ಶಿರಸಿ: ತಾಲೂಕಿನ ಶಿರಸಿ ಹಾಗೂ ಬನವಾಸಿ ಹೋಬಳಿಯಲ್ಲಿ ಕಂಡುಬರುತ್ತಿರುವ ರಿಂಗ್ ಸ್ಪಾಟ್ ವೈರಸ್ ಬಾಧಿತ ಅಡಕೆ ತೋಟಗಳಿಗೆ ಸೋಮವಾರ ಶಾಸಕ ಭೀಮಣ್ಣ ನಾಯ್ಕ ಅವರ ನೇತೃತ್ವದಲ್ಲಿ ಕಾಸರಗೋಡಿನ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದ್ದಾರೆ.ಲಂಡಕನಳ್ಳಿಯ ನಿರಂಜನ ಕಾಮತ್, ಮಳಲಗಾಂವನ ಶಾಸಕ ಭೀಮಣ್ಣ ನಾಯ್ಕ ಅವರ ತೋಟಗಳಿಗೆ ಭೇಟಿ ನೀಡಿ ಅಡಕೆ ಬೆಳೆಯಲ್ಲಿ ರಿಂಗ್ ಸ್ಪಾಟ್ ವೈರಸ್ ಬಾಧಿಸಿರುವ ಕ್ಷೇತ್ರಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ರೈತರಿಗೆ ಅಗತ್ಯ ಸಲಹೆ- ಸೂಚನೆಗಳನ್ನು ನೀಡಿದರು.ಕಾಸರಗೋಡಿನ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯ ವಿಜ್ಞಾನಿ ವಿನಾಯಕ ಹೆಗಡೆ ರೋಗ ಲಕ್ಷದ ಕುರಿತು ಮಾಹಿತಿ ನೀಡಿ, ಅಡಕೆ ರಿಂಗ್ ಸ್ಪಾಟ್ ರೋಗವು ವೈರಸ್‌ನಿಂದ ಉಂಟಾಗುತ್ತಿದ್ದು, ಇದನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗಳಿಂದ ದೃಢಪಡಿಸಿಕೊಳ್ಳಲಾಗಿದೆ. ಆದರೆ, ಈ ರೋಗವು ಯಾವುದರಿಂದ ಹರಡುವುದು ಎಂದು ಇಲ್ಲಿಯವರೆಗೆ ಪತ್ತೆಯಾಗಿಲ್ಲ. ಸಂಶೋಧನೆ ನಡೆಸಲಾಗುವುದು. ರೋಗದಿಂದ ಇಳುವರಿ ಕುಂಠಿತವಾಗಿರುವ ಬಗ್ಗೆ ವರದಿಯಾಗಿಲ್ಲ. ಆದ್ದರಿಂದ ರೈತರು ಆತಂಕಗೊಳ್ಳಬಾರದು. ರೋಗಬಾಧಿತ ತೋಟದ ಸಮೀಪ ಅಡಕೆ ಸಸಿಗಳನ್ನು ತಯಾರಿಸಬಾರದು. ಇದರಿಂದ ಸಸಿ ಹಂತದಲ್ಲಿಯೇ ಅಡಕೆ ರಿಂಗ್ ಸ್ಪಾಟ್ ರೋಗದ ಬಾಧೆಯನ್ನು ತಡೆಗಟ್ಟಬಹುದು. ರೋಗಪೀಡಿತ ತೋಟಗಳಲ್ಲಿ ಬಳಸಿದ ಉಪಕರಣಗಳನ್ನು ನೇರವಾಗಿ ರೋಗ ಮುಕ್ತ ತೋಟಗಳಲ್ಲಿ ಬಳಸಬಾರದು. ರೋಗದ ತೀವ್ರತೆ ಹೆಚ್ಚಾದಲ್ಲಿ ವಿಜ್ಞಾನಿಗಳು, ತೋಟಗಾರಿಕೆ ಇಲಾಖೆ ಶಿಫಾರಸು ಮಾಡಿದ ಅಂತರ್‌ವ್ಯಾಪಿ ಕೀಟನಾಶಕಗಳನ್ನು ರೋಗ ಬಾಧಿಸಿದ ಮರಗಳಿಗೆ ಮತ್ತು ಸುತ್ತ ಮುತ್ತ ಮರಗಳಿಗೆ ಸಿಂಪರಣೆ ಮಾಡಲು ತಿಳಿಸಿದರು.
ಈ ವೇಳೆ ಶಾಸಕ ಭೀಮಣ್ಣ ನಾಯ್ಕ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಸಹಕಾರಿ ಎಸ್.ಕೆ. ಭಾಗ್ವತ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ. ಬಿ.ಪಿ. ಸತೀಶ, ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ, ಸಹಾಯಕ ನಿರ್ದೇಶಕ ಗಣೇಶ ಹೆಗಡೆ, ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ಬಸನಗೌಡ ಪಾಟೀಲ, ಶ್ವೇತಾ ಕೊಣ್ಣೂರ ಸೇರಿದಂತೆ ಮತ್ತಿತರರು ಇದ್ದರು.