ಹುಣಸೂರು ನಗರಸಭೆ ಅಧಿಕಾರಿಗಳನ್ನು ತೀವ್ರ ತರಾಟೆ ತೆಗೆದುಕೊಂಡ ಶಾಸಕ ಜಿ.ಡಿ. ಹರೀಶ್‌ ಗೌಡ

KannadaprabhaNewsNetwork |  
Published : Nov 06, 2025, 01:15 AM IST
52 | Kannada Prabha

ಸಾರಾಂಶ

ವಾರದ ಹಿಂದೆ ಆಯೋಜನೆಗೊಂಡಿದ್ದ ಕೌನ್ಸಿಲ್ ಬಾಡಿ ಸಭೆಯಲ್ಲೂ ಇದೇ ಮಾತನ್ನು ಹೇಳಿ ಇಡೀ ಸಭೆಯನ್ನು ತಪ್ಪುದಾರಿಗೆ ಎಳೆದಿದ್ದೀರಲ್ಲ ಸರಿನಾ?, ಕಾಫಿವರ್ಕ್ಸ್ ಇರುವ ಜಾಗದ ಸಮಗ್ರ ವರದಿ ನನಗೆ ಬೇಕು. ಸಂಪೂರ್ಣವಾಗಿ ಸರ್ವೇ ಕಾರ್ಯ ನಡೆಸಿ ವರದಿ ನೀಡಿ...!

ಕನ್ನಡಪ್ರಭ ವಾರ್ತೆ ಹುಣಸೂರು

ಪಟ್ಟಣದಲ್ಲಿ ಫುಡ್‌ಕೋರ್ಟ್ ಸ್ಥಾಪನೆಗೆ ಗುರುತಿಸಿರುವ ಜಾಗಕ್ಕೆ ಸಂಬಂಧಿಸಿದಂತೆ ನಗರಸಭೆ ಅಧಿಕಾರಿಗಳು ಸರ್ವೇ ಕಾರ್ಯ ನಡೆಸಲು ಹಿಂದೇಟು ಹಾಕುತ್ತಿರುವುದು ಸರಿಯಲ್ಲವೆಂದು ಶಾಸಕ ಜಿ.ಡಿ. ಹರೀಶ್‌ ಗೌಡ ನಗರಸಭೆ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ನಗರಸಭೆಯ ಡಾ.ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಬುಧವಾರ ಶಾಸಕ ಜಿ.ಡಿ. ಹರೀಶ್‌ ಗೌಡ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್‌ ರೆಡ್ಡಿ ಹಾಗೂ ಜಿಪಂ ಸಿಇಒ ಯುಕೇಶ್‌ ಕುಮಾರ್ ಸಮ್ಮುಖದಲ್ಲಿ ಆಯೋಜನೆಗೊಂಡಿದ್ದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ನಗರದ ಸೇತುವೆ ರಸ್ತೆಯಲ್ಲಿರುವ ಜಾಗ ನಗರಸಭೆ ಅಥವಾ ಕಾಫಿವರ್ಕ್ಸ್‌ ಗೆ ಸೇರಿದೆಯೇ ಎನ್ನುವುದನ್ನು ಖಚಿತಪಡಿಸಲು ಸರ್ವೇ ಕಾರ್ಯ ನಡೆಸಿ ಜಾಗ ಗುರುತಿಸಿರೆಂದು ಈ ಹಿಂದಿನ ಸಭೆಯಲಿ ತಿಳಿಸಿದ್ದೆ ಏನಾಯಿತು ಎಂದು ಪೌರಾಯುಕ್ತೆ ಕೆ. ಮಾನಸ ಅವರಿಗೆ ಪ್ರಶ್ನಿಸಿದಾಗ, ಜಾಗದ ಸರ್ವೇ ಕಾರ್ಯ ನಡೆಸಲು ತೆರಳಿದ ವೇಳೆ ಕಾಫಿವರ್ಕ್ಸ್‌ ನವರು ನ್ಯಾಯಾಲಯದ ಮೆಟ್ಟಿಲೇರಿದ್ದು, ತಡೆಯಾಜ್ಞೆ ಇದೆ ಎಂದು ತಿಳಿಸಿದ್ದಾರೆ ಎಂದರು. ತಡೆಯಾಜ್ಞೆಯ ಪ್ರತಿ ನಿಮ್ಮಲ್ಲಿದೆಯೇ ಎಂದು ಪ್ರಶ್ನಿಸಿದಾಗ ಮಧ್ಯೆ ಪ್ರವೇಶಿಸಿದ ಕಂದಾಯ ಅಧಿಕಾರಿ ಸಿದ್ದಪ್ಪ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ ಹೊರತು ತಡೆಯಾಜ್ಞೆ ಇಲ್ಲ ಎಂದು ತಿಳಿಸಿದಾಗ, ಇಡೀ ಸಭೆಯನ್ನು ತಪ್ಪುದಾರಿಗೆ ಎಳೆಯುತ್ತಿದ್ದೀರಾ ಎಂದು ಪೌರಾಯುಕ್ತರನ್ನು ತರಾಟೆಗೆ ತೆಗೆದುಕೊಂಡರು.

ವಾರದ ಹಿಂದೆ ಆಯೋಜನೆಗೊಂಡಿದ್ದ ಕೌನ್ಸಿಲ್ ಬಾಡಿ ಸಭೆಯಲ್ಲೂ ಇದೇ ಮಾತನ್ನು ಹೇಳಿ ಇಡೀ ಸಭೆಯನ್ನು ತಪ್ಪುದಾರಿಗೆ ಎಳೆದಿದ್ದೀರಲ್ಲ ಸರಿನಾ? ಕಾಫಿವರ್ಕ್ಸ್ ಇರುವ ಜಾಗದ ಸಮಗ್ರ ವರದಿ ನನಗೆ ಬೇಕು. ಸಂಪೂರ್ಣವಾಗಿ ಸರ್ವೇ ಕಾರ್ಯ ನಡೆಸಿ ವರದಿ ನೀಡಲು ಸೂಚಿಸಿದರು.

ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಮಧ್ಯೆ ಪ್ರವೇಶಿಸಿ, ನ್ಯಾಯಾಲಯಕ್ಕೆ ಹೋದರೆ ನಿಮಗೇನು ಸಮಸ್ಯೆ? ಸರ್ವೇ ಮಾಡಲು ಅಡ್ಡಿಯೇನು ಎಂದು ಪ್ರಶ್ನಿಸಿ, ಸರ್ವೇ ಇಲಾಖೆ ಎಡಿಎಲ್‌ಆರ್ ಮತ್ತು ತಹಸೀಲ್ದಾರ್‌ ಅವರಿಗೆ ಈ ಕೂಡಲೇ ಸರ್ವೇ ಕಾರ್ಯ ನಡೆಸಲು ಕ್ರಮವಹಿಸಿರೆಂದು ಸೂಚಿಸಿದರು.

ಒಂದು ಮರ ಕಡಿಯಲು ಎಷ್ಟು ಸಮಯ ಬೇಕು?:

ಹುಣಸೂರು ಪಟ್ಟಣ ವ್ಯಾಪ್ತಿಯ ಉದ್ಯಾನವನದಲ್ಲಿ ಬೆಳೆದಿರುವ ಬೃಹದಾಕಾರದ ಮರದ ಕೊಂಬೆಗಳನ್ನು ಕಡಿಯುವ ಮತ್ತು ಅತ್ತಿಗುಪ್ಪೆ ಸರ್ಕಾರಿ ಶಾಲೆಯ ಆವರಣದಲ್ಲಿರುವ ಮರವನ್ನು ತೆರವುಗೊಳಿಸುವ ಕುರಿತು 10 ತಿಂಗಳಿನಿಂದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ನಾನೆ ಸ್ವತಃ ಕೋರಿದರೂ ಕ್ರಮವಹಿಸಿಲ್ಲ. ಏಕೆ? ಒಂದು ಮರ ಕಡಿಯಲು ಎಷ್ಟು ಸಮಯ ಬೇಕು? ಅನಾಹುತ ಸಂಭವಿಸಿದ ನಂತರವಷ್ಟೇ ಮರ ಕಡಿಯುತ್ತೀರಾ? ಮರ ಕಡಿಯಲು ಅಡ್ಡಿಪಡಿಸುತ್ತಿರುವ ಯಾರು? ಎಸಿಎಫ್, ಡಿಸಿಎಫ್ ಯಾರೆಂದು ಹೇಳಿ ಎಂದು ಶಾಸಕ ಜಿ.ಡಿ. ಹರೀಶ್‌ ಗೌಡ ಆರ್‌ಎಫ್‌ಒ ನಂದಕುಮಾರ್‌ ಅವರನ್ನು ತರಾಟೆಗೆ ತೆಗೆದುಕೊಂಡರು. ಹಲವು ತಾಂತ್ರಿಕ ಕಾರಣಗಳಿಂದ ಸಾಧ್ಯವಾಗಿಲ್ಲ. ಶೀಘ್ರ ಕ್ರಮವಹಿಸಲಾಗುವುದು ಎಂದು ಸ್ಪಷ್ಟೀಕರಣ ನೀಡಿದಾಗ ಕಾಡಂಚಿನ ಗ್ರಾಮಗಳಲ್ಲು ರೈತರಿಗೆ ಅನಾನುಕೂಲವಾಗುತ್ತಿದೆ. ಪರಿಸರ ಸೂಕ್ಷ್ಮ ವಲಯ (ಇಎಸ್‌ಜೆಡ್) ವೆಂಬ ಕಾರಣವೊಡ್ಡಿ ರೈತರಿಗೆ ತೊಂದರೆ ನೀಡಲಾಗುತ್ತಿದೆ. ಎಲ್ಲದಕ್ಕೂ ಎನ್‌ಒಸಿ ಕೇಳುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಮಾತನಾಡಿ, ಸರ್ಕಾರ ಇದೀಗ ಹೊರಡಿಸಿರುವ ನೂತನ ಆದೇಶದಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಗಡಿಯಿಂದ ಒಂದು ಕಿ.ಮೀ.ವ್ಯಾಪ್ತಿಯಲ್ಲಿ ಮಾತ್ರ ಪರಿಸರ ಸೂಕ್ಷ್ಮವಲಯವೆಂದು ಘೋಷಿಸಿದ್ದು, ಇನ್ನು ಮುಂದೆ ಇದನ್ನು ಹೊರತುಪಡಿಸಿ ಯಾರೂ ಇಲಾಖೆ ಅನುಮತಿ ಪಡೆಯಬೇಕಿಲ್ಲ. ಗ್ರಾ.ಪಂ.ಅಧಿಕಾರಿಗಳಿಗೆ,. ಕಂದಾಯ ಸಿಬ್ಬಂದಿಗೆ ಈ ಕುರಿತು ಮಾಹಿತಿ ನೀಡಿರೆಂದು ಅಧಿಕಾರಿಗಳಿಗೆ ಸೂಚಿಸಿದರು.

ಚುನಾವಣೆ ಏಕೆ ನಡೆಸಿಲ್ಲ?:

ತಾಲೂಕಿನ 12 ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳ ಚುನಾವಣೆ ಅವಧಿ ಪೂರ್ಣಗೊಂಡು 8 ತಿಂಗಳಾದರೂ ನಡೆಸಿಲ್ಲ ಏಕೆ? ಆಡಳಿತಾಧಿಕಾರಿಗೆ 195 ದಿನಗಳ ಅವಧಿ ಮಾತ್ರ ಆಡಳಿತ ನಡೆಸಲು ಅವಕಾಶವಿದೆ. ಹೀಗಿದ್ದೂ ಇನ್ನೂ ಮುಂದುವರೆದಿದ್ದಾರಲ್ಲ, ಅವರಿಗೆ ಈ ಅಧಿಕಾರ ನೀಡಿದವರ್ಯಾಧರು? ಈ ಅವಧಿಯಲ್ಲಿ ಅಕ್ರಮಗಳು ನಡೆದಿದ್ದರೆ ಇದಕ್ಕೆ ಸಹಕಾರ ಇಲಾಖೆಯ ಅಧಿಕಾರಿಗಳೇ ಹೊಣೆಯಾಗುತ್ತಾರೆಯೇ ಹೊರತು ಎಂಡಿ ಅಲ್ಲ ಎಂಬುದು ನಿಮಗೆ ತಿಳಿದಿರಲಿ. ಇಷ್ಟಕ್ಕೂ ಜಿಲ್ಲಾ ಮಟ್ಟದಲ್ಲಿ ಆಡಳಿತಾಧಿಕಾರಿಯಾಗಿ ಕುಳಿತಿರುವವರು ಈ ಹಿಂದೆ ನಡೆದ ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವವರೇ ಎನ್ನುವುದು ನಿಮಗೆ ತಿಳಿದಿಲ್ಲವೇ? ಕೂಡಲೇ ಸಂಘಗಳ ಚುನಾವಣೆ ನಡೆಸಿರಿ. ರೈತರಿಗೆ ಒಂದು ನಯಾಪೈಸೆ ಸಾಲ ಇನ್ನೂ ಕೊಟ್ಟಿಲ್ಲ. ಇನ್ಯಾವಾಗ ನೀಡುತ್ತೀರಿ ಎಂದು ಸಭೆಯಲ್ಲಿದ್ದ ಸಹಕಾರ ಇಲಾಖೆ ಎಆರ್ ಅನಸೂಯ ಮತ್ತು ಅಧಿಕಾರಿ ರಾಜಣ್ಣರಿಗೆ ಶಾಸಕ ಚಾಟಿ ಬೀಸಿದರು.

ತಾಲೂಕಿನ ಹೆಮ್ಮಿಗೆ ಹಾಡಿಯಲ್ಲಿ ವಾಸಿಸುವ ಸೋಲಿಗ ಸಮುದಾಯದ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಿಲ್ಲವೆಂದು ತಿಳಿದು ಸೆಸ್ಕ್ ಎಎ ಸುನಿಲ್‌ ಅವರನ್ನ ಪ್ರಶ್ನಿಸಿದಾಗ ಈ ಬಗ್ಗೆ ಮಾಹಿತಿ ಪಡೆದು ಶೀಘ್ರ ಕ್ರಮವಹಿಸುವುದಾಗಿ ತಿಳಿಸಿದರು.

ತಾಲೂಕಿನ ಉಡುವೇಪುರ, ಕಿಕ್ಕೇರಿಕಟ್ಟೆ ಮುಂತಾದ ಗ್ರಾಮಗಳಲ್ಲಿ ರೈತರಿಗೆ ನೋಟೀಸ್ ನೀಡಲಾಗುತ್ತಿದೆ ಎಂದು ಶಾಸಕರು ಬೇಸರ ವ್ಯಕ್ತಪಡಿಸಿದಾಗ, ಕಂದಾಯ ಮತ್ತು ಅರಣ್ಯ ಇಲಾಖೆ ವಾರದೊಳಗೆ ಜಂಟಿ ಸರ್ವೇ ಕಾರ್ಯ ನಡೆಸಿ ಗೊಂದಲಪರಿಹರಿಸಲು ಜಿಲ್ಲಾಧಿಕಾರಿ ಸೂಚಿಸಿದರು.

ಸಭೆಯಲ್ಲಿ ಜಿಪಂ ಸಿಇಒ ಯುಕೇಶ್‌ ಕುಮಾರ್, ಡಿಎಚ್‌ಒ ಕುಮಾರಸ್ವಾಮಿ, ಪ್ರಭಾರ ಡಿಡಿಪಿಐ ಅನಂತರಾಜ್, ಉಪವಿಭಾಗಾಧಿಕಾರಿ ಎಚ್.ಬಿ. ವಿಜಯಕುಮಾರ್, ತಹಸೀಲ್ದಾರ್ ಜೆ. ಮಂಜುನಾಥ್, ತಾಪಂ ಆಡಳಿತಾಧಿಕಾರಿ ಸಿದ್ದಗಂಗಮ್ಮ, ಇಒ ಕೆ.ಹೊಂಗಯ್ಯ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ