ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಕಳೆದ ಶುಕ್ರವಾರ ಬೀಸಿದ ಬಿರುಗಾಳಿಗೆ ಹಾನಿಗೊಳಗಾದ ಬಾಳೆ ತೋಟಕ್ಕೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಫಸಲು ಕಳೆದು ಕೊಂಡ ರೈತರಿಗೆ ಸಾಂತ್ವಾನ ಹೇಳಿದರು.ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ಗಾಳಿಗೆ ನೆಲಕ್ಕುರುಳಿದ ರೈತರ ಬಾಳೆ ತೋಟಕ್ಕೆ ಭಾನುವಾರ ಭೇಟಿ ನೀಡಿ, ರೈತರಿಗೆ ಧೈರ್ಯ ತುಂಬಿದ ಬಳಿಕ ಕನ್ನಡಪ್ರಭದೊಂದಿಗೆ ಮಾತನಾಡಿ, ಕಟಾವಿಗೆ ಬಂದ ಬಾಳೆ ಗಿಡ ಮುರಿದು ಹೋಗಿದ್ದು ಭಾರಿ ಅನ್ಯಾಯ ಎಂದರು.
ಸರ್ಕಾರ ಬೆಳೆ ಹಾನಿಗೆ ಎಕರೆಗೆ ಈ ಹಿಂದೆ ಹತ್ತು ಸಾವಿರ ಪರಿಹಾರ ನೀಡಿದ್ದಾರೆ ಎಂಬ ಮಾಹಿತಿ ಇದೆ ಈಗ ಸರ್ಕಾರ ಪರಿಹಾರ ಹೆಚ್ಚು ಕೊಡುವಂತೆ ನಾನು ಕೂಡ ಒತ್ತಾಯ ಪಡಿಸುವುದಾಗಿ ಭರವಸೆ ನೀಡಿದರು. ಕಂದಾಯ ಇಲಾಖೆ ತಾಲೂಕಿನಲ್ಲಿ ಮಳೆ, ಬಿರುಗಾಳಿಗೆ ಹಾನಿಯಾದ ಪ್ರದೇಶಕ್ಕೆ ಕಂದಾಯ ನಿರೀಕ್ಷಕ,ಗ್ರಾಮ ಲೆಕ್ಕಿಗರು ಸ್ಥಳ ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ವರದಿ ಕೊಟ್ಟಿದ್ದಾರೆ ಎಂದರು.ನನ್ನ ಕ್ಷೇತ್ರದಲ್ಲಿ ಬಿರುಗಾಳಿಗೆ ೧೬೦೦ ಎಕರೆ ಪ್ರದೇಶದಲ್ಲಿ ಬೆಳೆ ನಾಶವಾಗಿದೆ.ಬಾಳೆ ತೋಟಗಾರಿಕೆ ಬೆಳೆಯಾಗಿದೆ.ಈ ಹಿಂದೆ ನೀಡಿದ್ದ ಪರಿಹಾರಕ್ಕಿಂತ ಹೆಚ್ಚು ಪರಿಹಾರ ಕೊಡಿಸಲು ನಾನು ಕೂಡ ಸರ್ಕಾರದ ಜೊತೆ ಮಾತನಾಡುವೆ ಎಂದರು.
ಬಾಳೆ ಬೆಳೆದ ರೈತನಿಗೆ ಬಿರುಗಾಳಿ ದೊಡ್ಡ ಪೆಟ್ಟು ನೀಡಿದೆ. ಕಟಾವಿಗೆ ಬಂದ ರೈತರಿಗೆ ಬಿರುಗಾಳಿ ಶಾಪವಾಗಿ ಪರಿಣಮಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.ಗುಂಡ್ಲುಪೇಟೆ ತಾಲೂಕಿನಲ್ಲಿ ಬಿರುಗಾಳಿಗೆ ಬಾಳೆ ಸಾವಿರಾರು ಎಕರೆ ಹಾನಿಯಾಗಿರುವ ಕಾರಣ ಸರ್ಕಾರ ವಿಶೇಷ ಪ್ರಕರಣ ಎಂದು ತಿಳಿದು ಹೆಚ್ಚು ಪರಿಹಾರಕ್ಕೆ ನಾನು ಒತ್ತಡ ಹಾಕುತ್ತೇನೆ.ಸರ್ಕಾರ ಪರಿಹಾರ ಇನ್ನೂ ನಿಗದಿ ಪಡಿಸಿಲ್ಲ.ಒಂದೆಡೆ ಬರ,ಮತ್ತೊಂದೆಡೆ ಪ್ರಕೃತಿ ವಿಕೋಪ ರೈತರಿಗೆ ಶಾಪವಾಗಿದೆ ಎಂದರು.ವಿವಿಧ ಹಳ್ಳಿಗೆ ಭೇಟಿತಾಲೂಕಿನ ಬೆಟ್ಟಹಳ್ಳಿ, ಕಂದೇಗಾಲ,ಕಂದೇಗಾಲ ಹೊಸೂರು,ಕೂತನೂರು,ಭೀಮನಬೀಡು,ವೀರನಪುರ,ಮಳವಳ್ಳಿ ಗ್ರಾಮದಲ್ಲಿ ಬಿರುಗಾಳಿಗೆ ಹಾನಿಯಾದ ರೈತರ ಬಾಳೆ ತೋಟಕ್ಕೆ ಭೇಟಿ ನೀಡಿ ರೈತರಿಗೆ ಅಭಯ ನೀಡಿದರು. ಶಾಸಕರೊಂದಿಗೆ ತಾಪಂ ಮಾಜಿ ಸದಸ್ಯ ಬೆಟ್ಟಹಳ್ಳಿ ಕೆಂಪರಾಜು,ಗ್ರಾಪಂ ಸದಸ್ಯರಾದ ಬೆಟ್ಟಹಳ್ಳಿ ದೀಪು,ಪುತ್ತನಪುರ ಸುರೇಶ್ ಸೇರಿದಂತೆ ಹಲವರಿದ್ದರು.೧೨೦೦ ಅಲ್ಲ ೧೬೦೦ ಎಕರೆ ಬಾಳೆ ಹಾನಿ
ಗುಂಡ್ಲುಪೇಟೆ: ತಾಲೂಕಿನಲ್ಲಿ ಬಿರುಗಾಳಿ ಮಳೆಗೆ ಹಾನಿಯಾದ ಬಾಳೆ ೧೨೦೦ ರಲ್ಲ ೧೬೦೦ ಎಕರೆ ಎಂದು ತಹಸೀಲ್ದಾರ್ ಮಂಜುನಾಥ್ ಹೇಳಿದರು. ಕನ್ನಡಪ್ರಭದೊಂದಿಗೆ ಮಾತನಾಡಿ, ಶನಿವಾರ ರಾತ್ರಿ ತನಕ ಕಂದಾಯ ನಿರೀಕ್ಷಕರು,ಗ್ರಾಮ ಲೆಕ್ಕಿಗರು ನೀಡಿದ ವರದಿಯನ್ನು ಸಮಗ್ರವಾಗಿ ಪಡೆದಾಗ ೧೬೦೦ ಎಕರೆಯಾಗಿದೆ ಎಂದರು. ತಾಲೂಕಿನಲ್ಲಿ ಬರ ಘೋಷಣೆಯಾಗಿರುವ ಹಿನ್ನಲೆ ಪರಿಹಾರ ನೀಡುವುದನ್ನು ಸರ್ಕಾರ ಕ್ಲೋಸ್ ಮಾಡಿದೆ.ಸರ್ಕಾರದ ಆದೇಶ ಬರುವ ತನಕ ಕಾಯಬೇಕು ಜೊತೆಗೆ ಬಿರುಗಾಳಿಗೆ ಹಾನಿಯಾದ ಬಾಳೆ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ ಎಂದರು.