ಕನ್ನಡಪ್ರಭ ವಾರ್ತೆ ಹಾಸನ
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹಿಂದೆ ಸುಮಾರು ೩ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯಲಾಗುತ್ತಿತ್ತು. ನಾನೂ ಕೂಡ ೪೦ ಎಕರೆಗಳಲ್ಲಿ ಆಲೂಗಡ್ಡೆ ಬೆಳೆಯುತ್ತಿದ್ದೆ. ಆದರೆ ಮಳೆಯ ಹೆಚ್ಚಳ ಹಾಗೂ ಅಂಗಮಾರಿ ರೋಗದ ಕಾರಣ ಇಂದು ಈ ಪ್ರಮಾಣ ಕೇವಲ ೮ ಸಾವಿರ ಹೆಕ್ಟೇರ್‌ಗೆ ಇಳಿದಿದೆ. ಈಗ ಜಿಲ್ಲೆಯಲ್ಲಿ ೨.೨೦ ಲಕ್ಷ ಹೆಕ್ಟೇರ್‌ನಲ್ಲಿ ಮೆಕ್ಕೆ ಜೋಳ ಬೆಳೆದರೂ ರೈತರಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಈ ಬಾರಿ ಅತಿಯಾದ ಮಳೆಯಿಂದ ಶೇ.೫೦ರಷ್ಟು ಮೆಕ್ಕೆಜೋಳ ಬೆಳೆ ನಷ್ಟವಾಗಿದ್ದು, ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ರೈತ ಪರವಾಗಿ ನಿಲ್ಲಬೇಕಾದ ಸರ್ಕಾರ ಖಾಸಗಿಯವರಿಗೆ ಲಾಭವಾಗುವಂತೆ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದರು. ಕೆಎಂಎಫ್ ಖಾಸಗಿಯವರ ಬಳಿ ೨೯ ಸಾವಿರ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸಿದ್ದು, ರೈತರಿಂದ ಕೇವಲ ೧೦ ಸಾವಿರ ಮೆಟ್ರಿಕ್ ಟನ್ ಮಾತ್ರ ಖರೀದಿಸಲು ಮುಂದಾಗಿದೆ. ನಾನು ಕೆಎಂಎಫ್ ಅಧ್ಯಕ್ಷನಾಗಿದ್ದಾಗ ಖಾಸಗಿಯವರನ್ನು ಹತ್ತಿರಕ್ಕೂ ಸುಳಿಯಲು ಬಿಡಲಿಲ್ಲ. ಖಾಸಗಿ ಪಶು ಆಹಾರ ಘಟಕಗಳನ್ನು ಮುಚ್ಚಿಸಿದ್ದೆ ಎಂದು ನೆನಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸಹಕಾರಿ ಸಚಿವರಾಗಿರುವುದರಿಂದ, ಕ್ವಿಂಟಲ್‌ಗೆ ೨,೪೦೦ ರು. ದರ ನಿಗದಿ ಮಾಡಿ ರೈತರಿಂದಲೇ ಮೆಕ್ಕೆ ಜೋಳ ಹಾಗೂ ಪಶು ಆಹಾರಕ್ಕೆ ಅಗತ್ಯವಿರುವ ವಸ್ತುಗಳನ್ನು ನೇರವಾಗಿ ಖರೀದಿ ಮಾಡಬೇಕು ಎಂದು ಒತ್ತಾಯಿಸಿದರು.ಹಾಸನ ಖಾಸಗಿಯವರಿಂದ ಖರೀದಿಸುವ ಬದಲು ರೈತರಿಂದಲೇ ನೇರವಾಗಿ ಖರೀದಿಸಲು ಏನು ತೊಂದರೆ ಎಂದು ಪ್ರಶ್ನಿಸಿದ ರೇವಣ್ಣ, ಖಾಸಗಿಯವರು ಒಂದೂವರೆ ತಿಂಗಳ ಹಿಂದೆಯೇ ರೈತರಿಂದ ಕ್ವಿಂಟಲ್‌ಗೆ ಸುಮಾರು ೧,೫೦೦ ರು.ಗೆ ಖರೀದಿ ಮಾಡಿ ಈಗ ೨,೫೦೦ ರು.ಗೆ ಕೆಎಂಎಫ್‌ಗೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕೃಷಿ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಏನು ಮಾಡುತ್ತಿದ್ದಾರೆ? ಜಿಲ್ಲಾಧಿಕಾರಿಗಳು ದಿನನಿತ್ಯ ಸಭೆಗಳಲ್ಲಿ ಬ್ಯುಸಿಯಾಗಿದ್ದಾರೆ, ಆದರೆ ಅಭಿವೃದ್ಧಿ ಮಾತ್ರ ಆಗುತ್ತಿಲ್ಲ ಎಂದು ಕಿಡಿಕಾರಿದರು.ಯಗಚಿ, ಕಾಮಸಮುದ್ರ ನಾಲೆ ಕಾಮಗಾರಿ ಪೂರ್ಣಗೊಳ್ಳದ ಕಾರಣ ಸುಮಾರು ೮ ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗುತ್ತಿಲ್ಲ. ಮುಖ್ಯಮಂತ್ರಿ ಈ ವಿಷಯದತ್ತ ಗಮನಹರಿಸಬೇಕು. ಎತ್ತಿನಹೊಳೆ, ಮೇಕೆದಾಟು ಯೋಜನೆಗಳನ್ನು ನಂತರ ಮಾಡಿಕೊಳ್ಳಿ. ಮೊದಲು ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ನೀಡಿ ಎಂದು ಮನವಿ ಮಾಡಿದರು. ಭೂಸ್ವಾಧೀನ ಪ್ರಕ್ರಿಯೆ ಅಪೂರ್ಣವಾಗಿರುವುದರಿಂದ ರೈತರಿಗೆ ತೊಂದರೆ ಉಂಟಾಗಿದ್ದು, ಅದಕ್ಕಾಗಿ ಅಗತ್ಯ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣಗಳು ಮತ್ತೆ ಹೆಚ್ಚುತ್ತಿದ್ದು, ಕಳೆದ ಎರಡು ದಿನಗಳ ಹಿಂದೆ ಇಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಟೀಚರ್ ಹೃದ್ರೋಗಿ ಮತ್ತು ಇನ್ನೊಬ್ಬರು ಪರಮೇಶ್ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಹಿಮ್ಸ್ ಆಸ್ಪತ್ರೆಯಲ್ಲಿ ತಕ್ಷಣ ಕಾರ್ಡಿಯಾಲಜಿ ಘಟಕ ಆರಂಭಿಸಬೇಕು ಎಂದು ರೇವಣ್ಣ ಆಗ್ರಹಿಸಿದರು.