ಹನುಮಸಾಗರ: ಸಮೀಪದ ಬಾದಿಮನಾಳ ಕ್ರಾಸ್‌ನಲ್ಲಿ ಕೆರೆಗಳಿಗೆ ನೀರು ತುಂಬಿಸುವಂತೆ ಆಗ್ರಹಿಸಿ ರೈತರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಬುಧವಾರ ಭೇಟಿ ನೀಡಿದ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕ ದೊಡ್ಡನಗೌಡ ಎಚ್. ಪಾಟೀಲ್ ಅವರು, ರೈತರ ಸಮಸ್ಯೆಗಳನ್ನು ಆಲಿಸಿ, ಶೀಘ್ರವಾಗಿ ಕೆರೆಗಳಿಗೆ ನೀರು ಹರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಶಾಸಕರ ಭರವಸೆಯ ಹಿನ್ನೆಲೆಯಲ್ಲಿ ರೈತರು ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆದರು.
ಆರಂಭದಲ್ಲಿ ಕೆಲವು ದಿನಗಳ ಕಾಲ ಅಲ್ಪ ಪ್ರಮಾಣದಲ್ಲಿ ನೀರು ಹರಿಸಲಾಗಿತ್ತಾದರೂ, ನಂತರ ನೀರು ಸ್ಥಗಿತಗೊಳಿಸಲಾಗಿತ್ತು. ಕೆರೆಗಳು ಭರ್ತಿಯಾಗುವ ನಿರೀಕ್ಷೆಯಲ್ಲಿದ್ದ ರೈತರಿಗೆ ಅದರಿಂದ ನಿರಾಸೆಯಾಗಿತ್ತು. ಈ ರೈತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಒಗ್ಗೂಡಿ ಮತ್ತೆ ಹೋರಾಟದ ಹಾದಿ ಹಿಡಿದಿದ್ದರು. ಮೂರು-ನಾಲ್ಕು ದಿನಗಳಿಂದ ಬಾದಿಮನಾಳ ಕ್ರಾಸ್‌ನಲ್ಲಿ ಪ್ರತಿಭಟನೆ ಮುಂದುವರಿದಿತ್ತು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರೈತರೊಂದಿಗೆ ಮಾತನಾಡಿದ ಶಾಸಕ ದೊಡ್ಡನಗೌಡ ಎಚ್. ಪಾಟೀಲ್, ಕೆರೆಗೆ ನೀರು ಹರಿಸುವ ಪೈಪ್‌ಲೈನ್‌ನ ವಾಲ್ವ್‌ಗಳು ವಾಲಿರುವುದರಿಂದ ನೀರು ಹರಿಸುವ ಕಾರ್ಯದಲ್ಲಿ ತಾಂತ್ರಿಕ ತೊಂದರೆ ಉಂಟಾಗಿದೆ. ಅವುಗಳನ್ನು ವೆಲ್ಡಿಂಗ್ ಮೂಲಕ ಸರಿಪಡಿಸಿ, ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು. ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕು. ಅಗತ್ಯವಿರುವ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿ, ಸ್ಥಳದಲ್ಲಿಯೇ ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಹಗಲು-ರಾತ್ರಿ ನೀರು ಹರಿಸಲು ಸೂಚನೆ: ಕೆರೆಗಳಿಗೆ ನೀರು ತುಂಬಿಸುವ ಕಾರ್ಯದಲ್ಲಿ ಹಲವು ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿವೆ. ವಿದ್ಯುತ್ ವ್ಯತ್ಯಯವಾದಾಗ ಮೋಟಾರ್‌ಗಳು ಸ್ಥಗಿತಗೊಳ್ಳುತ್ತವೆ. ಮತ್ತೆ ವಿದ್ಯುತ್ ಬಂದ ನಂತರ ಮೋಟಾರ್‌ಗಳನ್ನು ಆರಂಭಿಸಲು ವಿಳಂಬವಾಗುತ್ತಿದೆ. ಇದರಿಂದ ನಿರಂತರವಾಗಿ ನೀರು ಹರಿಸುವ ಕಾರ್ಯಕ್ಕೆ ಅಡಚಣೆಯಾಗುತ್ತಿದೆ ಎಂದು ಅಧಿಕಾರಿಗಳು ಗಮನಕ್ಕೆ ತಂದರು.
ಸಣ್ಣ ನೀರಾವರಿ ಇಲಾಖೆ ಎಇಇ ದೇವೇಂದ್ರಪ್ಪ ಇಟ್ಟಂಗಿ, ಪಿಎಸ್‌ಐ ಧನಂಜಯ ಹಿರೇಮಠ, ಮುಖಂಡರಾದ ಮಹಾಂತೇಶ ಗಣವರಿ, ಬಸವರಾಜ ಹಳ್ಳೂರ, ಮರಿಯಪ್ಪ ಗ್ವಾತಗಿ, ವೀರಣ್ಣ ಗಜೇಂದ್ರಗಡ, ನಜೀರಸಾಬ ಮೂಲಿಮನಿ, ಕೆ.ಎಸ್. ಹನುಮಂತಪ್ಪ, ಶರಣಪ್ಪ ಕುಂಬಾರ, ಸತ್ಯಪ್ಪ ರಾಜೂರು, ರವಿ ಪರಸಾಪುರ, ಅಶೋಕ ವಾಲಿಕಾರ, ಶರಣಪ್ಪ ಪರಸಾಪುರ, ನೀಲಪ್ಪ ಕಡಿಯವರ, ಯಮನೂರ ಮಡಿವಾಳರ, ಶ್ರೀಕಾಂತ ಅಂಗಡಿ ಇದ್ದರು.