ಮನೆ ಹಂಚಿಕೆ ಪತ್ರ ವಿತರಣೆ
ಸೂರು ಕಳೆದುಕೊಂಡು ಬೀದಿಗೆ ಬಿದ್ದಿದ್ದ ಮಹಿಳೆಗೆ ದೀಪಾವಳಿ ಉಡುಗೊರೆಯಾಗಿ ಶಾಸಕ ಎಚ್.ಕೆ. ಪಾಟೀಲ ಸೋಮವಾರ ನಗರಸಭೆ ಆವರಣದಲ್ಲಿ ಮನೆ ಹಂಚಿಕೆ ಪತ್ರ ವಿತರಿಸಿದರು. ನಗರದ ಸ್ಟೇಷನ್ ರಸ್ತೆಯ ರೈಲ್ವೆ ಮೇಲ್ಸೇತುವೆ ಕೆಳಗೆ ಖೈರುನ್ನಿಸಾ ಎಸ್. ಶೇಖಅತ್ತಾರ ಎಂಬುವರು ಗುಡಿಸಲು ಕಟ್ಟಿಕೊಂಡು ಕಳೆದ 65 ವರ್ಷಗಳಿಂದ ವಾಸಿಸುತ್ತಿದ್ದರು. ಆದರೆ ಸೇತುವೆ ಶಿಥಿಲಗೊಂಡಿದ್ದರಿಂದ ರೈಲ್ವೆ ಇಲಾಖೆಯವರು ಇತ್ತೀಚೆಗೆ ಗುಡಿಸಲನ್ನು ತೆರವುಗೊಳಿಸಿದ್ದರು. ಇದರಿಂದಾಗಿ ಆಶ್ರಯವಿಲ್ಲದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಈ ಹಿಂದೆ ಮನೆ ಇಲ್ಲದವರಿಗೆ ಮನೆ (2022) ಯೋಜನೆಯಡಿ ಅರ್ಜಿ ಸಲ್ಲಿಸಿದ್ದರೂ ಅವರಿಗೆ ಮನೆ ಮಂಜೂರಾಗಿರಲಿಲ್ಲ.
ಈ ವಿಷಯ ಗಮನಕ್ಕೆ ಬರುತ್ತಿದ್ದಂತೆಯೇ ಸ್ಪಂದಿಸಿದ ಶಾಸಕರು, ಪ್ರಧಾನಮಂತ್ರಿ ಆವಾಸ್ ಯೋಜನೆಯ (3630 ಜಿ+1 ಗುಂಪು ಮನೆ ಯೋಜನೆ) ಅಡಿ ಹಂಚಿಕೆಗೆ ಬಾಕಿ ಉಳಿದಿದ್ದ 760 ಮನೆಗಳ ಪೈಕಿ ಬ್ಲಾಕ್ ನಂ. 32ರ ಮೊದಲ ಮಹಡಿಯ ಮನೆ ನಂ. 01 ಅನ್ನು ಖೈರುನ್ನಿಸಾ ಅವರಿಗೆ ಮಂಜೂರು ಮಾಡಿಸಿ, ಹಂಚಿಕೆ ಪತ್ರವನ್ನು ಹಸ್ತಾಂತರಿಸಿದರು.ಈ ಸಂದರ್ಭ ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ನಗರಸಭೆ ಸದಸ್ಯರಾದ ಕೃಷ್ಣಾ ಪರಾಪೂರ, ಬರಕತ್‌ಅಲಿ ಮುಲ್ಲಾ, ಇಮ್ತಿಯಾಜ್ ಶಿರಹಟ್ಟಿ, ಖಮರಸುಲ್ತಾನ್ ನಮಾಜಿ, ಪರ್ವೀನಬಾನು ಮುಲ್ಲಾ, ಜಿಲ್ಲಾ ಕೆಡಿಪಿ ಸದಸ್ಯ ಎಸ್.ಎನ್. ಬಳ್ಳಾರಿ, ಸಯ್ಯದ್ ಖಾಲಿದ ಕೊಪ್ಪಳ ಹಾಗೂ ಪೌರಾಯುಕ್ತ ರಾಜಾರಾಮ್ ಪವಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.