3000 ಸಸಿ ನೆಟ್ಟು ಶಾಸಕ ಜಿ.ಎಸ್. ಪಾಟೀಲ ಜನ್ಮದಿನ ಆಚರಣೆ

KannadaprabhaNewsNetwork | Published : Apr 11, 2025 12:34 AM

ಸಾರಾಂಶ

ಸದಾ ಪರಿಸರ ರಕ್ಷಣೆಗಾಗಿ ಮಿಡಿಯುವ ಹಿರಿಯಜೀವ ಶಾಸಕ ಜಿ.ಎಸ್. ಪಾಟೀಲರ ಆಶಯದಂತೆ ರೋಣ ಮತಕ್ಷೇತ್ರವನ್ನು ಹಸಿರೀಕರಣ ಮಾಡುವಲ್ಲಿ ಯುವ ಕಾಂಗ್ರೆಸ್ ಸಮಿತಿ ಪಣ ತೊಟ್ಟು, ಶಾಸಕರ 78ನೇ ಜನ್ಮ ದಿನವನ್ನು ಗುರುವಾರ 3000ಕ್ಕೂ ಹೆಚ್ಚು ಸಸಿ ನೆಡುವ ಮೂಲಕ ವಿಶಿಷ್ಟವಾಗಿ ಆಚರಿಸಿದರು.

ರೋಣ: ಸದಾ ಪರಿಸರ ರಕ್ಷಣೆಗಾಗಿ ಮಿಡಿಯುವ ಹಿರಿಯಜೀವ ಶಾಸಕ ಜಿ.ಎಸ್. ಪಾಟೀಲರ ಆಶಯದಂತೆ ರೋಣ ಮತಕ್ಷೇತ್ರವನ್ನು ಹಸಿರೀಕರಣ ಮಾಡುವಲ್ಲಿ ಯುವ ಕಾಂಗ್ರೆಸ್ ಸಮಿತಿ ಪಣ ತೊಟ್ಟು, ಶಾಸಕರ 78ನೇ ಜನ್ಮ ದಿನವನ್ನು ಗುರುವಾರ 3000ಕ್ಕೂ ಹೆಚ್ಚು ಸಸಿ ನೆಡುವ ಮೂಲಕ ವಿಶಿಷ್ಟವಾಗಿ ಆಚರಿಸಿದರು.

ಡಂಬಳ, ನರೇಗಲ್ಲ, ಗಜೇಂದ್ರಗಡ, ರೋಣ ಸೇರಿದಂತೆ ಕ್ಷೇತ್ರ ವ್ಯಾಪ್ತಿಯ ಪ್ರತಿಯೊಂದು ಸರ್ಕಾರಿ ಕಚೇರಿ, ಗ್ರಾಪಂ ಆವರಣ, ಶಾಲಾ, ಕಾಲೇಜ್ ಆವರಣಗಳಲ್ಲಿ ಕನಿಷ್ಠ 20 ಸಸಿ ನೆಡಲಾಗಿದ್ದು, ಒಂದೇ ದಿನದಲ್ಲಿ ಒಟ್ಟು 3000 ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಯುವ ಕಾಂಗ್ರೆಸ್ ಕ್ಷೇತ್ರದಲ್ಲಿ ದಾಖಲೆ ಮಾಡಿದೆ.

ನೆಡಲಾದ ಸಸಿಗಳು ಬೆಳೆದು ಮರವಾಗುವವರೆಗೂ ಅವುಗಳ ಪಾಲನೆ, ಪೋಷಣೆ ಮಾಡುವಲ್ಲಿ ಯುವ ಸಮಿತಿ ಸದಸ್ಯರು ಅಲ್ಲಿನ ಸಸಿಗಳನ್ನು ದತ್ತು ತಗೆದುಕೊಂಡಿದ್ದು ವಿಶೇಷವಾಗಿದೆ. ಸ್ವಪ್ರೇರಣೆಯಿಂದ ಯುವ ಕಾಂಗ್ರೆಸ್ ಸದಸ್ಯರು ಕ್ಷೇತ್ರಾದ್ಯಂತ ಸಸಿ ನೆಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.

ಹಿರೇಹಾಳ, ಕೊತಬಾಳ, ಮುಗಳಿ, ಸವಡಿ, ಹಿರೇಮಣ್ಣೂರ, ಅರಹುಣಸಿ, ಬಾಸಲಾಪೂರ, ಡಂಬಳ, ಕೋಟುಮಚಗಿ, ನರೇಗಲ್ಲ, ಸೂಡಿ, ಇಟಗಿ, ಹೊಸಳ್ಳಿ, ಜಿಗಳೂರ, ತಳ್ಳಿಹಾಳ, ಸರ್ಜಾಪೂರ, ಶಾಂತಗೇರಿ, ಬೊಮ್ಮಸಾಗರ, ರಾಜೂರ, ಚಿಲಜೇರಿ, ಕುಂಟೋಜಿ, ಲಕ್ಕಲಕಟ್ಟಿ, ಕಲ್ಲಿಗನೂರ, ನಾಗೇಂದ್ರಗಡ, ತೋಟಗಂಟಿ, ಹಾಲಕೆರೆ, ಜಕ್ಕಲಿ, ಮಾರನಬಸರಿ, ಬೇವಿನಕಟ್ಟಿ, ದಿಂಡೂರ, ನೈನಾಪುರ, ಮಾಡಲಗೇರಿ, ಬಸರಕೋಡ, ಬಳಗೋಡ, ಹೊನ್ನಿಗನೂರ, ಯರೇಕುರಬನಾಳ, ನೆಲ್ಲೂರ, ಮುಶಿಗೇರಿ, ಪ್ಯಾಟಿ,ವೀರಾಪುರ ಹೀಗೆ.. ಕ್ಷೇತ್ರಾದ್ಯಂತ ಗ್ರಾಮಗಳಲ್ಲಿ ಸಸಿ ನೆಟ್ಟರು.

ಶಾಸಕ ಜಿ.ಎಸ್. ಪಾಟೀಲರು ಜಿಗಳೂರ ಬೃಹತ್ ಕರೆ ಹತ್ತಿರ 13 ಎಕರೆ ಪ್ರದೇಶದಲ್ಲಿ ₹7 ಕೋಟಿ ವೆಚ್ಚದಲ್ಲಿ 2000ಕ್ಕೂ ಹೆಚ್ಚು ವಿವಿಧ ತಳಿಗಳ ಸಸ್ಯಗಳೊಂದಿಗೆ ಸುಂದರ ಉದ್ಯಾನವನ ನಿರ್ಮಿಸಲು ಮುಂದಾಗಿದ್ದಾರೆ. ಅವರಲ್ಲಿನ ಪರಿಸರ ಕಾಳಜಿಯಿಂದ ಪ್ರೇರೇಪಿತರಾದ ನಾವು ಒಂದೇ ದಿನದಲ್ಲಿ 3000ಕ್ಕೂ ಹೆಚ್ಚು ಸಸಿ ನೆಟ್ಟಿದ್ದೇವೆ. ಅವುಗಳನ್ನು ನಾವೇ ಬೆಳೆಸುತ್ತೇವೆ ಎಂದು ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಕ್ಷಯ ಪಾಟೀಲ ಹೇಳಿದರು.

ಶಾಸಕರಾದ ಜಿ.ಎಸ್. ಪಾಟೀಲರು ತಮ್ಮ ಜನ್ಮದಿನವನ್ನು ಸಮಾಜಕ್ಕೆ ಒಳಿತಾಗುವ ರೀತಿಯಲ್ಲಿ ಆಚರಿಸಬೇಕು ಎಂದು ಸೂಚಿಸಿದ್ದರು. ಈ ದಿಸೆಯಲ್ಲಿ ಕ್ಷೇತ್ರದಾದ್ಯಂತ ಸಸಿ ನೆಟ್ಟು, ಅವುಗಳನ್ನು ಬೆಳೆಸುವ ಜವಾಬ್ದಾರಿ ವಹಿಸಿಕೊಂಡಿದ್ದೇವೆ ಯುವ ಕಾಂಗ್ರೆಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ ಕಳಸಣ್ಣವರ ಹೇಳಿದರು.

ಯುವ ಕಾಂಗ್ರೆಸ್ ಸಮಿತಿ ಸದಸ್ಯರು ನನ್ನ ಜನ್ಮದಿನವನ್ನು ಮತಕ್ಷೇತ್ರದಾದ್ಯಂತ ಸಸಿ ನೆಡುವ ಮೂಲಕ ಆಚರಿಸಿದ್ದು ಖುಷಿ ತಂದಿದೆ. ಸಸಿಗಳನ್ನು ನೆಟ್ಟು ಕೈಬಿಡದೇ ಅವುಗಳು ಬೆಳೆದ ಮರವಾಗುವವರೆಗೂ ಬೆಳೆಸಬೇಕು. ಅಂದಾಗ ಸಸಿ ನೆಟ್ಟಿದ್ದು ಸಾರ್ಥಕವಾಗುತ್ತದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

Share this article