ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಮಾಜಿಕ ಸೇವೆಗಳಲ್ಲಿ ಕೆರೆ ಹೂಳೆತ್ತುವ ಯೋಜನೆಯು ಅತ್ಯಂತ ಯಶಸ್ವಿ ಕಾರ್ಯಕ್ರಮವಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಅವರು ಹೇಳಿದರು.ತಾಲೂಕಿನ ಪುರ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ "ನಮ್ಮ ಊರು ನಮ್ಮ ಕೆರೆ " ಯೋಜನೆಯಡಿ ಹೂಳೆತ್ತಲಾಗಿದ್ದ ಕೆರೆಯನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡುವ ಕಾರ್ಯಕ್ರಮದಲ್ಲಿ ಮಾತನಾಡಿ, ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಈ ಒಂದು ಸಮಾಜಮುಖಿ ಕಾರ್ಯ ಕ್ರಮವು ಸಮಾಜಕ್ಕೆ ಮಾದರಿಯಾಗಿದೆ ಎಂದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ಅವರು ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹಮ್ಮಿಕೊಂಡಿರುವ ಸಾಮಾಜಿಕ ಕಳಕಳಿಯ ಕಾರ್ಯಗಳಲ್ಲಿ ಒಂದು ಗ್ರಾಮೀಣ ಮಟ್ಟದ ಊರ ಕೆರೆಯನ್ನು ಹೂಳೆತ್ತಿ ಅದಕ್ಕೆ ಪುನರ್ಜನ್ಮ ನೀಡಿ ಆ ಊರಿನ ಜಲಪೂರಣವನ್ನು ಹೆಚ್ಚಿಸಿ ಜನ ಜಾನುವಾರುಗಳಿಗೆ ಅನುಕೂಲವಾಗುವಂತೆ ಮಾಡುತ್ತಿರುವ ಈ ಕಾಯಕಕ್ಕೆ ಧರ್ಮಸ್ಥಳ ಶ್ರೀಗಳು ಪ್ರೋತ್ಸಾಹ ನೀಡುತ್ತಿದ್ದು ಅದರಿಂದಾಗಿ ಗ್ರಾಮಮಟ್ಟದ ಇಂತಹ ಕೆರೆಯು ಅಭಿವೃದ್ಧಿ ಕಾಣಲು ಸಾಧ್ಯ ಆಗಿದೆ ಎಂದರು. ನಂತರ ಕೆರೆಯ ನಾಮಫಲಕ ಅನಾವರಣಗೊಳಿಸಿ ಸ್ಥಳೀಯ ಗ್ರಾಮ ಪಂಚಾಯಿತಿಗೆ ಹಸ್ತಾಂತರ ಪತ್ರವನ್ನು ಹಸ್ತಾಂತರಿಸಲಾಯಿತು. ಧರ್ಮಸ್ಥಳ ಶ್ರೀಗಳ ೭೮ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.