ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಮುಂದಾಗಿ: ಆಸ್ಪತ್ರೆ ಸಿಬ್ಬಂದಿಗೆ ಶಾಸಕ ಎಚ್.ಕೆ.ಸುರೇಶ್ ಸಲಹೆ

KannadaprabhaNewsNetwork |  
Published : Nov 19, 2025, 12:30 AM IST
18ಎಚ್ಎಸ್ಎನ್7 : ಬೇಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಸಮಿತಿಯ ಸಭೆಯನ್ನು   ಶಾಸಕ ಸುರೇಶ್ ರವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.  | Kannada Prabha

ಸಾರಾಂಶ

ರಾಜ್ಯಮಟ್ಟದ ಗುಣಮಟ್ಟದ ಆಸ್ಪತ್ರೆಗಳ ಸಮೀಕ್ಷೆಯಲ್ಲಿ ಬೇಲೂರು ಸರ್ಕಾರಿ ಆಸ್ಪತ್ರೆ ಉನ್ನತ ಮಟ್ಟದಲ್ಲಿ ಆಯ್ಕೆ ಆಗಿದೆ. ಅದೇ ರೀತಿ ಮುಂದೆ ರಾಷ್ಟ್ರೀಯ ಮಟ್ಟದಲ್ಲೂ ಆಯ್ಕೆಯಾಗಲು ಹಲವು ಮಾನದಂಡಗಳಿದ್ದು ಶಾಸಕರು ಹಾಗೂ ಸಮಿತಿಯ ಸದಸ್ಯರು ಸಹಕರಿಸಬೇಕು.

ಕನ್ನಡಪ್ರಭ ವಾರ್ತೆ ಬೇಲೂರು

ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ವೈದ್ಯರು ನಗು ಮುಖದ ಸೇವೆಯ ಜೊತೆಗೆ ಉತ್ತಮ ಚಿಕಿತ್ಸೆಯನ್ನು ನೀಡಲು ಮುಂದಾಗಬೇಕು ಎಂದು ಶಾಸಕ ಎಚ್.ಕೆ ಸುರೇಶ್ ವೈದ್ಯ ಸಿಬ್ಬಂದಿಗೆ ಸಲಹೆ ನೀಡಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿನ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಮಾತನಾಡಿ, ನಮ್ಮ ತಾಲೂಕು ಮಲೆನಾಡು, ಅರೆ ಮಲೆನಾಡು ಹಾಗೂ ಬಯಲು ಪ್ರದೇಶದಿಂದ ಕೂಡಿದ್ದು, ಕೂಲಿ ಕಾರ್ಮಿಕರು ಮತ್ತು ಮಧ್ಯಮ ವರ್ಗದವರು ಹೆಚ್ಚಾಗಿದ್ದಾರೆ. ಕಾಯಿಲೆ ಬಂದಾಗ ಚಿಕಿತ್ಸೆಗೆಂದು ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ. ಚಳಿಗಾಲದ ಸಂದರ್ಭದಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗಿರುತ್ತವೆ. ಇಂತಹ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರೋಗಿಗಳಿಗೆ ಅವಶ್ಯಕತೆ ಇರುವ ಔಷಧಿಗಳನ್ನು ಶೇಖರಣೆ ಮಾಡಿ ಇಡಬೇಕು. ಜ್ವರ, ತಲೆ ನೋವು, ಹೊಟ್ಟೆ ನೋವಿಗೆ ಒಂದೇ ಮಾತ್ರೆ ಕೊಡಬೇಡಿ. ಆಸ್ಪತ್ರೆಗೆ ರೋಗಿ ಬಂದಾಗ ಅವರಿಗೆ ವಿಶ್ವಾಸ ತುಂಬುವ ಮಾತುಗಳನ್ನು ಆಡಬೇಕು. ಅದು ಬಿಟ್ಟು ತಮ್ಮ ಕೈಯಲ್ಲಿ ಆಗಲ್ಲ ಎಂದು ಜಿಲ್ಲಾ ಕೇಂದ್ರಗಳಿಗೆ ರೋಗಿಗಳನ್ನು ಕಳಿಸಬೇಡಿ ಎಂದರು.

ಶವ ಪರೀಕ್ಷೆಗೆ ವಿಳಂಬ ಬೇಡ:

ಇತ್ತೀಚೆಗೆ ತಾಲೂಕಿನಲ್ಲಿ ಆತ್ಮಹತ್ಯೆ, ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಮರಣೋತ್ತರ ಪರೀಕ್ಷೆಗಾಗಿ ಸಂಬಂಧಿಕರು ನೋವು, ದುಃಖಭರಿತರಾಗಿ ಸರ್ಕಾರಿ ಆಸ್ಪತ್ರೆಗೆ ಶವವನ್ನು ತರುತ್ತಾರೆ. ಈ ಸಂದರ್ಭದಲ್ಲಿ ಕರ್ತವ್ಯ ನಿರತ ವೈದ್ಯರು ಸಂಜೆ ಆಯ್ತು, ಸಿಬ್ಬಂದಿ ಇಲ್ಲಾ, ಪೊಲೀಸರ ವರದಿ ಬಂದಿಲ್ಲ ಎಂದು ಕಾಯಿಸಬೇಡಿ. ಮೊದಲೇ ದುಃಖದಲ್ಲಿರುವ ಕುಟುಂಬಕ್ಕೇ ಇಡೀ ದಿನ ಶವಾಗಾರದ ಮುಂದೆ ಕಾಯುವ ಕೆಲಸ ಕೊಡಬೇಡಿ. ಬೇಗ ಶವ ಪರೀಕ್ಷೆ ಮುಗಿಸಿ ಅಂತ್ಯಸಂಸ್ಕಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ರಕ್ಷಾ ಸಮಿತಿ ಸದಸ್ಯ ಚಂದ್ರಶೇಖರ್ ಮಾತನಾಡಿ, ಸಮಿತಿ ಸಭೆಯನ್ನು ಮೂರು ಬಾರಿ ಮುಂದೂಡಲಾಗಿದೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಸಮಯ ನಿಗದಿ ಮಾಡಬೇಡಿ. ರೋಗಿಗಳ ಆರೋಗ್ಯದ ದೃಷ್ಟಿಯಿಂದ ಕೆಲಸ ಮಾಡಬೇಕು ಎಂದರು.

ಸದಸ್ಯರಾದ ದೇವರಾಜು, ಹರ್ಷ, ರಘು ಮಾತನಾಡಿ, ಇಲ್ಲಿ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿದ್ದ ಜನೌಷಧಿ ಕೇಂದ್ರವನ್ನು ಎರಡು ಕಿಮೀ ದೂರದ ನೆಹರು ನಗರಕ್ಕೆ ಸ್ಥಳಾಂತರ ಮಾಡಲಾಗಿದೆ . ಇದರಿಂದ ರೋಗಿಗಳು ದುಬಾರಿ ಹಣ ಕೊಟ್ಟು ಔಷಧಿ ಖರೀದಿ ಮಾಡುವಂತಾಗಿದೆ. ಕೂಡಲೇ ಜನೌಷಧಿ ಕೇಂದ್ರವನ್ನು ಸರ್ಕಾರಿ ಆಸ್ಪತ್ರೆ ಸಮೀಪದಲ್ಲಿ ಆರಂಭಿಸುವಂತೆ ಶಾಸಕರು ಮುಂದಾಗಬೇಕು ಎಂದು ಒತ್ತಾಯಿಸಿದರು.

ಆಸ್ಪತ್ರೆ ವೈದ್ಯಾಧಿಕಾರಿ ಡಾ. ಜಯಲಕ್ಷ್ಮೀ ಮಾತನಾಡಿ, ರಾಜ್ಯಮಟ್ಟದ ಗುಣಮಟ್ಟದ ಆಸ್ಪತ್ರೆಗಳ ಸಮೀಕ್ಷೆಯಲ್ಲಿ ಬೇಲೂರು ಸರ್ಕಾರಿ ಆಸ್ಪತ್ರೆ ಉನ್ನತ ಮಟ್ಟದಲ್ಲಿ ಆಯ್ಕೆ ಆಗಿದೆ. ಅದೇ ರೀತಿ ಮುಂದೆ ರಾಷ್ಟ್ರೀಯ ಮಟ್ಟದಲ್ಲೂ ಆಯ್ಕೆಯಾಗಲು ಹಲವು ಮಾನದಂಡಗಳಿದ್ದು ಶಾಸಕರು ಹಾಗೂ ಸಮಿತಿಯ ಸದಸ್ಯರು ಸಹಕರಿಸಬೇಕು ಎಂದರು.

ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ರಾಜೇಶ್, ತಹಸೀಲ್ದಾರ್ ಶ್ರೀಧರ್ ಕಂಕನವಾಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ, ಪಿಡಬ್ಲ್ಯೂಡಿ ಎಇಇ ಕೃಷ್ಣೇಗೌಡ, ತಾಲೂಕು ಆಡಳಿತ ಅಧಿಕಾರಿ ಡಾ. ವಿಜಯ್ , ರಕ್ಷಾ ಸಮಿತಿಯ ಸದಸ್ಯರಾದ ಬಿ.ಎನ್. ಚಂದ್ರಶೇಖರ್, ದೇವರಾಜು, ಕೋಳಿ ರಘು, ಹರ್ಷ, ರೇಣುಕಯ್ಯ , ಸುಧಾ, ಕೃಷ್ಣೇಗೌಡ, ರವಿ, ಮಮತಾ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ