುದಾಣದ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು. ಹಾಸನ, ಚಿಕ್ಕಮಗಳೂರು, ಮಂಗಳೂರು ಮತ್ತು ಗ್ರಾಮಾಂತರ ಭಾಗಕ್ಕೆ ನಿತ್ಯ ತೆರಳುವ ಸಾವಿರಾರು ಪ್ರಯಾಣಿಕರು ಇಲ್ಲಿ ತಂಗುದಾಣವಿಲ್ಲದೆ ಮಳೆ, ಬಿಸಿಲಿನಲ್ಲಿ ನಿಲ್ಲಬೇಕಾಗಿದೆ. ಬೇಸಿಗೆ ಹಾಗೂ ಮಳೆಗಾಲದಲ್ಲಿ ಪ್ರಯಾಣಿಕರು ಹಗಲು ವೇಳೆ ಬಿಸಿಲಿನ ಬೇಗೆ ತಾಳಲಾರದೆ ಸಮೀಪದ ಮರಗಳ ಬಳಿ ನಿಲ್ಲುವಂತಾಗಿದೆ. ಮಳೆ ಬಂದರೂ ಇದೇ ಸಮೀಪದ ಪೊಲೀಸ್ ಚೌಕಿಯ ಬಳಿ ನಿಲ್ಲುವ ಸ್ಥಿತಿ ಪ್ರಯಾಣಿಕರದ್ದಾಗಿದೆ. ಈಗಾಗಲೇ ಬಿಸಿಲಿನ ಪ್ರಖರತೆ ಹೆಚ್ಚಾಗಿದ್ದು ಬಸ್‌ಗಾಗಿ ಇಲ್ಲಿ ಕಾದು ನಿಲ್ಲುವುದು ಅಸಾಧ್ಯ. ಹಾಗಾಗಿ ಪ್ರಯಾಣಿಕರು ನೆರಳಿನಲ್ಲಿ ಆಶ್ರಯ ಪಡೆಯಬೇಕಿದ್ದು, ಸಾರ್ವಜನಿಕರು ಹಲವು ಬಾರಿ ಮನವಿ ಮಾಡಿದ್ದರಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಸುಸಜ್ಜಿತವಾದ ಬಸ್ ತಂಗುದಾಣ ನಿರ್ಮಿಸಲಾಗುತ್ತದೆ ಎಂದು ತಿಳಿಸಿದರು.ಚನ್ನರಾಯಪಟ್ಟಣ ಬಸ್ ನಿಲ್ದಾಣ ಎಲ್ಲಾ ಜಿಲ್ಲೆಗಳಿಗೂ ಸಂಪರ್ಕ ಬಿಂದುವಾಗಿದ್ದು ಪ್ರತಿನಿತ್ಯ ೨,೦೦೦ಕ್ಕಿಂತಲೂ ಅಧಿಕ ಬಸ್ಸುಗಳು ನಿಲ್ದಾಣಕ್ಕೆ ಆಗಮನ ನಿರ್ಗಮನವಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ಸಿಸಿಟಿವಿ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಹೈಮಾಸ್ಟ್ ದೀಪ ಅಳವಡಿಸಲಾಗಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ಬೇಕಾಗಿರುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದ್ದು ಸಂಸ್ಥೆಯವರು ಸೂಕ್ತ ನಿರ್ವಹಣೆ ಮಾಡಬೇಕೆಂದು ಸೂಚಿಸಿದರು. ಇನ್ನೂ ತಾಲೂಕಿನ ದಿಡಗ ಬಸ್‌ನಿಲ್ದಾಣದ ಅಭಿವೃದ್ಧಿ ಕಾಮಗಾರಿಗೆ ೨೦ ಲಕ್ಷ ರು. ಅನುದಾನ ನೀಡಿದ್ದು, ಪಟ್ಟಣದ ಘಟಕದ ಅಭಿವೃದ್ಧಿಗೆ ೧ ಕೋಟಿ ರು. ಅನುದಾನ ನೀಡುವಂತೆ ಸಾರಿಗೆ ಸಚಿವರಿಗೆ ಮನವಿ ಮಾಡಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಭೂಸೇನೆ ನಿರ್ಮಿತಿ ಕೇಂದ್ರ ಹಾಸನದ ಸಹಾಯಕ ಅಭಿಯಂತರ ಎಚ್.ಇ. ಸಿದ್ದೇಗೌಡ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚನ್ನರಾಯಪಟ್ಟಣ ಘಟಕದ ಘಟಕ ವ್ಯವಸ್ಥಾಪಕ ಜ್ಞಾನೇಶ್, ಸಹಾಯಕ ಸಂಚಾರಿ ನಿರೀಕ್ಷಕ ಮಲ್ಲೇಶ್, ಸಂಚಾರಿ ನಿಯಂತ್ರಕ ಜಗದೀಶ್ ಸೇರಿದಂತೆ ಸಂಸ್ಥೆಯ ಸಿಬ್ಬಂದಿಗಳು ಹಾಗೂ ಪ್ರಯಾಣಿಕರು ಉಪಸ್ಥಿತರಿದ್ದರು.