ಶಾಂತಿ ಕದಡದಂತೆ ಶಾಸಕ ಚನ್ನಬಸಪ್ಪ ವರ್ತಿಸಲಿ

KannadaprabhaNewsNetwork |  
Published : Nov 22, 2025, 01:45 AM IST
ಶಿವಮೊಗ್ಗದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಯುವ ಮುಖಂಡ ಪಾಲಿಕೆ ಮಾಜಿ ಸದಸ್ಯ ಎಚ್.ಸಿ. ಯೋಗೀಶ್ ಮಾತನಾಡಿದರು. | Kannada Prabha

ಸಾರಾಂಶ

ನಗರದಲ್ಲಿ ಯಾವುದೇ ರೀತಿಯ ಗಲಾಟೆಗಳು ನಡೆದರೂ ಅದಕ್ಕೆ ಧರ್ಮದ ಲೇಪನ ಹಚ್ಚಿ, ಅದನ್ನು ಕೋಮು ಬಣ್ಣಕ್ಕೆ ತಿರುಗಿಸುವ ಇಚ್ಛೆ ಬಿಜೆಪಿ ಶಾಸಕ ಎಸ್‌.ಎನ್‌.ಚನ್ನಬಸಪ್ಪ ಅವರಿಗೆ ಹೆಚ್ಚಿದೆ. ಇತ್ತೀಚೆಗೆ ನಗರದ ಮಾರ್ನಾಮಿಬೈಲ್‌ನಲ್ಲಿ ನಡೆದ ಗಲಾಟೆಯೇ ಇದಕ್ಕೆ ಸಾಕ್ಷಿ ಎಂದು ಕಾಂಗ್ರೆಸ್ ಯುವ ಮುಖಂಡ ಪಾಲಿಕೆ ಮಾಜಿ ಸದಸ್ಯ ಎಚ್.ಸಿ.ಯೋಗೀಶ್ ಕಿಡಿಕಾರಿದರು.

ಶಿವಮೊಗ್ಗ: ನಗರದಲ್ಲಿ ಯಾವುದೇ ರೀತಿಯ ಗಲಾಟೆಗಳು ನಡೆದರೂ ಅದಕ್ಕೆ ಧರ್ಮದ ಲೇಪನ ಹಚ್ಚಿ, ಅದನ್ನು ಕೋಮು ಬಣ್ಣಕ್ಕೆ ತಿರುಗಿಸುವ ಇಚ್ಛೆ ಬಿಜೆಪಿ ಶಾಸಕ ಎಸ್‌.ಎನ್‌.ಚನ್ನಬಸಪ್ಪ ಅವರಿಗೆ ಹೆಚ್ಚಿದೆ. ಇತ್ತೀಚೆಗೆ ನಗರದ ಮಾರ್ನಾಮಿಬೈಲ್‌ನಲ್ಲಿ ನಡೆದ ಗಲಾಟೆಯೇ ಇದಕ್ಕೆ ಸಾಕ್ಷಿ ಎಂದು ಕಾಂಗ್ರೆಸ್ ಯುವ ಮುಖಂಡ ಪಾಲಿಕೆ ಮಾಜಿ ಸದಸ್ಯ ಎಚ್.ಸಿ.ಯೋಗೀಶ್ ಕಿಡಿಕಾರಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಾಸಕ ಎಸ್‌.ಎನ್‌.ಚನ್ನಬಸಪ್ಪ ಅವರಿಗೆ ತಾಳ್ಮೆ, ಸಹನೆ ಕಡಿಮೆ ಇದೆ. ನಗರದಲ್ಲಿ ಯಾವುದೇ ರೀತಿಯ ಘಟನೆಯಾದರೂ ಯೋಚನೆ ಮಾಡದೇ ಅದನ್ನು ಕೋಮು ಬಣ್ಣಕ್ಕೆ ತಿರುಗಿಸಿಬಿಡುತ್ತಾರೆ. ಮುಂದೆಯಾದರೂ ಶಿವಮೊಗ್ಗ ನಗರದ ಶಾಂತಿಯನ್ನು ಕದಡದಂತೆ ಶಾಸಕರು ವರ್ತಿಸಬೇಕು ಎಂದು ಕುಟುಕಿದರು. ಮಾರ್ನಾಮಿ ಬೈಲ್‌ನಲ್ಲಿ 4 ದಿನದ ಹಿಂದೆ ಹರೀಶ್ ಎಂಬಾತನ ಮೇಲೆ ಹಲ್ಲೆ ನಡೆದಿತ್ತು. ಆದರೆ, ಈ ಹಲ್ಲೆಯನ್ನು ಒಂದು ಕೋಮಿನವರು ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬಿಡಲಾಯಿತು. ಶಾಸಕ ಚನ್ನಬಸಪ್ಪ ಅವರು ಈ ಘಟನೆ ಹೇಗೆ ನಡೆಯಿತು? ಯಾರು ಮಾಡಿದ್ದಾರೆ? ಎಂದು ಪೂರ್ವಪರ ವಿಚಾರಿಸಿದೇ ಪೂರ್ವಗ್ರಹ ಪೀಡಿತರಾಗಿ ಈ ಹಲ್ಲೆಯನ್ನು ಮುಸ್ಲಿಂ ಧರ್ಮದವರೇ ಮಾಡಿದ್ದಾರೆ ಎಂದು ಹರೀಶ್ ನನ್ನೇ ಬಲವಂತವಾಗಿ ಪೊಲೀಸ್ ಠಾಣೆಗೆ ಕರೆಸಿ ಹೇಳಿಸಿದರು. ಆದರೆ, ನಿಜ ಈಗ ತಿಳಿದಿದೆ. ಈ ಹಲ್ಲೆ ಮಾಡಿದವರಲ್ಲಿ ಒಂದೇ ಧರ್ಮದವರು ಇಲ್ಲ ಎಂದು ಈಗ ಈ ಘಟನೆ ಗೊತ್ತಾದ ತಕ್ಷಣ ಘಟನೆಯನ್ನೇ ಬೇರೆ ಕಡೆಗೆ ತಿರುಗಿಸಿ ಗಾಂಜಾವನ್ನೇ ಪ್ರಮುಖವಾಗಿ ಬಿಂಬಿಸುತ್ತಿದ್ದಾರೆ ಎಂದು ಆರೋಪಿಸಿದರು.

ಶಾಸಕರಾದವರು ಎಲ್ಲರನ್ನೂ ಪ್ರೀತಿಸಬೇಕು. ಎಲ್ಲಾ ಧರ್ಮದವರಿಗೂ ಅವರೇ ಶಾಸಕರು. ಶಿವಮೊಗ್ಗದಲ್ಲಿ ಕೋಮುಗಲಭೆಯಂತಹ ವಾತಾವರಣ ಬಿಂಬಿಸುವಂತಹ ಹೇಳಿಕೆಗಳನ್ನು ನೀಡಬಾರದು. ಶಿವಮೊಗ್ಗ ನಗರದಲ್ಲಿ ಗಣಪತಿ ಸೇರಿದಂತೆ ಎಲ್ಲಾ ಹಬ್ಬಗಳು ಶಾಂತಿಯುತವಾಗಿವೆ. ಒಂದು ಸುಂದರ ನಗರವಾಗಿ ಶಿವಮೊಗ್ಗ ಬೆಳೆಯುತ್ತಿದೆ. ಇಲ್ಲಿ ವಾಸ ಮಾಡಬೇಕೆಂದೇ ಹಲವು ಜಿಲ್ಲೆಯವರು ಶಿವಮೊಗ್ಗ ನಗರ ಆಯ್ಕೆ ಮಾಡಿಕೊಳ್ಳುತ್ತಾರೆ. ಇಂತಹವರಿಗೆ ಶಾಸಕರಾದವರು ಧೈರ್‍ಯ ಹೇಳಬೇಕೆ ಹೊರತೂ ಇಲ್ಲಿರುವ ಹಿಂದೂಗಳು ಊರು ಬಿಟ್ಟು ಹೋಗುತ್ತಾರೆ ಎಂದು ಹೇಳುತ್ತಾರೆ. ಯಾವ ಹಿಂದೂಗಳು ಶಿವಮೊಗ್ಗ ನಗರವನ್ನು ಬಿಟ್ಟು ಹೋಗಿದ್ದಾರೆ. ಯಾಕೆ ಈ ರೀತಿಯ ಸುಳ್ಳನ್ನು ಹೇಳುತ್ತಾರೆ? ಶಾಸಕರು ತಮ್ಮ ಜವಾಬ್ದಾರಿಯನ್ನು ಮರೆತಂತೆ ಕಾಣುತ್ತದೆ ಎಂದರು.

ಯಾವ ತುಷ್ಠೀಕರಣವೂ ಇಲ್ಲಿ ಇಲ್ಲ. ಎಲ್ಲರಿಗೂ ಒಂದೇ ಕಾನೂನು. ಧರ್ಮಕ್ಕಿಂತ ಕಾನೂನೇ ಮುಖ್ಯವಾಗಿರುತ್ತದೆ. ಶಾಂತಿಗಾಗಿ ಹೋರಾಟ ಮಾಡಬೇಕೆ ಹೊರತೂ ನಗರವನ್ನು ಕಲುಷಿತಗೊಳಿಸಲು ಅಲ್ಲ. ಇದೇ ನಗರದಲ್ಲಿ ಮೇಲ್ಸೇತುವೆಯಲ್ಲಿ ಖಾಸಗಿ ಬಸ್ ಡಿಕ್ಕಿಯಾಗಿ ಒಬ್ಬ ಯುವಕ ಅಪಘಾತದಲ್ಲಿ ಸಾವು ಕಾಣುತ್ತಾನೆ. ಈ ಯುವಕ ಬೇರೆ ಧರ್ಮಕ್ಕೆ ಸೇರಿದವನು ಎಂಬ ಒಂದೇ ಕಾರಣಕ್ಕೆ ಅವರ ಮನೆಗೆ ಹೋಗಿ ಸಾಂತ್ವನ ಹೇಳಿಲ್ಲ. ಗಾಯಗೊಂಡವರನ್ನು ವಿಚಾರಿಸಿಯೂ ಇಲ್ಲ. ಯಾಕೆ ಈ ಅಧರ್ಮ ಎಂದು ಪ್ರಶ್ನಿಸಿದರು.

ಅವರು ಆರೋಪಿಸಿದಂತೆ ಶಿವಮೊಗ್ಗದಲ್ಲಿ ಗಾಂಜಾ ಹಾವಳಿ ಇದೆ. ಗಾಂಜಾ ತಡೆಗಟ್ಟಲು ನಾವು ಕೂಡ ಒತ್ತಾಯ ಮಾಡುತ್ತೇವೆ. ಗಾಂಜಾ ಸಾಗಣೆ, ಸೇವನೆಗೆ ಯಾವ ಧರ್ಮವೂ ಸೇರಿಲ್ಲ. ಆರೋಪಿಗಳು ಯಾರೇ ಆಗಲಿ ಅವರಿಗೆ ತಕ್ಕ ಶಿಕ್ಷೆ ಆಗಲೇಬೇಕು. ಯಾವ ಸರ್ಕಾರಗಳು ಬಂದರೂ ಗಾಂಜಾ, ಓಸಿ ಮುಂತಾದ ಅಕ್ರಮ ದಂಧೆಗಳು ಇದ್ದೇ ಇರುತ್ತವೆ. ಇವುಗಳನ್ನು ನಾವಂತೂ ಸಹಕಾರ ನೀಡುವುದಿಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಂ ಪಾಷಾ, ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಎಸ್.ಟಿ.ಚಂದ್ರಶೇಖರ್, ಪ್ರಮುಖರಾದ ಎಚ್.ಪಾಲಾಕ್ಷಿ, ವಿಶ್ವನಾಥ್ ಕಾಶಿ, ಯಮುನಾ ರಂಗೇಗೌಡ, ನಾಗರಾಜ್ ಕಂಕಾರಿ, ಚರಣ್, ಮುನ್ನ, ಶರತ್, ಆಸೀಫ್, ಮಧು, ಪವನ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ