ಕೆಳಸೇತುವೆಗಾಗಿ ಶಾಸಕ ಗಣಿಗ ರವಿ ಉಪವಾಸ ಸತ್ಯಾಗ್ರಹ

KannadaprabhaNewsNetwork | Published : Mar 8, 2024 1:52 AM

ಸಾರಾಂಶ

ರಾಮನಗರ: ಮಂಡ್ಯ ತಾಲೂಕಿನ ಹನಕೆರೆ-ಗೌಡಗೆರೆ ಗೇಟ್ ಬಳಿ ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಳ ಸೇತುವೆ (ಅಂಡರ್ ಪಾಸ್ )ನಿರ್ಮಾಣಕ್ಕೆ ಆಗ್ರಹಿಸಿ ಮಂಡ್ಯ ಕ್ಷೇತ್ರ ಶಾಸಕ ಗಣಿಗ ರವಿ ಕುಮಾರ್ ನೇತೃತ್ವದಲ್ಲಿ ಹನಕೆರೆ ಗ್ರಾಮಸ್ಥರು ರಾಮನಗರದ ಬಸವನಪುರದಲ್ಲಿರುವ ರಾಷ್ಟ್ರೀಯ ಹೆದ್ದಾರಿಯ ಯೋಜನಾ ನಿರ್ದೇಶಕರ ಕಚೇರಿ ಎದುರು ಗುರುವಾರ ಉಪವಾಸ ಸತ್ಯಾಗ್ರಹ ನಡೆಸಿದರು.

ರಾಮನಗರ: ಮಂಡ್ಯ ತಾಲೂಕಿನ ಹನಕೆರೆ-ಗೌಡಗೆರೆ ಗೇಟ್ ಬಳಿ ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಳ ಸೇತುವೆ (ಅಂಡರ್ ಪಾಸ್ )ನಿರ್ಮಾಣಕ್ಕೆ ಆಗ್ರಹಿಸಿ ಮಂಡ್ಯ ಕ್ಷೇತ್ರ ಶಾಸಕ ಗಣಿಗ ರವಿ ಕುಮಾರ್ ನೇತೃತ್ವದಲ್ಲಿ ಹನಕೆರೆ ಗ್ರಾಮಸ್ಥರು ರಾಮನಗರದ ಬಸವನಪುರದಲ್ಲಿರುವ ರಾಷ್ಟ್ರೀಯ ಹೆದ್ದಾರಿಯ ಯೋಜನಾ ನಿರ್ದೇಶಕರ ಕಚೇರಿ ಎದುರು ಗುರುವಾರ ಉಪವಾಸ ಸತ್ಯಾಗ್ರಹ ನಡೆಸಿದರು.

ಸಂಸದ ಡಿ.ಕೆ.ಸುರೇಶ್, ಶಾಸಕ ಇಕ್ಬಾಲ್ ಹುಸೇನ್, ಮಾಜಿ ಶಾಸಕ ಕೆ.ರಾಜು ಸೇರಿದಂತೆ ಅನೇಕರು ಹೋರಾಟಕ್ಕೆ ಬೆಂಬಲ ಸೂಚಿಸಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಮನವಿ ಆಲಿಸಿ ಅಂಡರ್ ಪಾಸ್ ನಿರ್ಮಾಣಕ್ಕೆ ಕ್ರಮ ವಹಿಸುವುದಾಗಿ ಭರವಸೆ ನೀಡಿದ ಬಳಿಕ ಶಾಸಕ ಗಣಿಗ ರವಿಕುಮಾರ್ ಹಾಗೂ ಗ್ರಾಮಸ್ಥರು ಉಪವಾಸ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಹಿಂಪಡೆದರು.

ಇದಕ್ಕೂ ಮುನ್ನ ಮಾತನಾಡಿದ ಗಣಿಗ ರವಿ, ನಮಗೆ ಯಾವ ಕಾರಣಕ್ಕೂ ಮೇಲ್ಸೇತುವೆ ಬೇಡ, ರೈತರು, ಮಹಿಳೆಯರು, ಜನಸಾಮಾನ್ಯರಿಗೆ ಅನುಕೂಲವಾಗಲು ಅಂಡ‌ರ್ ಪಾಸ್ ನಿರ್ಮಾಣ ಮಾಡಬೇಕು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಅಂಡರ್ ಪಾಸ್ ಗೆ ಅನುಮತಿ ನೀಡುವವರೆಗೂ ನಾವು ಇಲ್ಲೇ ಇರುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಅಂಡರ್ ಪಾಸ್‌ ನಿರ್ಮಾಣಕ್ಕೆ ಒತ್ತಾಯಿಸಿ ವಿಧಾನಸಭಾ ಚುನಾವಣೆಗೂ ಮುನ್ನ ಸಾವಿರಾರು ರೈತರು, ಮಹಿಳೆಯರು ಪ್ರತಿಭಟನೆ ನಡೆಸಿದ್ದರು. ಆಗ ಪ್ರಾಧಿಕಾರದ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿ ರೈತ ಮಹಿಳೆಯರ ಮೇಲೆ ಲಾಠಿ ಪ್ರಹಾರ ಮಾಡಿಸಿದ್ದರು. ಈಗ ಮೇಲ್ಸೇತುವೆಗಾಗಿ ಪರಿಶೋಧನೆ ಮಾಡುತ್ತಿದ್ದಾರೆ. ಇದರಿಂದ ಬೈಕ್‌ ಸವಾರರು, ಕಬ್ಬಿನ ಗಾಡಿ, ಟ್ರ್ಯಾಕ್ಟರ್ ಗಳಿಗೆ ತೊಂದರೆಯಾಗಲಿದೆ. ಎಲ್ಲ ಬಗೆಯ ಹೋರಾಟ ಮಾಡಿ ಕೊನೆಗೆ ಗಾಂಧೀಜಿ ಹಾದಿಯಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದೇವೆ ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ಹಿಂದೆ 8 ಕೋಟಿ ವೆಚ್ಚದಲ್ಲಿ ಅಂಡ‌ರ್ ಪಾಸ್ ನಿರ್ಮಿಸುವುದಾಗಿ ಹೇಳಿದ್ದರು. ಆದರೀಗ ಗುತ್ತಿಗೆದಾರರು ಸಿಗುತ್ತಿಲ್ಲ ಎಂದು ಕಾರಣ ಹೇಳುತ್ತಿದ್ದಾರೆ. 10 ಸಾವಿರ ಕೋಟಿ ರಸ್ತೆ ನಿರ್ಮಾಣಕ್ಕೆ ಗುತ್ತಿಗೆದಾರರು ಸಿಗುತ್ತಾರೆ, 8 ಕೋಟಿ ಕಾಮಗಾರಿಗೆ ಸಿಗುವುದಿಲ್ಲವೇ? ಇಂದಿನ ಉಪವಾಸ ಸತ್ಯಾಗ್ರಹದಲ್ಲಿ ನಾಲ್ಕೈದು ಮಂದಿ ಗುತ್ತಿಗೆದಾರರು ಭಾಗವಹಿಸಿದ್ದಾರೆ. ನೀವು ಅವರಿಗೆ ಟೆಂಡ‌ರ್ ಕೊಡಿ ಗುಣಮಟ್ಟದ ಕಾಮಗಾರಿಯನ್ನು ನಿಂತು ಮಾಡಿಸೋಣ ಎಂದು ಸವಾಲು ಹಾಕಿದರು.

ಹೆದ್ದಾರಿ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ:

ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಅವೈಜ್ಞಾನಿಕವಾಗಿ ರಸ್ತೆ ಮಾಡಿರುವುದರಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿದೆ. ಅಪಘಾತಗಳು ಸಂಭವಿಸಿ ಸಾವುನೋವುಗಳಾಗಿವೆ. ಈ ಬಗ್ಗೆ ಕೇಂದ್ರ ಸಚಿವರು ಸೇರಿದಂತೆ ಅನೇಕ‌ ಸಭೆಗಳನ್ನು ಮಾಡಿದ್ದೇವೆ. ಆದರೂ ಈ ಸಮಸ್ಯೆಗಳ ಬಗ್ಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಹನಕೆರೆ ಭಾಗದ ಜನರಿಗೆ ಒಳ್ಳೆಯದಾಗಲೆಂದು ಶಾಸಕ ಗಣಿಗ ರವಿಕುಮಾರ್ ಅಂಡರ್ ಪಾಸ್ ನಿರ್ಮಾಣಕ್ಕಾಗಿ ಮನವಿ ಮಾಡಿದ್ದರು. ಭರವಸೆ ಕೊಟ್ಟಿದ್ದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈಗ ವರಸೆ ಬದಲಾಯಿಸಿದ್ದಾರೆ. ಹೆದ್ದಾರಿಯಲ್ಲಿ ಎಕ್ಸಿಟ್ - ಎಂಟ್ರಿ‌ ಸೇರಿದಂತೆ ಹಲವು ಕೆಲಸಗಳಿಗೆ 600 ಕೋಟಿ ಹಣ ಮೀಸಲಿಟ್ಟಿದ್ದರೂ ಯಾವುದೇ ಕೆಲಸ ಕಾರ್ಯಗತವಾಗಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಉಪವಾಸ ಸತ್ಯಾಗ್ರಹದಲ್ಲಿ ಮನ್‌ಮುಲ್ ನಿರ್ದೇಶಕ ಉಮ್ಮಡಹಳ್ಳಿ ಶಿವಕುಮಾ‌ರ್, ಮೈಷುಗ‌ರ್ ಮಾಜಿ ಅಧ್ಯಕ್ಷ ಬಿ.ಸಿ. ಶಿವಾನಂದ, ಮುಖಂಡರಾದ ಎಚ್.ಎನ್.ಯೋಗೇಶ್ ಶಿವಲಿಂಗೇಗೌಡ, ಶೇಖ‌ರ್, ಜೆ.ಕೆ.ಲಕ್ಷ್ಮಿನಾರಾಯಣ್, ರಾಮನಗರ ಮುಖಂಡರಾದ ಎ.ಬಿ.ಚೇತನ್ ಕುಮಾರ್ ಇತರರಿದ್ದರು.ಬಾಕ್ಸ್‌..........

ಕ್ರೆಡಿಟ್ ಏಕೆ ? ನಮ್ಮ ತೆರಿಗೆ ಹಣ ಅಲ್ವಾ?

ಕರ್ನಾಟಕದಿಂದ 4 ಲಕ್ಷ ಕೋಟಿ ತೆರಿಗೆ ಕಟ್ಟುತ್ತೇವೆ. ಆದರೆ ಅವರು 40 ಸಾವಿರ ಕೋಟಿ ಕೊಡುತ್ತಾರೆ. ಕಳೆದ 10 ವರ್ಷಗಳಿಂದ 5 ಸಾವಿರ ಕಿ.ಮೀ. ರಸ್ತೆ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಉತ್ತರ ಪ್ರದೇಶಕ್ಕೆ 13 ಸಾವಿರ, ಮಹಾರಾಷ್ಟ್ರಕ್ಕೆ 26 ಸಾವಿರ ಕಿ.ಮೀ ಕೊಟ್ಟಿದ್ದಾರೆ. ನಮ್ಮ ತೆರಿಗೆ ಹಣ ನಮಗೆ ಕೊಡುತ್ತಿಲ್ಲ. ಕೊಡುವುದಾದರೆ 25 ಸಾವಿರ ಕಿ.ಮೀ ರಸ್ತೆ ನಿರ್ಮಾಣ ಮಾಡಿಕೊಡಬೇಕು.ಇದು ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ. ಉತ್ತರ ಭಾರತದವರಿಗೆ ಬೆಣ್ಣೆ, ದಕ್ಷಿಣ ಭಾರತದವರಿಗೆ ಸುಣ್ಣ. ಕೇಂದ್ರ ಸರ್ಕಾರ ನಮಗೆ ಏನು ಕೊಟ್ಟಿಲ್ಲ. ನಮ್ಮ ಜೀವ ಉಳಿಸೋಕೆ ಮೀನಮೇಷ ಎಣಿಸುತ್ತಿದ್ದಾರೆ ಎಂದು ಸಂಸದ ಸುರೇಶ್‌ ಆರೋಪಿಸಿದರು. ಬಾಕ್ಸ್‌.......

ಕೇಂದ್ರ ಸಚಿವ ನಿತಿನ್ ಗಡ್ಕರಿ ಜತೆ ಚರ್ಚಿಸುವೆ

ಬೆಂಗಳೂರು - ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಹೆದ್ದಾರಿ ಪ್ರಾಧಿಕಾರ ಅಧಿಕಾರಗಳ ಜೊತೆ ಸಭೆ ನಡೆಸಿ ಒಂದೊಂದೇ ಸಮಸ್ಯೆ ಬಗೆಹರಿಸುತ್ತಿದ್ದೇವೆ. ಹನಕೆರೆ - ಗೌಡಗೆರೆ ಬಳಿ ಅಂಡರ್ ಪಾಸ್ ನಿರ್ಮಾಣ ಸೇರಿದಂತೆ ಇತರೆ ಸಮಸ್ಯೆಗಳ ಪರಿಹಾರಕ್ಕಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚಿಡೆಸುತ್ತೇನೆ ಎಂದು ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯಿಸಿದರು. ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಮಂಡ್ಯ ಶಾಸಕ ಗಣಿಗ ರವಿಕುಮಾರ್ ಅವರನ್ನು ಭೇಟಿಯಾಗಿ ಮನವೊಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಸಹ ಕೆಲವೊಂದು ಸಮಸ್ಯೆಗಳನ್ನು ಪಟ್ಟಿ ಮಾಡಿ ಕೇಂದ್ರ ಸಚಿವ ಗಡ್ಕರಿ ಅವರಿಗೂ ಸಲ್ಲಿಸಿದ್ದಾರೆ. ಅದರಲ್ಲಿ ಕೆಲವೊಂದು ಬಗೆಹರಿದಿದ್ದು, ಇನ್ನೂ ಕೆಲವು ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ ಎಂದರು.ಬಾಕ್ಸ್‌..........

ಸಚಿವರ ಮೇಲಿನ ನಂಬಿಕೆಯಿಂದ ಸತ್ಯಾಗ್ರಹ ವಾಪಸ್

ಮಂಡ್ಯ ತಾಲೂಕಿನ ಹನಕೆರೆ - ಗೌಡಗೆರೆ ಗೇಟ್ ಬಳಿ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಅಂಡರ್ ಪಾಸ್ ನಿರ್ಮಿಸುವುದಾಗಿ ಸಚಿವ ಚಲುವರಾಯಸ್ವಾಮಿ ಭರವಸೆ ಕೊಟ್ಟಿದ್ದಾರೆ. ಅವರಿಗೂ ಒಂದು ಅವಕಾಶ ಕೊಡುತ್ತೇವೆ. ಕೆಲಸ ಆಗದಿದ್ದರೆ ಮತ್ತೆ ಉಪವಾಸ ಸತ್ಯಾಗ್ರಹ ಕೂರುತ್ತೇವೆ ಎಂದು ಮಂಡ್ಯ ಶಾಸಕ ಗಣಿಗ ರವಿಕುಮಾರ್ ಎಚ್ಚರಿಕೆ ನೀಡಿದರು. ಉಪವಾಸ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಹಿಂಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಸಚಿವ ಚಲುವರಾಯಸ್ವಾಮಿ ಮೇಲೆ ಸಂಪೂರ್ಣ ನಂಬಿಕೆ ಇದ್ದು ಉಪವಾಸ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ವಾಪಸ್ ಪಡೆದಿದ್ದೇವೆ ಎಂದರು. 7ಕೆಆರ್ ಎಂಎನ್ 3

ರಾಮನಗರದ ಬಸವನಪುರ ಗ್ರಾಮದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಯೋಜನಾ ಪ್ರಾಧಿಕಾರ ಕಚೇರಿ ಎದುರು ಶಾಸಕ ಗಣಿಕ ರವಿಕುಮಾರ್ ನೇತೃತ್ವದಲ್ಲಿ ನಡೆದ ಉಪವಾಸ ಸತ್ಯಾಗ್ರಹದಲ್ಲಿ ಸಂಸದ ಡಿ.ಕೆ.ಸುರೇಶ್ ಭಾಗಿಯಾಗಿರುವುದು.

Share this article