ಕನ್ನಡಪ್ರಭ ವಾರ್ತೆ ಆಲೂರು
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಿಮೆಂಟ್ ಮಂಜು, ಪೊಲೀಸರು ಸಿವಿಲ್ ಡ್ರೆಸ್‌ನಲ್ಲಿ ಬಂದು ಪುನೀತ್ ಕೆರೆಹಳ್ಳಿ ಅವರನ್ನು ಬಂಧಿಸಿರುವುದು ಪ್ರಶ್ನಾರ್ಹವಾಗಿದೆ. ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ದಾಳಿ ಹಾಗೂ ಹಲ್ಲೆಗಳು ನಡೆಯುತ್ತಿರುವ ಸಂದರ್ಭಗಳಲ್ಲಿ ಅದರ ವಿರುದ್ಧ ಧ್ವನಿ ಎತ್ತುವವರ ಮೇಲೆಯೇ ಇಂತಹ ಕ್ರಮ ಕೈಗೊಳ್ಳುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪುನೀತ್ ಅವರಿಗೆ ಜೀವ ಬೆದರಿಕೆ ಇರುವ ಕುರಿತು ಈ ಹಿಂದೆ ಪೊಲೀಸರಿಗೆ ದೂರು ನೀಡಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಬೆದರಿಕೆ ಹಾಕಿದವರ ವಿರುದ್ಧ ಕ್ರಮ ಜರುಗಿಸದೆ, ಏಕಾಏಕಿ ಪುನೀತ್ ಅವರನ್ನು ಬಂಧಿಸಿರುವುದು ನ್ಯಾಯಸಮ್ಮತವಲ್ಲ ಎಂದು ಅವರು ಹೇಳಿದರು.ಸರ್ಕಾರವು ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ಹಿಂದೂಪರ ಕಾರ್ಯಕರ್ತರನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಸತ್ಯಾಸತ್ಯತೆ ಪರಿಶೀಲಿಸದೆ ಬಂಧಿಸಿರುವುದು ಓಲೈಕೆ ರಾಜಕಾರಣದ ಭಾಗವಾಗಿದೆ ಎಂದು ಆರೋಪಿಸಿದರು. ಹಿಂದೂಪರ ಕಾರ್ಯಕರ್ತರನ್ನು ಪೊಲೀಸ್ ವ್ಯವಸ್ಥೆಯ ಮೂಲಕ ಹತ್ತಿಕ್ಕುವ ಪ್ರಯತ್ನವನ್ನು ಸರ್ಕಾರ ಕೈಬಿಡಬೇಕು. ಪುನೀತ್ ಕೆರೆಹಳ್ಳಿ ಹಾಗೂ ಅವರ ಕುಟುಂಬದವರು ಯಾವುದೇ ಕಾರಣಕ್ಕೂ ಎದೆಗುಂದುವ ಅಗತ್ಯವಿಲ್ಲ. ಬಿಜೆಪಿ ಪಕ್ಷ ಅವರೊಂದಿಗೆ ದೃಢವಾಗಿ ನಿಲ್ಲಲಿದ್ದು, ಸರ್ಕಾರದ ಇಂತಹ ನಡೆ ವಿರುದ್ಧ ಪ್ರಜಾಪ್ರಭುತ್ವದ ಚೌಕಟ್ಟಿನೊಳಗೆ ಹೋರಾಟ ನಡೆಸಲಾಗುವುದು ಎಂದು ಶಾಸಕ ಸಿಮೆಂಟ್ ಮಂಜು ಎಚ್ಚರಿಕೆ ನೀಡಿದರು.