ಕನ್ನಡಪ್ರಭ ವಾರ್ತೆ ಹಾಸನ
ಹಾಸನ ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ಬಿರುಗಾಳಿಯ ತೀವ್ರತೆಗೆ ಬೃಹತ್ ಗಾತ್ರದ ಮರವೊಂದು ತಾಂತಯ್ಯ ಅವರ ಮನೆಯ ಮೇಲೆ ಬಿದ್ದ ಪರಿಣಾಮ ಮನೆಯ ಮೇಲ್ಛಾವಣಿಗೆ ಹಾನಿಯಾಗಿದ್ದು, ಕುಟುಂಬ ಆತಂಕಕ್ಕೆ ಒಳಗಾಗಿದೆ. ಘಟನೆಯ ವೇಳೆ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದು, ಮನೆಯಲ್ಲಿದ್ದ ಕೆಲವು ವಸ್ತುಗಳು ಹಾನಿಗೊಳಗಾಗಿವೆ. ಏಕಾಏಕಿ ಸಂಭವಿಸಿದ ಘಟನೆದಿಂದ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ನಗರದಲ್ಲಿಯೂ ಬಿರುಗಾಳಿಯ ಅಬ್ಬರ ಜೋರಾಗಿದ್ದು, ಹಲವೆಡೆ ಅಂಗಡಿಗಳ ಶೀಟ್‌ಗಳು, ನಾಮಫಲಕಗಳು, ಬ್ಯಾನರ್‌ಗಳು ಹಾಗೂ ಇತರ ತಾತ್ಕಾಲಿಕ ನಿರ್ಮಾಣಗಳು ಗಾಳಿಗೆ ಹಾರಿ ಹೋಗಿವೆ. ಕೆಲವು ಕಡೆ ಮರದ ಕೊಂಬೆಗಳು ಮುರಿದು ರಸ್ತೆಗೆ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ನಿರಂತರ ಮಳೆಯಿಂದ ನಗರದ ಪ್ರಮುಖ ರಸ್ತೆಗಳಲ್ಲಿನ ಗುಂಡಿಗಳಲ್ಲಿ ಮಳೆ ನೀರು ತುಂಬಿ ನಿಂತಿತ್ತು. ನೀರು ತುಂಬಿದ ರಸ್ತೆಗಳ ಮೂಲಕ ವಾಹನಗಳು ಸಂಚರಿಸುವಾಗ ನೀರು ಚಿಮ್ಮಿ ಪಾದಚಾರಿಗಳು ತೊಂದರೆ ಅನುಭವಿಸಿದರು.
ಮಳೆ ನೀರಿನಿಂದ ರಸ್ತೆಗಳಲ್ಲಿ ಕೆಸರು ಆವರಿಸಿದ್ದರಿಂದ ಜನರು ಎಚ್ಚರಿಕೆಯಿಂದ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಎಡೆಬಿಡದೆ ಸುರಿದ ಮಳೆಯಿಂದ ರಸ್ತೆಬದಿ ವ್ಯಾಪಾರಿಗಳ ವ್ಯಾಪಾರಕ್ಕೂ ಭಾರೀ ಹೊಡೆತ ಬಿದ್ದಿದೆ. ಮಳೆ ಕಾರಣ ಗ್ರಾಹಕರ ಸಂಚಾರ ಕಡಿಮೆಯಾಗಿದ್ದರಿಂದ ದಿನಪೂರ್ತಿ ವ್ಯಾಪಾರ ಕುಂಠಿತಗೊಂಡಿದ್ದು, ಸಣ್ಣ ವ್ಯಾಪಾರಿಗಳು ನಷ್ಟ ಅನುಭವಿಸಿದ್ದಾರೆ. ಹವಾಮಾನದಲ್ಲಿ ಇನ್ನೂ ಅಸ್ಥಿರತೆ ಮುಂದುವರಿಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಇಲಾಖೆಗಳು ಮನವಿ ಮಾಡಿವೆ. ವಿಶೇಷವಾಗಿ ಮರಗಳ ಕೆಳಗೆ ವಾಹನ ನಿಲ್ಲಿಸದಂತೆ ಹಾಗೂ ಹಳೆಯ ಕಟ್ಟಡಗಳ ಸಮೀಪ ಅನಗತ್ಯವಾಗಿ ಓಡಾಡದಂತೆ ಸೂಚಿಸಲಾಗಿದೆ.