ಗಣೇಶ ವಿಸರ್ಜನೆ ವೇಳೆ ಡಿಜೆ ಜಪ್ತಿಗೆ ಶಾಸಕ ದಿನಕರ ಶೆಟ್ಟಿ ಆಕ್ರೋಶ

KannadaprabhaNewsNetwork |  
Published : Sep 17, 2024, 12:52 AM IST
ದಿನಕರ ಶೆಟ್ಟಿ | Kannada Prabha

ಸಾರಾಂಶ

ದಶಕಗಳಿಂದ ಇಲ್ಲಿ ಗಣೇಶೋತ್ಸವ ವಿಸರ್ಜನೆ ವೇಳೆ ಡಿಜೆ ಬಳಸುತ್ತಿದ್ದಾರೆ. ಆದರೆ ಶಶಿಹಿತ್ತಲದಲ್ಲಿ ಮಾತ್ರ ಪೊಲೀಸರು ಬಂದು ಡಿಜೆ ಬಂದ್ ಮಾಡಿ ಜಪ್ತಿ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು.

ಕುಮಟಾ: ಪಟ್ಟಣದ ಶಶಿಹಿತ್ತಲದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರ ಗಣಪತಿ ವಿಸರ್ಜನೆ ವೇಳೆ ಮಾತ್ರ ನಿಯಮ ಉಲ್ಲಂಘನೆಯ ಕಾರಣವೊಡ್ಡಿ ಪೊಲೀಸರು ಡಿಜೆ ಜಪ್ತಿ ಮಾಡಿರುವುದು ತಾರತಮ್ಯ ತೋರಿಸುತ್ತದೆ ಮತ್ತು ಖಂಡನೀಯ ಎಂದು ಶಾಸಕ ದಿನಕರ ಶೆಟ್ಟಿ ಹಾಗೂ ಜೆಡಿಎಸ್ ರಾಜ್ಯ ಕಾರ್ಯಕಾರಿ ಸದಸ್ಯ ಸೂರಜ ನಾಯ್ಕ ತಿಳಿಸಿದರು.ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ದಿನಕರ ಶೆಟ್ಟಿ, ದಶಕಗಳಿಂದ ಇಲ್ಲಿ ಗಣೇಶೋತ್ಸವ ವಿಸರ್ಜನೆ ವೇಳೆ ಡಿಜೆ ಬಳಸುತ್ತಿದ್ದಾರೆ. ಆದರೆ ಶಶಿಹಿತ್ತಲದಲ್ಲಿ ಮಾತ್ರ ಪೊಲೀಸರು ಬಂದು ಡಿಜೆ ಬಂದ್ ಮಾಡಿ ಜಪ್ತಿ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದರು. ಸೂರಜ ನಾಯ್ಕ ಮಾತನಾಡಿ, ಇಲ್ಲಿ ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿ ಡಿಜೆ ಜಪ್ತಿ ಮಾಡಿದ್ದಾರೆ. ಕೇವಲ ಶಶಿಹಿತ್ತಲದ ಸಾರ್ವಜನಿಕ ಗಣಪತಿ ವಿಸರ್ಜನೆ ವೇಳೆ ಮಾತ್ರ ಡಿಜೆ ಜಪ್ತಿ, ಪ್ರಕರಣ ದಾಖಲು ಯಾಕೆ? ಉಳಿದವರೆಲ್ಲಾ ಡಿಜೆ ಬಳಸುತ್ತಿದ್ದರೂ ಕ್ರಮ ಯಾಕಿಲ್ಲ ಎಂದು ಪ್ರಶ್ನಿಸಿದರು. ಮೀನುಗಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಮಂಜುನಾಥ ಹರಿಕಂತ್ರ ಮಾತನಾಡಿ, ಈ ಬಗ್ಗೆ ಪೊಲೀಸರು ಗಣೇಶೋತ್ಸವ ಸಮಿತಿ ಹಾಗೂ ಮೀನುಗಾರ ಮುಖಂಡರನ್ನು ಕರೆಸಿ ಚರ್ಚಿಸಿದ್ದರೆ ಆಗಲೇ ಸಮಸ್ಯೆ ಬಗೆಹರಿಸಬಹುದಿತ್ತು ಎಂದರು. ಬಿಜೆಪಿ ಮಂಡಲಾಧ್ಯಕ್ಷ ಜಿ.ಐ. ಹೆಗಡೆ, ಒಬ್ಬರಿಗೊಂದು ನ್ಯಾಯ ಇನ್ನೊಬ್ಬರಿಗೊಂದು ನ್ಯಾಯ ಸರಿಯಲ್ಲ ಎಂದರು. ಜೆಡಿಎಸ್ ತಾಲೂಕಾಧ್ಯಕ್ಷ ಸಿ.ಜಿ. ಹೆಗಡೆ ಹಾಗೂ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಯ್ಕ ಮಾತನಾಡಿದರು. ಶಶಿಹಿತ್ತಲ ಗ್ರಾಮದ ಯಜಮಾನ ಮಹಾಬಲೇಶ್ವರ ಹರಿಕಂತ್ರ, ನಾಗರಾಜ ಹರಿಕಂತ್ರ, ದೇವು ಹರಿಕಂತ್ರ, ಮಹೇಶ ನಾಯಕ, ಅಣ್ಣಪ್ಪ ನಾಯ್ಕ, ಸಂಪತ್ ಕುಮಾರ್, ಬಿ.ಎಲ್. ಸಜನ್, ಜಟ್ಟಪ್ಪ ಹರಿಕಂತ್ರ, ಈಶ್ವರ ಉಪ್ಪಾರ, ಚಿದಾನಂದ ಲಕ್ಕುಮನೆ, ವಿಕ್ರಾಂತ ಹರಿಕಂತ್ರ, ದತ್ತಾತ್ರಯ ನಾಯ್ಕ ಇತರರು ಇದ್ದರು.ಡಿಜೆ ಸೌಂಡ್ ಸಿಸ್ಟಮ್ ಆಪರೇಟರ್‌ಗಳ ಮೇಲೆ ಸ್ವಯಂಪ್ರೇರಿತ ದೂರು

ಶಿರಸಿ: ನಗರದಲ್ಲಿ ಗಣೇಶನ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಸಾರ್ವಜನಿಕರ ನೆಮ್ಮದಿಗೆ ಭಂಗ ಮತ್ತು ಶಬ್ದಮಾಲಿನ್ಯ ಉಂಟು ಮಾಡುತ್ತಿರುವ ೨ ಡಿಜೆ ಸೌಂಡ್ ಸಿಸ್ಟಮ್ ಆಪರೇಟರ್‌ಗಳ ಮೇಲೆ ೨ ಠಾಣೆಗಳಲ್ಲಿ ಪ್ರತ್ಯೇಕವಾಗಿ ಪೊಲೀಸರು ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಸೆ. ೧೫ರಂದು ಮಧ್ಯರಾತ್ರಿ ಗಣೇಶನ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಕಿಂಗ್ ಮೇಕರ್ಸ್‌ ಡಿಜೆ ಸೌಂಡ್ ಸಿಸ್ಟಮ್ ಆಪರೇಟರ್‌ಗಳು ಸಾರ್ವಜನಿಕರ ನೆಮ್ಮದಿಗೆ ಭಂಗ ತಂದ ಹಿನ್ನೆಲೆ ಸ್ವಯಂ ಪ್ರೇರಿತವಾಗಿ ನಗರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಮತ್ತೊಂದು ದೂರು:ಹೊಸ ಮಾರುಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆ. ೧೫ರಂದು ಮಧ್ಯರಾತ್ರಿ ೩ ಗಂಟೆಗೆ ಗಣಪತಿ ಮೂರ್ತಿಗಳ ವಿಸರ್ಜನೆ ವೇಳೆ ಕೃಷ್ಣ ೧೪+ ಹೆಸರಿನ ಡಿಜೆ ಸೌಂಡ್ ಸಿಸ್ಟಮ್ ಆಪರೇಟರ್‌ಗಳು ಸಾರ್ವಜನಿಕ ನೆಮ್ಮದಿಗೆ ಭಂಗ ಉಂಟುಮಾಡುವ ಧ್ವನಿವರ್ಧಕ ಬಳಸಿದ್ದಾರೆ. ಇದರಿಂದ ಕೃಷ್ಣ ೧೪+ ಡಿಜೆ ಸೌಂಡ್ ಸಿಸ್ಟಮ್ ಆಪರೇಟರ್‌ಗಳ ಮೇಲೆ ಹೊಸ ಮಾರುಕಟ್ಟೆ ಠಾಣೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ