ಶಾಸಕ ಗವಿಯಪ್ಪ ವಿಜಯನಗರ ಕ್ಷೇತ್ರಕ್ಕೆ ಶಾಪ: ಇಮಾಮ್‌ ನಿಯಾಜಿ

KannadaprabhaNewsNetwork | Published : Nov 23, 2024 12:30 AM

ಸಾರಾಂಶ

ಕ್ಷೇತ್ರಕ್ಕೆ ಅಂದಾಜು ₹150 ಕೋಟಿ ಅನುದಾನ ಬಂದರೂ ಕಾಂಗ್ರೆಸ್‌ ಪಕ್ಷದವರೇ ಆದ ಶಾಸಕ ಗವಿಯಪ್ಪ ಸುಳ್ಳು ಹೇಳುತ್ತಿದ್ದಾರೆ.

ಹೊಸಪೇಟೆ: ವಿಜಯನಗರ ಕ್ಷೇತ್ರದ ಶಾಸಕ ಎಚ್‌.ಆರ್‌. ಗವಿಯಪ್ಪ ಕ್ಷೇತ್ರಕ್ಕೆ ಶಾಪವಾಗಿ ಪರಿಣಮಿಸಿದ್ದಾರೆ ಎಂದು ಹುಡಾ ಅಧ್ಯಕ್ಷ ಎಚ್.ಎನ್.ಎಫ್. ಮಹಮ್ಮದ್‌ ಇಮಾಮ್ ನಿಯಾಜಿ ಟೀಕಿಸಿದರು.

ನಗರದ ಹುಡಾ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರಕ್ಕೆ ಅಂದಾಜು ₹150 ಕೋಟಿ ಅನುದಾನ ಬಂದರೂ ಕಾಂಗ್ರೆಸ್‌ ಪಕ್ಷದವರೇ ಆದ ಶಾಸಕ ಗವಿಯಪ್ಪ ಸುಳ್ಳು ಹೇಳುತ್ತಿದ್ದಾರೆ. ಇವರ ಸ್ವ ಪ್ರತಿಷ್ಠೆಗಾಗಿ ವಿಜಯನಗರ ಕ್ಷೇತ್ರ ಬಡ ಆಗುತ್ತಿದೆ. ಒಂದು ರೀತಿಯಲ್ಲಿ ಗವಿಯಪ್ಪ ಹೊಸಪೇಟೆ ಕ್ಷೇತ್ರಕ್ಕೆ ಶಾಪ ಆಗಿ ಪರಿಣಮಿಸಿದ್ದಾರೆ. ಪಕ್ಷದ ಕಾರ್ಯಕರ್ತರು, ಮುಖಂಡರನ್ನು ಬಿಟ್ಟು ಬಿಜೆಪಿ, ಆರ್‌ಎಸ್ಎಸ್‌ ನವರ ಜೊತೆ ಸಂಪರ್ಕ ಹೊಂದಿರುವ ಇವರಿಗೆ ಮುಂದೆ ಜನ ಪಾಠ ಕಲಿಸಲಿದ್ದಾರೆ ಎಂದರು.

ನಂಜುಂಡಪ್ಪ ವರದಿ ಪ್ರಕಾರ ವಿಜಯನಗರ ಕ್ಷೇತ್ರಕ್ಕೆ ಕೆಕೆಆರ್‌ಡಿಬಿಯಿಂದ ಪ್ರತಿ ವರ್ಷ ಅನುದಾನ ಬಿಡುಗಡೆ ಆಗುತ್ತದೆ. 2023-24 ರಲ್ಲಿ ಮ್ಯಾಕ್ರೋ ಅಡಿ ₹11.07 ಕೋಟಿ, ಮುಖ್ಯಮಂತ್ರಿ ವಿವೇಚನೆಯಡಿ ₹5 ಕೋಟಿ, ಈ ಸಾಲಿನಲ್ಲಿ ಜಿಲ್ಲೆಗೆ ₹122 ಕೋಟಿ ಬಿಡುಗಡೆಯಾಗಿದೆ. ಇನ್ನು ಜಿಲ್ಲಾ ಉಸ್ತುವಾರಿ ಸಚಿವ 250 ಹಾಸಿಗೆಗಳ ಜಿಲ್ಲಾಸ್ಪತ್ರೆಗೆ ₹29 ಕೋಟಿ ಬಿಡುಗಡೆಗೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ. ಈ ಸಾಲಿನಲ್ಲಿ ಮ್ಯಾಕ್ರೋ ಅಡಿ ₹8 ಕೋಟಿ, ಮೈಕ್ರೋ ಅಡಿ ₹10 ಕೋಟಿ, ಪಂಚಾಯತ್ ರಾಜ್ ಇಲಾಖೆಯಿಂದ 2023-24ರಲ್ಲಿ ₹15 ಕೋಟಿ, ಈ ಸಾಲಿನಲ್ಲಿ ಐದು ಕೋಟಿ ರು., ಲೋಕೋಪಯೋಗಿ ಇಲಾಖೆಯಿಂದ ₹15 ಕೋಟಿ, ಎಸ್‌ಎಚ್‌ಡಿಪಿ ಅಡಿ ಈ ಸಾಲಿನಲ್ಲಿ ₹20 ಕೋಟಿ ಅನುದಾನ ನೀಡಲಾಗಿದೆ ಎಂದರು.

ಜಿಲ್ಲಾ ರಸ್ತೆ ಅಭಿವೃದ್ಧಿಗೆ ಎಂಟು ಕೋಟಿ ರು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ₹5 ಕೋಟಿ ರು. ಅನುದಾನ ರಾಜ್ಯ ಸರ್ಕಾರ ನೀಡಿದೆ. ಇನ್ನು ₹15 ಕೋಟಿ ಅನುದಾನದ ಭರವಸೆ ನೀಡಲಾಗಿದೆ. ಆದರೂ ಕ್ರಿಯಾ ಯೋಜನೆ ರೂಪಿಸಿಲ್ಲ. ನಗರಾಭಿವೃದ್ಧಿ ಇಲಾಖೆಯಿಂದಲೂ ₹15 ಕೋಟಿ ಅನುದಾನಕ್ಕೂ ಕ್ರಿಯಾ ಯೋಜನೆ ರೂಪಿಸಿಲ್ಲ. ಈ ವರೆಗೆ ಕ್ರಿಯಾ ಯೋಜನೆ ಮಾಡಿಲ್ಲ. ಕಳೆದ ಎರಡು ಸಾಲಿನಲ್ಲಿ ವಿಜಯನಗರ ಕ್ಷೇತ್ರಕ್ಕೆ ಅಂದಾಜು ₹150 ಕೋಟಿ ಅನುದಾನ ಬಂದಿದೆ ಎಂದರು.

ವಿಜಯನಗರ ಕ್ಷೇತ್ರದಲ್ಲಿ ಅಂದಾಜು ₹100 ಕೋಟಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿಲ್ಲ. ಶಿಷ್ಟಾಚಾರ ಪಾಲಿಸಿದೇ ಶಾಸಕರು ಹಲವು ವ್ಯಕ್ತಿಗಳ ಹೆಸರು ನೀಡಿ ಅವರ ನೇತೃತ್ವದಲ್ಲಿ ಪೂಜೆ ಮಾಡಲು ಹೇಳಿದ್ದಾರೆ. ಆದರೆ ಆ ವ್ಯಕ್ತಿಗಳು ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಕಿರುಕುಳ ನೀಡುವ ಮೂಲಕ ಕೆಲಸ ಆರಂಭ ಆಗದಂತೆ ಆಗಿದೆ ಎಂದು ದೂರಿದರು.

ತುಂಗಭದ್ರಾ ಜಲಾಶಯಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಬಂದರೂ ವೇದಿಕೆ ಹಂಚಿಕೊಳ್ಳಲಿಲ್ಲ. ಉಸ್ತುವಾರಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಸೇರಿದಂತೆ ಯಾವುದೇ ಸಚಿವರ ಜತೆ ಉತ್ತಮ ಬಾಂಧವ್ಯ ಹೊಂದಿಲ್ಲ ಎಂದರು.

Share this article