ಮಂಗನ ಕಾಯಿಲೆ ಬಗ್ಗೆ ಶಾಸಕ ಭೀಮಣ್ಣ ನಾಯ್ಕ ನಿರ್ಲಕ್ಷ್ಯ, ಬಿಜೆಪಿಯಿಂದ ಪ್ರತಿಭಟನೆ ಎಚ್ಚರಿಕೆ

KannadaprabhaNewsNetwork | Published : Feb 6, 2024 1:33 AM

ಸಾರಾಂಶ

ಸಿದ್ದಾಪುರ ತಾಲೂಕಿನಲ್ಲಿ ಮಂಗಳ ಕಾಯಿಲೆಯಿಂದ ಜನರು ಬಳಲುತ್ತಿದ್ದರು ಶಾಸಕ ಭೀಮಣ್ಣ ನಾಯ್ಕ ಗಂಭೀರವಾಗಿ ಪರಿಗಣಿಸಿಲ್ಲ. ಇದನ್ನು ಖಂಡಿಸಿ ಬಿಜೆಪಿ ವತಿಯಿಂದ ತಾಲೂಕು ಆಸ್ಪತ್ರೆ ಎದುರು ಪ್ರತಿಭಟನೆ ನಡೆಯಲಿದೆ.

ಸಿದ್ದಾಪುರ:

ತಾಲೂಕಿನಲ್ಲಿ ಮಂಗಳ ಕಾಯಿಲೆಯಿಂದ ಜನರು ಬಳಲುತ್ತಿದ್ದರು ಶಾಸಕ ಭೀಮಣ್ಣ ನಾಯ್ಕ ಗಂಭೀರವಾಗಿ ಪರಿಗಣಿಸಿಲ್ಲ. ಇದನ್ನು ಖಂಡಿಸಿ ಬಿಜೆಪಿ ವತಿಯಿಂದ ತಾಲೂಕು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ತಾಲೂಕಾಧ್ಯಕ್ಷ ಮಾರುತಿ ನಾಯ್ಕ ಹೊಸೂರು ಹೇಳಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ತಾಲೂಕಿನಲ್ಲಿ ಮಂಗನ ಕಾಯಿಲೆಯು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಈಗಾಗಲೇ ೩೭ ಜನ ಕಾಯಿಲೆಯಿಂದ ಬಳಲುತ್ತಿದ್ದಾರೆ. ಮೂವರು ಸೋಂಕಿತರು ಬೇರೆ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು ಬದುಕಿನ ಹೋರಾಟದಲ್ಲಿದ್ದಾರೆ. ಈ ಕುರಿತಾಗಿ ಕಾಳಜಿ ವಹಿಸಬೇಕಾಗಿದ್ದ ಶಾಸಕ ಭೀಮಣ್ಣ ನಾಯ್ಕ ಸಮಸ್ಯೆಯ ಗಂಭೀರತೆಯ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.ಜಿಡ್ಡಿ, ಮಂಡಗಳಲೆ, ಹೆಗ್ಗೆಕೊಪ್ಪ, ನಿಪ್ಲಿ ಭಾಗಗಳಲ್ಲಿ ಮಂಗನ ಕಾಯಿಲೆಯು ವ್ಯಾಪಕವಾಗಿ ಹರಡುತ್ತಿದ್ದು, ಪಟ್ಟಣ ಭಾಗದಲ್ಲೂ ಇಬ್ಬರು ಸೋಂಕಿತರಿದ್ದಾರೆಂದು ಆರೋಗ್ಯ ಇಲಾಖೆ ಮಾಹಿತಿ ನೀಡುತ್ತಿದೆ. ಕೇವಲ ೪ ವರ್ಷದ ಮಗುವಿಗೂ ಕೂಡಾ ಈ ಸೋಂಕು ತಗಲಿದ್ದು ಭೀತಿಯ ವಾತಾವರಣ ಸೃಷ್ಟಿಗೊಳ್ಳುತ್ತಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರು ಕಾಡು ಪ್ರವೇಶಿಸುವಾಗ ಮುನ್ನೆಚ್ಚರಿಕೆ ಕೈಗೊಳ್ಳಿ ಎನ್ನುತ್ತಿದ್ದಾರೆ. ಆದರೆ ಮಂಗಗಳ ಓಡಾಟ ಕೇವಲ ಕಾಡಿಗೆ ಸೀಮಿತವಾಗಿಲ್ಲ. ಪಟ್ಟಣದಲ್ಲೂ, ಜನವಸತಿ ಇರುವಲ್ಲಿಯೂ ಇದೆ. ಇದೇ ರೀತಿ ನಿರ್ಲಕ್ಷ್ಯ ವಹಿಸಿದರೆ ಪರಿಸ್ಥಿತಿ ಕೈಮೀರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.ಈ ಹಿಂದೆ ಮಂಗನ ಕಾಯಿಲೆ ತಾಲೂಕಿನಲ್ಲಿ ಕಾಣಿಸಿಕೊಂಡಿದ್ದಾಗ ಮಾಜಿ ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ ತೀವ್ರ ಕಾಳಜಿ ವಹಿಸಿ ಸಂತ್ರಸ್ತ ಭಾಗದ ಜನರಿಗೆ ಲಸಿಕೆ ವ್ಯವಸ್ಥೆ, ಸಾರ್ವಜನಿಕರಿಗೆ ಮಾಹಿತಿ ಮತ್ತು ಜಾಗೃತಿ ನೀಡಿ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ವಹಿಸುತ್ತಿದ್ದರು. ಆಸ್ಪತ್ರೆಗಳಲ್ಲಿ ಸೋಂಕಿತರಾದವರ ಕುರಿತು ಹಿಮ್ಮಾಹಿತಿ ಪಡೆದು ಕಾಯಿಲೆಯ ಸಮಸ್ಯೆಯ ಗಂಭೀರತೆಯನ್ನು ಆರೋಗ್ಯ ಸಚಿವರು, ಸರ್ಕಾರದ ಗಮನಕ್ಕೆ ತಂದು ಮಣಿಪಾಲ ಆಸ್ಪತ್ರೆಯಲ್ಲಿ ಸೋಂಕಿತರಿಗೆ ವಿಶೇಷ ವಾರ್ಡ್, ಸಿದ್ದಾಪುರ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ವ್ಯವಸ್ಥೆಯುಳ್ಳ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿಸಿದ್ದರು. ಕಾಯಿಲೆಯಿಂದ ಮೃತರ ಕುಟುಂಬದ ಸದಸ್ಯರಿಗೆ ₹ ೨ ಲಕ್ಷ ಪರಿಹಾರ ಸಿಗುವಂತೆ ವ್ಯವಸ್ಥೆ ಮಾಡಿಸಿದ್ದರು. ಆದರ ಈಗಿನ ಆರೋಗ್ಯ ಸಚಿವರು, ಶಾಸಕರು ತಮ್ಮ ಜವಾಬ್ದಾರಿ ಮರೆತಿದ್ದಾರೆ ಎಂದು ದೂರಿದ್ದಾರೆ.

Share this article